ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದ ಬೀನ್ಸ್‌ ಬೆಳೆದು ಲಾಭ ಗಳಿಸಿದ ಯುವಕ

ಕೃಷಿಯಲ್ಲಿ ಖುಷಿ ಕಂಡ ಸ್ನಾತಕೋತ್ತರ ಪದವೀಧರ, ರೈತರಿಗೆ ಮಾದರಿಯಾದ ದಿಲೀಪ್‌
Last Updated 31 ಅಕ್ಟೋಬರ್ 2019, 10:53 IST
ಅಕ್ಷರ ಗಾತ್ರ

ಮಳವಳ್ಳಿ: ಮಂಡ್ಯ ಜಿಲ್ಲೆ ಎಂದರೆ ಕಬ್ಬು, ಭತ್ತಕ್ಕೆ ಪ್ರಸಿದ್ಧಿ ಪಡೆದಿದೆ. ಆದರೆ ಸಕ್ಕರೆ ಕಾರ್ಖಾನೆಗಳ ಸ್ಥಗಿತ, ಬೆಲ್ಲ, ಕಬ್ಬಿನ ಬೆಲೆ ಕುಸಿತದ ನಡುವೆ ರೈತರು ಸದಾ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನ ತಳಗವಾದಿ ಗ್ರಾಮದ ಸ್ನಾತಕೋತ್ತರ ಪದವೀಧರ ದಿಲೀಪ್ ಕುಮಾರ್ಉದ್ದನೆ ಬೀನ್ಸ್‌ (ಫೈರೊ) ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.

ತಳಗವಾದಿ ಗ್ರಾಮದ ಕೆ.ಚೌಡಯ್ಯ ಅವರ ಪುತ್ರ ದಿಲೀಪ್‌ ಕುಮಾರ್‌ (ವಿಶ್ವ) ಎಂಎಸ್‌ಡಬ್ಲ್ಯು ಪದವಿ ಪಡೆದು ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆಸಕ್ತಿ ವ್ಯವಸಾಯದ ಕಡೆಗೆ ಹರಿದ ಕಾರಣ ತಿಂಗಳಿಗೆ ₹ 30 ಸಾವಿರ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ನೀಡಿದರು. ಊರಿಗೆ ಮರಳಿದ ಅವರು ಅಪ್ಪ ಹಾಕಿದ ಆಲದ ಮರದಂತೆ ಎಂದಿನಂತೆ ಕಬ್ಬು ಬೆಳೆಯನ್ನೇ ಹಾಕಿದ್ದರು. ಆದರೆ ವರ್ಷದವರೆಗೂ ಹಣಕ್ಕಾಗಿ ಕಾಯುವ ಮತ್ತು ನಿಗದಿತ ಸಮಯಕ್ಕೆ ಕಬ್ಬು ಕಟಾವು ಆಗದ ಕಾರಣ ಅವರು ಬೇಸರಿಸಿಕೊಂಡರು.

ನಂತರ ಅವರು ಕಬ್ಬು, ಭತ್ತ ಬಿಟ್ಟು ಪರ್ಯಾಯ ಬೆಳೆ ಬೆಳೆಯುವತ್ತ ತಮ್ಮ ಗಮನ ಕೇಂದ್ರೀಕರಿಸಿದರು. ತೋಟಗಾರಿಕೆಯ ಅಲ್ಪಾವಧಿ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಅವರು ಮೊದಲು ಕಲ್ಲಂಗಡಿ ಹಾಕಿದರು. ಅದರಲ್ಲಿ ಲಾಭ ಕಂಡ ಅವರು, ಬೇಡಿಕೆಗೆ ತಕ್ಕಂತೆ ಸೌತೇಕಾಯಿ, ಪಪ್ಪಾಯ, ಚಂಡು ಹೂ ಬೆಳೆದು ಯಶಸ್ಸು ಕಂಡರು. ನಂತರ ಉದ್ದನೆಯ ಬೀನ್ಸ್‌ ಬೆಳೆಯಲು ನಿರ್ಧರಿಸಿದರು.

ಕೇವಲ 3 ತಿಂಗಳ ಬೆಳೆಯಾದ ಬೀನ್ಸ್‌ ಅವರಿಗೆ ಆರ್ಥಿವಾಗಿ ಲಾಭ ತಂದು ಕೊಟ್ಟಿದೆ. ದಿನ ಬಿಟ್ಟು ದಿನ ಸುಮಾರು ಒಂದೂವರೆ ತಿಂಗಳವರೆಗೆ ಒಂದು ಟನ್ ಬೀನ್ಸ್‌ ಸಿಗಲಿದ್ದು, ಮೂರು ತಿಂಗಳಲ್ಲಿ ₹ 2 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಕೇರಳ ಹಾಗೂ ತಮಿಳುನಾಡಿನಲ್ಲಿ ಬೀನ್ಸ್‌ಗೆ ಅಪಾರ ಬೇಡಿಕೆ ಇದೆ. ಓಣಂ ಹಬ್ಬದ ದಿನಗಳಲ್ಲಿ ಪ್ರತಿ ಕೆ.ಜಿ.ಗೆ 100ಕ್ಕೂ ಹೆಚ್ಚು ಬೆಲೆ ಸಿಗುತ್ತದೆ ಎಂದು ದಿಲೀಪ್‌ ತಿಳಿಸಿದರು.

ನೀರಿನ ಬಳಕೆ ಕಡಿಮೆ: ತೋಟಗಾರಿಕೆ ಬೆಳೆಯಾದ ಬೀನ್ಸ್‌ಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಹೀಗಾಗಿ ನೀರಿನ ಬಳಕೆ ಅತೀ ಕಡಿಮೆ ಇದೆ. ಕೊಳವೆಬಾಯಿಯಿಂದ ಪಡೆಯುವ ನೀರನ್ನು ಬೀನ್ಸ್‌ ಸೇರಿ ಬೇರೆ ಬೆಳೆಗಳಿಗೂ ಬಳಕೆ ಮಾಡಲಾಗುತ್ತಿದೆ. ಕಡಿಮೆ ನೀರು ಬಳಸುವ ಕಾರಣ ಕಳೆ ನಿರ್ವಹಣೆ ಸುಲಭವಾಗಿದೆ.

ಮೈಸೂರು ಮಾರುಕಟ್ಟೆ: ಪ್ರತಿದಿನವೂ ಕಟಾವು ಮಾಡಿದ ಬೀನ್ಸ್‌ ಬೆಳೆಯನ್ನು ಮೈಸೂರು ಕೃಷಿ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿದೆ. ಪ್ರತಿದಿನವೂ ಬೆಲೆ ಪ್ರಮಾಣ ಏರಿಳಿತ ಕಂಡರೂ ಪ್ರತಿ ಕೆ.ಜಿಗೆ ಸರಾಸರಿ ₹ 25 ಲಾಭ ಸಿಗುತ್ತಿದೆ. ಇದರಿಂದ ಯಾವುದೇ ರೀತಿಯ ನಷ್ಟವಾಗುವುದಿಲ್ಲ.

‘ತಾಲ್ಲೂಕು ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಅವಕಾಶ ಇಲ್ಲವಾಗಿದೆ. ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ದಿಲೀಪ್‌ ಕುಮಾರ್‌ ಒತ್ತಾಯಿಸಿದರು.

ಯುವ ರೈತರಿಗೆ ಸ್ಫೂರ್ತಿ
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿಯೇ ಸುಮಾರು 25– 30 ಯುವಕರ ತಂಡ ಸುಮಾರು 30 ಎಕರೆಯಲ್ಲಿ ಬೀನ್ಸ್‌ ಬೆಳೆಯುತ್ತಿದ್ದಾರೆ. ದಿಲೀಪ್‌ ಕುಮಾರ್‌ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಎಲ್ಲರೂ ಒಂದೆಡೆ ಸೇರಿ ಒಂದು ಟ್ಯಾಕ್ಸಿಯ ಮೂಲಕ ಉತ್ಪನ್ನವನ್ನು ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಇದರಿಂದ ಅನಾವಶ್ಯಕವಾಗಿ ಖರ್ಚು ತಡೆಯಲು ಸಾಧ್ಯವಾಗಿದೆ.

ತೋಟಗಾರಿಕೆಯ ಕೆಲಸವನ್ನು ಮಹಿಳೆಯರೇ ಮಾಡುವುದರಿಂದ ಹೆಚ್ಚಿನ ಕೂಲಿಯೂ ಉಳಿಯುತ್ತಿದೆ. ಸಹಕಾರ ಬೇಸಾಯದ ಶಕ್ತಿ ತಿಳಿದಿದೆ. ಹನಿ ನೀರಾವರಿ ಅವಳಡಿಸಿರುವುದರಿಂದ ಬೇಡವಾದ ಗಿಡಗಳು ಕೂಡ ಬೆಳೆಯುವುದಿಲ್ಲ ಎಂದು ಯುವ ರೈತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT