ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟಾರ್‌ ಚಂದ್ರು ವಿರುದ್ಧ ಎಚ್‌ಡಿಕೆ; ಸಿದ್ಧವಾದ ವೇದಿಕೆ?

ಮಗ ನಿಖಿಲ್‌ ಸೋತ ನೆಲದಲ್ಲೇ ಪುಟಿದೇಳಲು ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆ, ಕ್ಷೇತ್ರದಲ್ಲಿ ಕುತೂಹಲ
Published 20 ಮಾರ್ಚ್ 2024, 8:36 IST
Last Updated 20 ಮಾರ್ಚ್ 2024, 8:36 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ವಿರುದ್ಧ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು ಕ್ಷೇತ್ರದ ಕಣ ರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್‌ ಸೋತ ನೆಲದಲ್ಲೇ ಪುಟಿದೇಳಲು ಎಚ್‌.ಡಿ.ಕುಮಾರಸ್ವಾಮಿ ತಾವೇ ಅಭ್ಯರ್ಥಿ ಯಾಗಲಿದ್ದಾರೆ. ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಗೆ ಶಕ್ತಿ ತಂದುಕೊಡಲಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಾದ್ಯಂತ ನಿರಂತರವಾಗಿ ಓಡಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ, ಸಚಿವರು ಹಾಗೂ ಶಾಸಕರಿಗೆ ಸರಿಸಾಟಿಯಾಗಿ ನಿಲ್ಲಲು ಕುಮಾರಸ್ವಾಮಿ ಅವರೇ ಸಮರ್ಥರು ಎಂದು ಜೆಡಿಎಸ್‌ ಕಾರ್ಯಕರ್ತರು ಬಣ್ಣಿಸುತ್ತಾರೆ.

ಎಚ್‌.ಡಿ.ದೇವೇಗೌಡರ ಕುಟುಂಬ ದವರೇ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಮೊದಲಿನಿಂದಲೂ ಹರಿದಾಡುತ್ತಿತ್ತು. ಆದರೆ, ಆರಂಭದಲ್ಲಿ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸುರೇಶ್‌ ಗೌಡ ಹೆಸರುಗಳನ್ನು ಹರಿಬಿಟ್ಟ ರಾದರೂ ಇವರ ಬಗ್ಗೆ ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬರಲಿಲ್ಲ.

ಇದೇ ಕಾರಣಕ್ಕೆ ಸ್ಥಳೀಯ ಜೆಡಿಎಸ್‌ ಮುಖಂಡರು ‘ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮೂವರಲ್ಲಿ ಒಬ್ಬರು ಬರಲಿ’ ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡು ವರಿಷ್ಠರಿಗೆ ಕಳುಹಿಸಿದ್ದರು. ಆದರೆ ದೇವೇಗೌಡರು ಚುನಾವಣೆ ಸ್ಪರ್ಧಿಸುವ ನಿರ್ಣಯ ಕೈಗೊಂಡಿಲ್ಲ. ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಉದ್ದೇಶದಿಂದ ನಿಖಿಲ್‌ ಕೂಡ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಲಿಲ್ಲ.

ಈಚೆಗೆ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ‘ಕುಮಾರಣ್ಣ ಅಥವಾ ನಿಖಿಲಣ್ಣ ಇಬ್ಬರಲ್ಲಿ ಒಬ್ಬರು ಬರಬೇಕು’ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆದರೆ ನಿಖಿಲ್‌ ಕುಮಾರಸ್ವಾಮಿ ಸ್ಥಳದಲ್ಲೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ‘ಕಾರ್ಯ ಕರ್ತರ ಇಷ್ಟದಂತೆಯೇ ಆಗಲಿದೆ’ ಎಂದು ಕುಮಾರಸ್ವಾಮಿ ತಿಳಿಸಿ ಹೋಗಿದ್ದರು.

ಈಗ ಕಾರ್ಯಕರ್ತರ ಆಸೆಯಂತೆ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ, ಬಿಜೆಪಿ ಹೈಕಮಾಂಡ್‌ ಒತ್ತಾಯವೂ ಇದೇ ಆಗಿದ್ದು ಶೀಘ್ರ ನಿರ್ಣಯ ಹೊರಬೀಳಲಿದೆ. ಕುಮಾರಸ್ವಾಮಿ ಅವರು ಶ್ವಾಸಕೋಶ ಶಸ್ತ್ರಚಿಕಿತ್ಸೆ ಮುಗಿಸಿ ತಾವೇ ಕ್ಷೇತ್ರಕ್ಕೆ ಬಂದು ನಿರ್ಣಯ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ಗೆ ಶಕ್ತಿ: ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಸಕ್ಕರೆ ಜಿಲ್ಲೆ ಕಳೆದ ಲೋಕಸಭಾ ಚುನಾವಣೆ ನಂತರ ಶಕ್ತಿಹೀನವಾಗಿತ್ತು. ಕಳೆದ ಲೋಕಸಭೆ ಚುನಾವಣೆ, ವಿಧಾನ ಪರಿಷತ್‌, ವಿಧಾನಸಭೆ ಸೇರಿದಂತೆ ಸ್ಥಳೀಯ ಸಂಸ್ಥೆ, ಸೊಸೈಟಿಗಳ ಚುನಾವಣೆಯಲ್ಲೂ ಕಾಂಗ್ರೆಸ್‌ ತನ್ನ ಗೆಲುವಿನ ಚೈತ್ರಯಾತ್ರೆ ಮುಂದುವರಿಸಿತ್ತು.

ಸೋಲಿನಿಂದ ಕಂಗಾಲಾಗಿರುವ ಸ್ಥಳೀಯ ಜೆಡಿಎಸ್‌ ನಾಯಕರಿಗೆ ಒಂದು ಶಕ್ತಿಯ ಅಗತ್ಯವಿತ್ತು. ಈಗ ಜೆಡಿಎಸ್‌ ಪಾಲಿಗೆ ರಾಜ್ಯ ಘಟಕದ ಅಧ್ಯಕ್ಷರೇ ಶಕ್ತಿಯಾಗಿ ಬರುತ್ತಿದ್ದು ಪಕ್ಷದಲ್ಲಿ ಉತ್ಸಾಹ ಕಾಣಿಸುತ್ತಿದೆ. ಆ ಮೂಲಕ ಅಧಿಕಾರ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕ್ಷೇತ್ರದಾದ್ಯಂತ ಅಬ್ಬರದ ಸೃಷ್ಟಿಸಿರುವ ಕಾಂಗ್ರೆಸ್‌ ನಾಯಕರಿಗೆ ಕುಮಾರಸ್ವಾಮಿ ಸಮರ್ಥ ಎದುರಾಳಿಯಾಗಲಿದ್ದಾರೆ ಎಂಬುದು ಜೆಡಿಎಸ್‌ ಕಾರ್ಯಕರ್ತರ ಮಾತು.

‘ಎಚ್‌.ಡಿ.ದೇವೇಗೌಡರ ಅವರು ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ಈಗ ಕುಮಾರಣ್ಣ ಅವರು ಮಂಡ್ಯದಿಂದ ಗೆದ್ದು ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ರೈತರ ಬಾಳಿಗೆ ಬೆಳಕಾಗಲಿದ್ಧಾರೆ’ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್‌ ನಾಯಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಸ್ಟಾರ್‌ ಚಂದ್ರು
ಸ್ಟಾರ್‌ ಚಂದ್ರು

ಜೆಡಿಎಸ್‌ನಲ್ಲಿ ಒಗ್ಗಟ್ಟಿನ ಕೊರತೆ

ಸ್ಥಳೀಯ ಜೆಡಿಎಸ್‌ ನಾಯಕರಲ್ಲಿ ಒಗ್ಗಟ್ಟು ಮಾಯವಾಗಿರುವುದು ಪಕ್ಷದ ಪಾಲಿಗೆ ಮುಳ್ಳಾಗಿದೆ. ಎಲ್ಲಾ ಏಳು ಕ್ಷೇತ್ರಗಳ ನಾಯಕರಿಗೆ ಪರಸ್ಪರ ವಿಶ್ವಾಸವಿಲ್ಲ. ಸ್ಥಳೀಯರೇ ಅಭ್ಯರ್ಥಿಯಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಿಲ್ಲ ಒಳ ಏಟಿನ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್‌ ಎದುರು ಗೆಲುವು ಕಷ್ಟವಾಗಬಹುದು. ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟರೆ ಜೆಡಿಎಸ್‌ಗೆ ದೊಡ್ಡ ಹಾನಿಯಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಕುಮಾರಸ್ವಾಮಿಯವರೇ ಸ್ಪರ್ಧಿಸುತ್ತಿದ್ದಾರೆ ಎಂದು ಜೆಡಿಎಸ್‌ ಕಾರ್ಯಕರ್ತರು ಹೇಳುತ್ತಾರೆ. ‘ಕುಮಾರಣ್ಣ ಬಂದರೆ ಎಲ್ಲಾ ಸ್ಥಳೀಯ ಮುಖಂಡರು ಮುನಿಸು ಮರೆತು ಒಂದಾಗುತ್ತಾರೆ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಅವರಿಗೆ ಒಗ್ಗಟ್ಟು ಅನಿವಾರ್ಯವೂ ಆಗಿದೆ. ಈಗಿನ ಜೆಡಿಎಸ್‌ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಅವರೇ ಸೂಕ್ತ’ ಎಂದು ಜೆಡಿಎಸ್‌ ಮುಖಂಡರೊಬ್ಬರು ಹೇಳಿದರು.

ಸುಮಲತಾ ಒಬ್ಬಂಟಿ ಹೋರಾಟ ಏನಾಯ್ತು?

ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪದ ಸಂಸದೆ ಸುಮಲತಾ ಅವರು ಒಬ್ಬಂಟಿಯಾಗಿ ದೆಹಲಿ ಮುಖಂಡರೆದುರು ಟಿಕೆಟ್‌ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ಅವರಿಗೆ ಯಾವುದೇ ಭರವಸೆ ಸಿಕ್ಕಿಲ್ಲ. ಮುಖಂಡರ ಕಚೇರಿಗಳಿಗೆ ಮನೆಗಳಿಗೆ ಓಡಾಡುತ್ತಿರುವ ಅವರು ಕಡೇ ಕ್ಷಣದವರೆಗೂ ಹೋರಾಟ ಮುಂದುವರಿಸಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸುಮಲತಾ ಹೋರಾಟ ವ್ಯರ್ಥ. ಅವರಿಗೆ ಸ್ಥಳೀಯವಾಗಿಯೂ ಬೆಂಬಲ ಇಲ್ಲದ ಕಾರಣ ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅವರು ಮುಂದೆ ಯಾವ ನಿಲುವು ತಾಳುತ್ತಾರೆ ಎಂಬ ಪ್ರಶ್ನೆ ಜಿಲ್ಲೆಯಲ್ಲಿದೆ. ಸುಮಲತಾ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT