ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕ್ವಾರಂಟೈನ್‌ ವಾಸಿಗಳಿಂದ ಸಿಬ್ಬಂದಿಗೆ ಕಿರುಕುಳ: ಜಿಲ್ಲಾಧಿಕಾರಿ ಅಸಮಾಧಾನ

Last Updated 23 ಮೇ 2020, 13:50 IST
ಅಕ್ಷರ ಗಾತ್ರ

ಮಂಡ್ಯ: ‘ಮುಂಬೈನಿಂದ ಬಂದು ಕ್ವಾರಂಟೈನ್‌ ಆಗಿರುವ ಕೆಲ ವಲಸಿಗರು ಕೇಂದ್ರಗಳ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಕೊರೊನಾ ಯೋಧರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಾವಿರಾರು ವಲಸಿಗರು ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿಗೆ ಬಂದಿದ್ದಾರೆ. ಎಲ್ಲರನ್ನೂ ಚೆಕ್‌ಪೋಸ್ಟ್‌ನಲ್ಲಿಯೇ ತಡೆದು ಕ್ವಾರಂಟೈನ್‌ ಮಾಡಲಾಗುತ್ತಿದೆ. ಕೆ.ಆರ್‌.ಪೇಟೆ ತಾಲ್ಲೂಕಿನ 20 ಸರ್ಕಾರಿ ಕಟ್ಟಡಗಳಲ್ಲಿ ವಲಸಿಗರನ್ನು ಇರಿಸಲಾಗಿದೆ. ಎಲ್ಲರಿಗೂ ಸಕಲ ಸೌಲಭ್ಯ ಒದಗಿಸುವುದು ಕೇಂದ್ರಗಳ ಸಿಬ್ಬಂದಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ವಲಸಿಗರು ಇಲ್ಲದ ಸೌಲಭ್ಯಗಳನ್ನು ಕೇಳಿದರೆ ಎಲ್ಲಿಂದ ತರುವುದು’ ಎಂದು ಪ್ರಶ್ನಿಸಿದ್ದಾರೆ.

‘ಕೆಲವು ವಲಸಿಗರು ಅಧಿಕಾರಿಗಳ ಜೊತೆ ಜಗಳ ಮಾಡುತ್ತಿದ್ದಾರೆ, ಕೆಲವೆಡೆ ಹಲ್ಲೆಗೂ ಮುಂದಾಗಿದ್ದಾರೆ. ಕ್ವಾರಂಟೈನ್‌ ಕೇಂದ್ರಗಳ ಬಗ್ಗೆ ಟಿಕ್‌ಟಾಕ್‌ ಮಾಡಿ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯ ನಿರೀಕ್ಷೆ ಮಾಡಿದರೆ ಅದನ್ನು ಒದಗಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

‘ಕ್ವಾರಂಟೈನ್‌ ವಾಸಿಗಳು ಸಿಬ್ಬಂದಿಗೆ ಸಹಕಾರ ನೀಡಬೇಕು. ಆದರೆ ಮನೆಯಿಂದ ಊಟ ತರಿಸಿಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೆಲವೆಡೆ ಮದ್ಯಕ್ಕಾಗಿ ಒತ್ತಾಯ ಮಾಡುತ್ತಿರುವ ಬಗ್ಗೆಯೂ ಸಿಬ್ಬಂದಿ ದೂರಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

‘ದುರ್ವರ್ತನೆ ತೋರುವ ವಲಸಿಗರ ವಿರುದ್ಧ ಕ್ರಮ ಜರುಗಿಸಲಾಗುವುದು. ಕ್ವಾರಂಟೈನ್‌ ಅವಧಿ ಮುಕ್ತಾಯವಾದ ಬಳಿಕ ಸರ್ಕಾರದ ಸೂಚನೆ ಪಾಲಿಸದವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

237ಕ್ಕೆ ಏರಿಕೆ: ಶನಿವಾರ 28 ಮುಂಬೈ ವಲಸಿಗರಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯ ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. ಇವರಲ್ಲಿ 204 ಮಂದಿ ಮುಂಬೈ ವಲಸಿಗರಾಗಿದ್ದಾರೆ. ರಾಜ್ಯದಲ್ಲಿ ಜಿಲ್ಲೆ 2ನೇ ಸ್ಥಾನ ಪಡೆದಿದ್ದು ಸಕ್ರಿಯ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT