ಗುರುವಾರ , ಜನವರಿ 23, 2020
23 °C
ಶ್ರೀರಂಗನಾಥನ ದೇವಾಲಯದಲ್ಲಿ ಮುಂದೆ ಭಕ್ತರ ಮಹಾಸಾಗರ

ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಬುಧವಾರ ಸಂಜೆ ಮಕರ ಸಂಕ್ರಾಂತಿ ನಿಮಿತ್ತ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಭಕ್ತರ ಮನ ಸೂರೆಗೊಂಡಿತು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಸಹಸ್ರಾರು ಹಣತೆಗಳು ಬೆಳಗಿದವು. ಭಕ್ತರು ದೀಪದಿಂದ ದೀಪ ಬೆಳಗಿ, ಎಣ್ಣೆ ಎರೆದು ಭಕ್ತಿ, ಭಾವ ಪ್ರದರ್ಶಿಸಿದರು. ದೇವಾಲಯದ ಮುಂದೆ, 300 ಮೀಟರ್‌ ಉದ್ದಕ್ಕೆ ಜೋಡಿಸಿದ್ದ ದೀಪಗಳ ಬೆಳಕಿನಲ್ಲಿ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯ ಕಂಗೊಳಿಸಿತು. ನೆಲ ಮತ್ತು ದಬ್ಬೆಗಳ ಮೇಲೆ 16 ಸಾಲುಗಳಲ್ಲಿ ಜೋಡಿಸಿದ್ದ ದೀಪಗಳು ಪರ್ಲಾಂಗು ದೂರದವರೆಗೂ ಬೆಳಕು ಬೀರಿದವು.

ಲಕ್ಷ್ಮೀನರಸಿಂಹಸ್ವಾಮಿ, ಪೇಟೆ ನಾರಾಯಣಸ್ವಾಮಿ ದೇವಾಲಯ ಹಾಗೂ ಸೋಪಾನಕಟ್ಟೆ ಬಳಿಯೂ ದೀಪಗಳು ಬೆಳಗಿದವು. ಮಣ್ಣಿನ ಹಣತೆಗಳ ಜತೆಗೆ ವಿದ್ಯುತ್‌ ದೀಪಗಳಿಂದ ದೇವಾಲಯ ಮತ್ತು ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.

ಶಾಸಕ ರವೀಂದ್ರ ಶ್ರೀಕಂಠಯ್ಯ ಗೋಧೂಳಿ ಲಗ್ನದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌ ನೇತೃತ್ವದಲ್ಲಿ ದೇವಾಲಯದ ಮುಂದೆ ಹೋಮ ಇತರ ಧಾರ್ಮಿಕ ವಿಧಿ, ವಿಧಾನಗಳು ನಡೆದವು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಬ್ರಹ್ಮಾಂಡ ಗುರೂಜಿ ಇತರ ಪ್ರಮುಖರು ಕೂಡ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ಚೈತನ್ಯ ದಳ ಹಾಗೂ ಲಕ್ಷ ದೀಪೋತ್ಸವ ಆಚರಣಾ ಸಮಿತಿ ಸದಸ್ಯರು ದೀಪಗಳಿಗೆ ಎಣ್ಣೆ ಎರೆದರು.

ದೀಪೋತ್ಸವ ಆರಂಭವಾದ ಬೆನ್ನಲ್ಲೇ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾರ ತೆರೆಯಲಾಯಿತು. ಶ್ರೀರಂಗನಾಥನಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಮಂದಿ ದೀಪೋತ್ಸವವನ್ನು ಕಣ್ತುಂಬಿಕೊಂಡರು. ಮಂಡ್ಯ, ಮೈಸೂರು ಇತರೆಡೆಗಳಿಂದಲೂ ಜನರು ಇಲ್ಲಿಗೆ ಬಂದಿದ್ದರು. ಭಕ್ತರು ಹೆಚ್ಚು ಬಂದಿದ್ದರಿಂದ ದೇಗುಲದ ಪ್ರವೇಶ ದ್ವಾರ ಹಾಗೂ ಗಂಡಭೇರುಂಡ ವೃತ್ತದ ಬಳಿ ನೂಕು ನುಗ್ಗಲು ಉಂಟಾಯಿತು. ಮುಖ್ಯ ಬೀದಿಯಲ್ಲಿ ಜನದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು