ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ‘ನಾಟಿ’ ವಿರುದ್ಧ ‘ಹೈಬ್ರಿಡ್‌’ ಅಭ್ಯರ್ಥಿ?

ಸಂಸದೆ ಸುಮಲತಾ ಪಟ್ಟು, ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟು
Published 9 ಮಾರ್ಚ್ 2024, 22:58 IST
Last Updated 9 ಮಾರ್ಚ್ 2024, 22:58 IST
ಅಕ್ಷರ ಗಾತ್ರ

ಮಂಡ್ಯ: ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಉದ್ಯಮಿಯಾಗಿ ಬೆಳೆದಿರುವ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (ವೆಂಕಟರಮಣೇಗೌಡ) ಸ್ಥಳೀಯವಾಗಿ ‘ನಾಟಿ ಅಭ್ಯರ್ಥಿ’ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ‘ನಾಟಿ’ ವಿರುದ್ಧ ಬಿಜೆಪಿ– ಜೆಡಿಎಸ್‌ ಹುರಿಯಾಳಾಗಿ ‘ಫಾರಂ’ ಅಭ್ಯರ್ಥಿ ಬರುವರೋ, ‘ಹೈಬ್ರಿಡ್‌’ ಅಭ್ಯರ್ಥಿ ಬರುವರೋ ಎಂಬ ಚರ್ಚೆ ಈಗ ಜಿಲ್ಲೆಯಲ್ಲಿ ಆರಂಭವಾಗಿದೆ.

ಸ್ಟಾರ್‌ ಚಂದ್ರು ಹೆಸರು ಮುನ್ನೆಲೆಗೆ ಬರುವ ಮೊದಲು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ‘ನಾಟಿ ತಳಿಯೊಂದನ್ನು ಕಣಕ್ಕಿಳಿಸಿ ಗೆಲ್ಲಿಸುತ್ತೇವೆ’ ಎಂದಿದ್ದರು. ಅಲ್ಲಿಂದ ಆರಂಭವಾದ ‘ನಾಟಿ’ ಹೆಸರು ಈಗ ‘ಫಾರಂ’, ‘ಹೈಬ್ರಿಡ್‌’ವರೆಗೂ ಬಂದಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಮೊದಲ ಪಟ್ಟಿಯಲ್ಲೇ ಘೋಷಣೆಯಾದ ಬೆನ್ನಲ್ಲೇ ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

‘ದಳಪತಿಗಳಿಗೆ ಶಕ್ತಿ’ಯಾಗಿರುವ ಸಕ್ಕರೆ ಜಿಲ್ಲೆಯನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟುಕೊಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಸಂಸದೆ ಸುಮಲತಾ ಅವರು ಪ್ರಧಾನಿ ಸೇರಿದಂತೆ ಬಿಜೆಪಿ ವರಿಷ್ಠರ ಮಟ್ಟದಲ್ಲೇ ಟಿಕೆಟ್‌ಗಾಗಿ ಪಟ್ಟುಹಿಡಿದಿರುವುದರಿಂದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.

ಜಿಲ್ಲೆಯ ಸೊಸೆಯಾಗಿದ್ದರೂ ಸುಮಲತಾ ಅವರು ಸ್ಥಳೀಯವಾಗಿ ನೆಲೆಸದ ಕಾರಣ, ಕೆಲವರು ಅವರನ್ನು ‘ಫಾರಂ ಅಭ್ಯರ್ಥಿ’ ಎಂದು ಬಣ್ಣಿಸುತ್ತಾರೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸಿದ್ದರಾಮಯ್ಯ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಹೈಬ್ರಿಡ್‌ ಅಭ್ಯರ್ಥಿ ಯಾರು?: ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಸ್ಥಳೀಯ ಮುಖಂಡರೆಲ್ಲರೂ ಸಭೆ ಸೇರಿ ‘ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮೂವರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು’ ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡಿದ್ದರು.

ಆದರೆ ‘ನಿಖಿಲ್‌ ಸ್ಪರ್ಧಿಸುವುದಿಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂವರಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ಥಳೀಯ ಹಿನ್ನೆಲೆ ಹೊಂದಿರದ ಕಾರಣ ‘ಹೈಬ್ರಿಡ್‌ ಅಭ್ಯರ್ಥಿ’ಯಾಗುತ್ತಾರೆ ಎಂದೇ ಹೇಳಲಾಗುತ್ತಿದೆ.

ಇನ್ನೊಂದೆಡೆ, ‘ಮಾಜಿ ಶಾಸಕರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ’ ಎಂಬ ಮಾತುಗಳೂ ಹರಿದಾಡುತ್ತಿವೆ. ಸ್ಥಳೀಯರಾದ ಇವರು ‘ಪಕ್ಕಾ ನಾಟಿ’ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆ ಇದೆ.

‘ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ಹೊರಗಿನವರೇ ಆಗಿರುವ ಕಾರಣ ನಾಟಿ, ಫಾರಂ, ಹೈಬ್ರಿಡ್‌ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರತಿ ಚುನಾವಣೆಯಲ್ಲೂ ಮಂಡ್ಯ ಜಿಲ್ಲೆ ಇಂತಹ ಭಿನ್ನ ಚರ್ಚೆಗಳಿಂದಲೇ ಗಮನ ಸೆಳೆಯುತ್ತದೆ’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಹೇಳಿದರು.

ಸುಮಲತಾ
ಸುಮಲತಾ
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ

‘ಹಣದ ಅಭ್ಯರ್ಥಿ ಚಂದ್ರು’

ವಿರುದ್ಧ ಹೋರಾಟ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ಡಾ.ಎಚ್‌.ಎನ್‌.ರವೀಂದ್ರ ಸ್ಟಾರ್‌ ಚಂದ್ರು ಅವರನ್ನು ‘ಹಣದ ಅಭ್ಯರ್ಥಿ’ ಎಂದು ಕರೆದಿದ್ದು ಅವರ ವಿರುದ್ಧ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ‘ಪ್ರತಿ ಚುನಾವಣೆಗೂ ಹಣವಂತರಿಗೆ ಮಣೆ ಹಾಕುವುದಾದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಿರಿಯ ಮುಖಂಡರು ಎಲ್ಲಿಗೆ ಹೋಗಬೇಕು’ ಎಂದು ರವೀಂದ್ರ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT