ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಶಕ್ತಿಯ ಅರಿವು ನರೇಂದ್ರ ಮೋದಿಗಿಲ್ಲ: ಬೃಂದಾ ಕಾರಟ್‌ ಟೀಕೆ

ಶಾಂತಿ–ಸೌಹಾರ್ದ, ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ; ಬೃಂದಾ ಕಾರಟ್‌ ಟೀಕೆ
Published 3 ಮಾರ್ಚ್ 2024, 15:15 IST
Last Updated 3 ಮಾರ್ಚ್ 2024, 15:15 IST
ಅಕ್ಷರ ಗಾತ್ರ

ಮಂಡ್ಯ: ‘ಗ್ರಾಮೀಣ ಪ್ರದೇಶದ ಶ್ರಮಿಕ ಮಹಿಳೆಯರು, ಕೃಷಿ ಕಾರ್ಮಿಕರು ಭಾರತ ದೇಶದ ಬೆನ್ನೆಲುಬು. ಕೇಂದ್ರ ಸರ್ಕಾರದ ಶ್ರಮಿಕರ ವಿರೋಧಿ ನೀತಿಗಳಿಂದ ಮಹಿಳೆಯರು ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದಾರೆ. ನಮ್ಮ ದೇಶದ ಮಹಿಳಾ ಶಕ್ತಿಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗಿಲ್ಲ’ ಎಂದು ಹೋರಾಟಗಾರ್ತಿ ಬೃಂದಾ ಕಾರಟ್‌ ಟೀಕಿಸಿದರು.

ಸಿಪಿಎಂ ವತಿಯಿಂದ ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಭಾನುವಾರ ನಡೆದ ‘ಶಾಂತಿ–ಸೌಹಾರ್ದ– ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಇವತ್ತಿನ ಭಾರತದ ಸನ್ನಿವೇಶದಲ್ಲಿ ಅತಿಹೆಚ್ಚು ನಿರುದ್ಯೋಗ ಇರುವುದರಿಂದ ಗ್ರಾಮೀಣ ಮಹಿಳೆಯರು ಬಹಳ ದೊಡ್ಡ ಹೊರೆ ಹೊರಬೇಕಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕೈಗಳಿಗೆ ಕೇಂದ್ರ ಸರ್ಕಾರ ಕೆಲಸ ಕೊಡುತ್ತಿಲ್ಲ. ಇವರಲ್ಲಿ ಬಹಳಷ್ಟು ಜನರು ಭೂ ರಹಿತರಾಗಿದ್ದಾರೆ, ಇವೆರೆಲ್ಲರೂ ಕೃಷಿಯ ಬೆನ್ನಲುಬಾಗಿದ್ದಾರೆ’ ಎಂದರು.

ಕೃಷಿಯಲ್ಲಿ ಯಂತ್ರೋಪಕರಣ ಬಳಸುತ್ತಿರುವುದರಿಂದ ಮಹಿಳೆಯರು ಉದ್ಯೋಗ ಪಡೆಯುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಪ್ರತಿದಿನ ಹೊರಗೆ ಕೆಲಸ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ದುಡಿಯಲು ಹೋದರಷ್ಟೇ ಊಟ, ಇಲ್ಲವಾದರೆ ಉಪವಾಸ ಇರುವ ಸ್ಥಿತಿ ಇದೆ. ಆದರೆ ಮೋದಿ ಸರ್ಕಾರ ಮಹಿಳೆಯರ ಶಕ್ತಿಯ ಬಗ್ಗೆ ಮಾತನಾಡುತ್ತಾರೆ, ಮಹಿಳೆಯರ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ’ಎಂದರು.

‘ನರೇಗಾ ಯೋಜನೆ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ನಾಲ್ಕೈದು ತಿಂಗಳುಗಳಿಂದ ಕೂಲಿ ಹಣವನ್ನೇ ನೀಡಿಲ್ಲ. ಜಿಲ್ಲೆಯಲ್ಲಿ ಈಗಲೂ ₹ 13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಮಹಿಳೆಯರ ಕೂಲಿ ಹಣ ಕೊಡಲು ಸಾಧ್ಯವಾಗದಿದ್ದ ಮೇಲೆ ನಾರಿಶಕ್ತಿ ಬಗ್ಗೆ ಮಾತನಾಡಲು ನಿಮಗೆ ಪ್ರಧಾನಿಗೆ ಹಕ್ಕು ಇದೆಯೇ’ ಎಂದು ಪ್ರಶ್ನಿಸಿದರು.

‘ಟಿಪ್ಪುಸುಲ್ತಾನ್‌ ಈ ಭಾಗದ ಹೋರಾಟಗಾರ, ಪ್ರಸಿದ್ದ ಆಡಳಿತಗಾರ. ಟಿಪ್ಪು ಅವರಿಗೂ ದೌರ್ಬಲ್ಯವಿತ್ತು. ಆದರೆ ಪ್ರಗತಿಪರ, ಶಾಂತಿದೂತರಾಗಿದ್ದರು. ಅವರ ಅವಧಿಯಲ್ಲಿ ಭೂಸುಧಾರಣೆ ಮಾಡಿದರು, ಮಹಿಳಾಪರವಾದ ಪ್ರಗತಿಪರ ಆಡಳಿತ ನೀಡಿದ್ದರು. ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಸಂಘಪರಿದವರು ಇಡೀ ಇತಿಹಾಸವನ್ನು ವಿಕೃತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಸಿಪಿಎಂ ರಾಜ್ಯ ಘಟಕದ ಸದಸ್ಯ ಎಂ.ಪುಟ್ಟಮಾದು ಮಾತನಾಡಿ ‘ಪ್ರಗತಿಪರ ಚಿಂತನೆಗಳಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಏಷ್ಯಾಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್‌ ಮೂಲಕ ಬೆಳಕು ಕೊಟ್ಟ ಜಿಲ್ಲೆ ನಮ್ಮದು. ತಮಿಳುನಾಡು, ಆಂಧ್ರಪ್ರದೇಶ, ಪುದುಚೆರಿ, ಕರ್ನಾಟಕಕ್ಕೆ ಕನ್ನಂಬಾಡಿ ಕಟ್ಟೆ ಆಸರೆಯಾಗಿದೆ, ಇದು ಸಾಮರಸ್ಯದ ಜೀವನವಾಗಿದೆ. ಆದರೆ ಕೆಲವರು ಜಿಲ್ಲೆಯ ಸಾಮರಸ್ಯ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಮುಖಂಡ ವಿ.ಬಸವರಾಜು ಮಾತನಾಡಿ ‘ಕಾಂಗ್ರೆಸ್‌ ಸರ್ಕಾರವು ಬಡವರಿಗಾಗಿ ಐದು ಕೆಜಿ ಅಕ್ಕಿ ಕೊಡಿ ಎಂದು ಕೇಳಿದರೆ ಕೇಂದ್ರ ಸರ್ಕಾರ ಕೇವಲ ಐದು ಕಾಳು ಮಂತ್ರಾಕ್ಷತೆ ಕೊಟ್ಟು ಮಾಯೆ ತೋರಿಸಿತು. ರಾಜ್ಯದ ಸಂಸದರು ಕೇಂದ್ರ ಮಂತ್ರಿಗಳ ಕೈಯಿಂದ ಬರಗಾಲದ ನಿವಾರಣೆಗೆ ಒಂದು ಪೈಸೆ ಹಣ ಕೊಡಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಮತ್ತು ಒಕ್ಕೂಟದ ಸರ್ಕಾರ ವಿರುದ್ಧವಾಗಿ ನಡೆಯುತ್ತಿದೆ’ ಎಂದರು.

ಮುಖಂಡರಾದ ಟಿ.ಎಲ್‌.ಕೃಷ್ಣೇಗೌಡ, ಮೀನಾಕ್ಷಿ ಸುಂದರಂ, ಸಿ.ಕುಮಾರಿ, ಗುರುಪ್ರಸಾದ್‌ ಕೆರಗೋಡು, ಭರತ್‌ರಾಜ್‌, ದೇವಿ, ಬಿ.ರಾಮಕೃಷ್ಣ, ರಾಮಕೃಷ್ಣ, ಶೋಭಾ, ಸುಶೀಲಾ ಭಾಗವಹಿಸಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಮಹಿಳೆಯರ ಕೂಲಿ ಕೊಡದ ಮೋದಿ ಸರ್ಕಾರ ಇತಿಹಾಸವನ್ನು ವಿಕೃತಗೊಳಸುತ್ತಿರುವ ಬಿಜೆಪಿ ಮಹಿಳಾ ಪರ ಆಡಳಿತ ನೀಡಿದ್ದ ಟಿಪ್ಪು ಸುಲ್ತಾನ್‌

ಮಂಡ್ಯ ಸಿಪಿಎಂನಲ್ಲಿ ಮಹಿಳಾ ಶಕ್ತಿ; ಮೆಚ್ಚುಗೆ

‘ಮಂಡ್ಯ ಜಿಲ್ಲೆಗೆ ಬರಲು ನನಗೆ ಸದಾ ಸಂತೋಷ ಎನಿಸುತ್ತದೆ. ಜಿಲ್ಲೆಯ ಸಿಪಿಎಂ ಪಕ್ಷದಲ್ಲಿ ಶೇ 51ರಂದು ಮಹಿಳೆಯರೇ ಇರುವುದು ಹೆಮ್ಮೆಯ ಸಂಗತಿ. ಇದು ಇಡೀ ದೇಶದಲ್ಲಿ ದಾಖಲೆಯಾಗಿದೆ’ ಎಂದು ಬೃಂದಾ ಕಾರಟ್‌ ಮೆಚ್ಚುಗೆ ವ್ಯಕ್ತಪಡಿಸಿದರು. ‘ರಾಜ್ಯದ ಯಾವುದೇ ಸಭೆ ಸಮಾರಂಭಕ್ಕೆ ಬಂದರೂ ಮಂಡ್ಯ ಮಹಿಳೆಯರೇ ಸ್ವಾಗತ ಕೋರುತ್ತಾರೆ. ಜನವಾದಿ ಮಹಿಳಾ ಸಂಘಟನೆ ಕೃಷಿ ಕೂಲಿಕಾರ್ಮಿಕರು ಉದ್ಯೋಗ ಖಾತ್ರಿ ಕಾರ್ಮಿಕ ಮಹಿಳೆಯರಿಂದ ಕೆಂಪು ಬಾವುಟಕ್ಕೆ ಶಕ್ತಿ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT