ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಚೆಕ್‌ಪೋಸ್ಟ್; ನಿದ್ದೆ ಮಾಡಿದ ಸಿಬ್ಬಂದಿಗೆ ನೋಟಿಸ್‌

ಸಹಾಯಕ ಚುನಾವಣಾಧಿಕಾರಿಗಳ ಸಭೆ; ಎಲ್ಲಾ ವಾಹನ ತಪಾಸಣೆ ಮಾಡಲು ಕಟ್ಟುನಿಟ್ಟಿನ ಸೂಚನೆ
Published 15 ಏಪ್ರಿಲ್ 2024, 15:10 IST
Last Updated 15 ಏಪ್ರಿಲ್ 2024, 15:10 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಕೆಲವು ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿ ವಾಹನ ತಪಾಸಣೆ ಮಾಡದೆ ಹಾಗೆಯೇ ಬಿಡುತ್ತಿರುವುದು ಪತ್ತೆಯಾಗಿದೆ. ರಾತ್ರಿ ವೇಳೆ ನಿದ್ದೆ ಮಾಡುತ್ತಿರುವುದನ್ನು ಚುನಾವಣಾ ವೆಚ್ಚ ವೀಕ್ಷಕರು ಗಮನಿಸಿದ್ದಾರೆ. ಲೋಪ ಎಸಗಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಹಾಯಕ ಚುನಾವಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ದಿನ ಸಮೀಪಿಸುತ್ತಿದ್ದು ಅಧಿಕಾರಿಗಳು ಪ್ರತಿ ವಾಹನವನ್ನೂ ತಪಾಸಣೆ ಮಾಡಬೇಕು. ಚೆಕ್‌ಪೋಸ್ಟ್‌ ಸಿಬ್ಬಂದಿ ಲೋಪ ಎಸಗಿದರೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ಸಹಾಯಕ ಚುನಾವಣಾಧಿಕಾರಿಗಳು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲಾಧಿಕಾರಿಗಳ ಕಚೇರಿಯ ದೂರು ನಿರ್ವಾಹಣಾ ಕೇಂದ್ರದಲ್ಲಿ ಚೆಕ್‌ಪೋಸ್ಟ್ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಲೋಪ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ಇಂದಿನಿಂದ ಮನೆ ಮತದಾನ: ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏ.6ರಿಂದ 18ರವರೆಗೆ 85 ವರ್ಷ ವಯಸ್ಸು ಹಾಗೂ ಮೇಲ್ಪಟ್ಟ 2,570 ಮತದಾರರಿಗೆ, 885 ಅಂಗವಿಕಲರಿಗೆ ಮನೆಯಿಂದ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಮತದಾರರಿಗೆ ಮನೆ ಮತದಾನ ಕುರಿತು ಮಾಹಿತಿ ನೀಡಲಾಗಿದೆ. ಸೆಕ್ಟರ್ ಅಧಿಕಾರಿಗಳು ರೂಟ್ ಮ್ಯಾಪ್ ಸಿದ್ಧಪಡಿಸಿಕೊಳ್ಳಬೇಕು. ಕಡ್ಡಾಯವಾಗಿ ಜಿ.ಪಿ.ಎಸ್ ವಾಹನವನ್ನು ಮನೆ- ಮನೆ ಮತದಾನಕ್ಕೆ ನಿಯೋಜಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜು ಅವರು ಮಾತನಾಡಿ ‘ಮನೆ ಮತದಾನದಲ್ಲಿ ಗೋಪ್ಯತೆ ಕಾಪಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಬ್ಯಾಲೆಟ್ ಪೇಪರ್‌ಗಳ ಕ್ರಮ ಸಂಖ್ಯೆಯ ಅನುಸಾರ ವಿತರಣೆ ಮಾಡಬೇಕು’ ಎಂದರು.

‘ಮನೆ ಮತದಾನದ ನಂತರ ಉಳಿಯುವ ಬ್ಯಾಲೆಟ್ ಪೇಪರ್‌ಗಳನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು. ಮೃತಪಟ್ಟ ಮತದಾರರಿದ್ದಲ್ಲಿ ಅದನ್ನು ಸಹ ಗೈರು ಹಾಜರಿ, ಮೃತ ಪಟ್ಟಿರುತ್ತಾರೆ ಎಂದು ಸರಿಯಾಗಿ ನಮೂದಿಸಬೇಕು. ಎಲ್ಲಾ ಪ್ರಕ್ರಿಯೆಯನ್ನು ವಿಡಿಯೊ ಮಾಡಿಕೊಳ್ಳಬೇಕು. ವಿಡಿಯೊಗ್ರಾಫರ್‌ಗಳಿಗೆ ತರಬೇತಿ ನೀಡಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಮಹೇಶ್ ಇದ್ದರು.

Highlights - ಸಿಬ್ಬಂದಿ ಲೋಪ ಗಮನಿಸಿದ ವೆಚ್ಚ ವೀಕ್ಷಕರು ನಿರ್ಲಕ್ಷ್ಯ ವಹಿಸಿದರೆ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಬ್ಯಾಲೆಟ್‌ ಪೇಪರ್‌ ಮೂಲಕ ಮನೆ ಮತದಾನ

Cut-off box - 2 ಹಂತದಲ್ಲಿ ಮನೆ ಮತದಾನ ‘ಮನೆ ಮತದಾನ ಎರಡು ಹಂತದಲ್ಲಿ ನಡೆಯಲಿದೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಒಂದುವೇಳೆ ಮತದಾರ ಲಭ್ಯವಾಗದಿದ್ದಲ್ಲಿ ಮತ್ತೊಂದು ದಿನವಾದ ಏ.18ರಂದು ಮನೆಗೆ ಭೇಟಿ ನೀಡಿ ಮತದಾನ ಮಾಡಿಸಲಾಗುವುದು’ ಎಂದು ಕುಮಾರ ಹೇಳಿದರು. ‘ಗೃಹ ಮತದಾನದ ಪ್ರತೀ ಮಾರ್ಗಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳು ರಕ್ಷಣಾ ಸಿಬ್ಬಂದಿ ಹಾಗೂ ಪೂರಕ ಸದಸ್ಯರನ್ನೊಳಗೊಂಡ ಒಂದು ತಂಡ ನೇಮಿಸಲಾಗಿದೆ. ನಿಗದಿತ ಮಾರ್ಗದಲ್ಲಿನ ಮತಗಟ್ಟೆಗಳಲ್ಲಿ ನೋಂದಣಿಯಾಗಿರುವ ಮತದಾರ ಮಾತ್ರ ಗೃಹ ಮತದಾನದಲ್ಲಿ ಭಾಗವಹಿಸಲಿದ್ದಾರೆ’ ಎಂದರು. ‘ಮನೆ ಮತದಾನಕ್ಕೆ ಅರ್ಹರಾಗಿರುವ ಸದಸ್ಯರು ನಿಗದಿತ ದಿನಾಂಕದಂದು ಮನೆಯಲ್ಲಿಯೇ ಇರಬೇಕು. ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಅಮೂಲ್ಯ ಮತ ಚಲಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT