ಸೋಮವಾರ, ನವೆಂಬರ್ 30, 2020
24 °C
ಪ್ರತಿಷ್ಟೆಯ ಕಣವಾಗಿರುವ ನಿರ್ದೇಶಕ ಸ್ಥಾನ, ಮಾಜಿ ಸಚಿವರು ಸೇರಿದಂತೆ ಘಟಾನುಘಟಿಗಳ ಸ್ಪರ್ಧೆ

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಪ್ರತಿಷ್ಟೆಯ ಕಣವಾಗಿರುವ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, 9 ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು 12 ಕ್ಷೇತ್ರಗಳಲ್ಲಿ ಈಗಾಗಲೇ 3 ಕ್ಷೇತ್ರಗಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದಾರೆ. 9 ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಗರದ ಲಕ್ಷ್ಮೀ ಜನಾರ್ಧನ ಶಾಲೆಯಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. 12 ಸ್ಥಾನಗಳಲ್ಲಿ 890 ಮತದಾರರಿದ್ದರು. ಈಗ ಮೂರು ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿರುವ ಕಾರಣ ಅಂತಿಮವಾಗಿ 659 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

10 ಮತಗಟ್ಟೆ ನಿರ್ಮಾಣ: ಲಕ್ಷ್ಮೀ ಜನಾರ್ಧನ ಶಾಲೆಯಲ್ಲಿ ಬುಧವಾರ 10 ಮತಗಟ್ಟೆಗಳನ್ನು ತೆರೆದಿದ್ದು, ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. 9 ಸ್ಥಾನಗಳಿಗೆ 9 ಮತಗಟ್ಟೆ ಹಾಗೂ ಹೆಚ್ಚವರಿಯಾಗಿ ಒಂದು ಕೋವಿಡ್‌ ಮತಗಟ್ಟೆಯನ್ನು ತೆರೆಯಲಾಗಿದೆ. ಮತದಾರರಲ್ಲಿ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ ಅವರಿಗಾಗಿ ಪ್ರತ್ಯೇಕ ಮತಗಟ್ಟೆ ತೆರೆಯಲಾಗಿದ್ದು, ಅಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಇರುವ ಸಂಬಂಧ ಪ್ರಮಾಣ ಪತ್ರ ತಂದರೆ ಅಂತವರಿಗೆ ಪ್ರತ್ಯೇಕವಾಗಿ ಮತದಾನ ಮಾಡಿಸಿ, ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

40 ಸಿಬ್ಬಂದಿ, 32 ಪೊಲೀಸ್‌ ನಿಯೋಜನೆ: ಚುನಾವಣೆಗೆ ಸಂಬಂಧಿಸಿದಂತೆ ಒಂದು ಮತಗಟ್ಟೆಗೆ 4 ಅಧಿಕಾರಿಗಳಂತೆ 10 ಮತಗಟ್ಟೆಗೆ 40 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಬುಧವಾರವೇ ವರದಿ ಮಾಡಿಕೊಂಡಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಅವರು ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಚುನಾವಣಾ ಅಧಿಕಾರಿಗಳಾಗಿ ನಿಯೋಜಿಸಲಾಗಿದ್ದು, ನಿಷ್ಪಕ್ಷಪಾತ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. ಜಿಲ್ಲೆಯ ವಿವಿಧೆಡೆಯಿಂದ ತಮ್ಮ ನಾಯಕನ ಆಯ್ಕೆಯ ಚುನಾವಣೆಯಲ್ಲಿ ಮತದಾರರು ಸೇರಿದಂತೆ ಬೆಂಬಲಿಗರು ಬರುವ ಸಾಧ್ಯತೆ ಇದ್ದು, 32 ಮಂದಿ ಪೊಲೀಸ್‌ ಸಿಬ್ಬಂದಿಯನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

3 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಕ್ಷೇತ್ರ, ಪಾಂಡವಪುರ ಉಪ ವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ, ಪಾಂಡವಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ.

9 ಕ್ಷೇತ್ರಗಳಿಗೆ ಚುನಾವಣೆ: ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ಜಿಲ್ಲೆಯ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರ ಬ್ಯಾಂಕ್‌ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ಮಂಡ್ಯ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ, ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳು (ನೇಕಾರರ ಸಹಕಾರ ಸಂಘಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳ (ಫಾರ್ಮಿಂಗ್‌ ಸಹಕಾರ ಸಂಘಗಳು ಸೇರಿದಂತೆ) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.