ಮಂಡ್ಯ: ‘ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ಇದೆ. ಯಾವುದೇ ಪಕ್ಷದೊಂದಿಗೂ ಮೈತ್ರಿ ಪ್ರಸ್ತಾವ ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಾಕಷ್ಟು ಅನುಭವಿಸಿದ್ದೇವೆ. ಕಾಂಗ್ರೆಸ್‌ನವರು ಕತ್ತು ಕೊಯ್ಯುವ ಕೆಲಸ ಮಾಡಿದರು. ಅದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಬಲಿಪಶುವಾಗಬೇಕಾಯಿತು. 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವುದಿಲ್ಲ. ಆದರೆ, 4–5 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ತಿಳಿಸಿದರು.
‘ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿರುವುದರಿಂದ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ. ಕಳೆದ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲು ತಯಾರಿರಲಿಲ್ಲ, ಆದರೆ ಶಾಸಕರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ತಲೆ ಕೊಡಬೇಕಾಯಿತು’ ಎಂದರು.
‘5 ವರ್ಷ ಯಾವುದೇ ಚುನಾವಣೆ ಬೇಡ ಎಂದು ನಿಖಿಲ್‌ಗೆ ಹೇಳಿದ್ದೇನೆ. ಅವನು ಸ್ಪರ್ಧಿಸಿದ್ದ 2 ಚುನಾವಣೆಯಲ್ಲೂ ಕುತಂತ್ರಕ್ಕೆ ಬಲಿಯಾಗಿದ್ದಾನೆ. ದೇವರು ಕೊಟ್ಟಿರುವ ಸಿನಿಮಾ ಕಲೆಯಲ್ಲೇ ಮುಂದುವರಿಯುತ್ತಾನೆ. ಅವನಿಗಾಗಿ ಮೂರು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ’ ಎಂದರು.
‘ಕಾವೇರಿ ವಿಷಯವನ್ನು ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ನೀರು ನಿರ್ವಹಣಾ ಮಂಡಳಿಯವರು ಕೊಡಿ ಎಂದೊಡನೆ ನೀರು ಬಿಡುಗಡೆ ಮಾಡಿತು. ಆ ಬಗ್ಗೆ ನಮ್ಮ ಕಡೆಯವರು ಪ್ರತಿಭಟಿಸಬೇಕಾಗಿತ್ತು. ಬೆಳೆ ಬೆಳೆಯಬೇಡಿ ನಷ್ಟ ಪರಿಹಾರ ಕೊಡುತ್ತೇವೆ ಎಂದು ತಕ್ಷಣವೇ ಘೋಷಿಸಿ, ಸರ್ಕಾರ ರೈತರಿಗೆ 6ನೇ ಗ್ಯಾರಂಟಿ ಕೊಡಬೇಕು’ ಎಂದು ಒತ್ತಾಯಿಸಿದರು.
‘ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಬರೆದಿರುವ ಪತ್ರದ ಸಾರಾಂಶದ ಬಗ್ಗೆ ತನಿಖೆಯಾಗಬೇಕು. ಕೃಷಿ ಇಲಾಖೆಯಲ್ಲಿ ಜೆಡಿ, ಎಡಿ ಹಂತದಲ್ಲಿ ಲಂಚ ನಿಗದಿಯಾಗಿದ್ದು ಆ ಬಗ್ಗೆ ಯಾವ ಅಧಿಕಾರಿಯೂ ಬಹಿರಂಗವಾಗಿ ಹೇಳುವುದಿಲ್ಲ. ಹೀಗಾಗಿ ಪತ್ರದಲ್ಲಿರುವ ವಿಷಯದ ಬಗ್ಗೆ ತನಿಖೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.