ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಎಸ್‌ಕೆಯಲ್ಲಿ ದಲ್ಲಾಳಿಗಳ ಹಾವಳಿ, ರೈತರಿಗೆ ನಷ್ಟ: ಡಾ.ಎಚ್‌.ಎನ್‌.ರವೀಂದ್ರ

ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ನಿವೃತ್ತ ನೌಕರರು, ಸಮಸ್ಯೆ ಸರಿಪಡಿಸಲು ಒತ್ತಾಯ
Last Updated 27 ಅಕ್ಟೋಬರ್ 2021, 12:50 IST
ಅಕ್ಷರ ಗಾತ್ರ

ಮಂಡ್ಯ: ‘ನಿರಾಣಿ ಷುಗರ್ಸ್‌ ಗುತ್ತಿಗೆ ಪಡೆದಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ದಳ್ಳಾಳಿಗಳು ಕಾರ್ಯನಿರ್ವಹಿಸುತ್ತಿದ್ದು ಇದರಿಂದ ರೈತರಿಗೆ ನಷ್ಟವಾಗುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಆರೋಪಿಸಿದರು.

ಪಿಎಸ್‌ಎಸ್‌ಕೆ ನಿವೃತ್ತ ನೌಕರರೊಂದಿಗೆ ಬುಧವಾರ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರನ್ನು ಭೇಟಿ ಮಾಡಿ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಕಾರ್ಖಾನೆಯನ್ನು ಖಾಸಗಿ ಗುತ್ತಿಗೆಗೆ ನೀಡಿರುವ ಪರಿಣಾಮ ದಳ್ಳಾಳಿಗಳು ಕಾರ್ಯನಿರ್ವಹಿಸುವಂತಾಗಿದೆ. ಇದರಿಂದ ರೈತರು ಪ್ರತಿ ಟನ್‌ ಕಬ್ಬಿಗೆ ₹400 ರಿಂದ ₹700 ರವರೆಗೆ ನಷ್ಟ ಅನುಭವಿಸುವಂತಾಗಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಿಂದ ನಿವೃತ್ತ ನೌಕರರಿಗೆ ಬರಬೇಕಾದ ಸಂಬಳ, ಪಿ.ಎಫ್, ಗ್ರಾಚ್ಯುಟಿ ಹಾಗೂ 6ನೇ ವೇತನದ ಬಾಕಿ ಹಣವನ್ನು ಪಾವತಿಸದೇ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿ ಎರಡು ವರ್ಷವಾದರೂ ಸರ್ಕಾರಕ್ಕೆ ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳದೇ ಇರುವುದರಿಂದ ಕಾರ್ಖಾನೆಯ ನಿವೃತ್ತ ನೌಕರರು ಸಂಕಷ್ಟ ಎದುರಿಸುತ್ತಿದ್ದಾರೆ. ಮುರುಗೇಶ್ ನಿರಾಣಿ ಉದ್ಯಮಿ ಆಗಿರುವುದರ ಜೊತೆಗೆ ಒಬ್ಬ ಸಚಿವರೂ ಆಗಿದ್ದು, ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ರೈತರಿಗೆ, ಕಾರ್ಮಿಕರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

‘ನಿರಾಣಿ ಷುಗರ್ಸ್‌ ಹಣ ಕಟ್ಟದಿರುವುದರಿಂದ ನಿವೃತ್ತ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಕ್ಕಿಲ್ಲ. ಕೋವಿಡ್‌ ಸಂಕಷ್ಟ ಸಮಯದಲ್ಲಿ ನೌಕರರು ಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆ ಕಾರ್ಮಿಕರ ನೆರವಿಗೆ ಬರಬೇಕು. ಇದೆಲ್ಲವನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಅವರು ಸ್ಪಂದಿಸುವ ವಿಶ್ವಾಸವಿದೆ’ ಎಂದರು.

ಕಾಂಗ್ರೆಸ್‌ ಯುವ ಮುಖಂಡ ಸೋಮು ಸ್ವರ್ಣಸಂದ್ರ ಮಾತನಾಡಿ ‘ಕಾರ್ಖಾನೆಯನ್ನು ಖಾಸಗಿ ಗುತ್ತಿಗೆ ವಹಿಸಿದ ಪರಿಣಾಮ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿವೆ. ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ್ದಾರೆ, ಮೈಷುಗರ್‌ ಕಾರ್ಖಾನೆಯನ್ನೂ ಖಾಸಗಿ ಗುತ್ತಿಗೆ ನೀಡಿದರೆ ಅಲ್ಲೂ ಇಂಥದ್ದೇ ಸಮಸ್ಯೆ ಎದುರಾಗುತ್ತದೆ. ಇನ್ನಾದರೂ ಜಿಲ್ಲೆಯ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು. ಪಿಎಸ್‌ಎಸ್‌ಕೆ ಕಾರ್ಖಾನೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ತಪ್ಪಿದರೆ ಹೋರಾಟ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಂ.ಬಿ.ನಾಗಣ್ಣಗೌಡ, ನವೀನ್ ಕುಮಾರ್, ಹರ್ಷ, ಪಿಎಸ್‌ಎಸ್‌ಕೆ ನಿವೃತ್ತ ನೌಕರರಾದ ಸ್ವಾಮಿಗೌಡ, ಗೋವಿಂದಯ್ಯ, ಬಿ.ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT