ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಮುಲ್‌: ನೀರು ಮಿಶ್ರಿತ ಹಾಲು ಮಾರಾಟ?

ಕೊಬ್ಬಿನಾಂಶ ಕಡಿತಗೊಳಿಸಿದ್ದ ಮನ್‌ಮುಲ್‌, ‘ಮಂಡ್ಯ ಹಾಲು’ ಬ್ರ್ಯಾಂಡ್‌ಗೂ ಧಕ್ಕೆ
Last Updated 7 ಜೂನ್ 2021, 22:01 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್‌)ದ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ಶಾಮೀಲಾಗಿ, ನಂದಿನಿ ಹಾಲಿನಲ್ಲಿ ಕೊಬ್ಬಿನಾಂಶ (ಫ್ಯಾಟ್‌) ಕಡಿತಗೊಳಿಸಿ ಗ್ರಾಹಕರಿಗೆ ನೀರು ಮಿಶ್ರಿತ ಹಾಲು ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ರೈತರಿಂದ ಸಂಗ್ರಹ ಮಾಡಿದ ಪ್ರತಿ ಟ್ಯಾಂಕರ್‌ ಹಾಲಿನಲ್ಲಿ ಶೇ 30ರಷ್ಟನ್ನು ಖಾಸಗಿ ಡೇರಿಗಳಿಗೆ ಮಾರಾಟ ಮಾಡುತ್ತಿದ್ದರು. ಉಳಿದ ಹಾಲಿಗೆ ನೀರು ಸೇರಿಸಿ ಮನ್‌ಮುಲ್‌ಗೆ ಸರಬರಾಜು ಮಾಡುತ್ತಿದ್ದರು. ಇದಕ್ಕಾಗಿ, ಹಾಲು–ನೀರು ಬೇರ್ಪಡಿಸುವ ವಿಶೇಷ ಟ್ಯಾಂಕರ್‌ಗಳನ್ನು ವಿನ್ಯಾಸ ಮಾಡಲಾಗಿತ್ತು ಎಂಬ ವಿಷಯ ಮೇ 28ರಂದು ಪತ್ತೆಯಾಗಿತ್ತು. 5 ಟ್ಯಾಂಕರ್‌ ವಶಪಡಿಸಿಕೊಳ್ಳಲಾಗಿದ್ದು 6 ಮಂದಿ ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದೆ.

ಕೋಟ್ಯಂತರ ರೂಪಾಯಿ ಅವ್ಯವಹಾರ ಆಡಳಿತ ಮಂಡಳಿಯ ನೆರಳಿನಲ್ಲೇ ನಡೆಯುತ್ತಿತ್ತು. ಪ್ರತಿದಿನ 1 ಲಕ್ಷ ಲೀಟರ್‌ ನೀರು ಬೆರೆಸಿದ ಹಾಲು ಮನ್‌ಮುಲ್‌ ಸೇರುತ್ತಿತ್ತು. ಗ್ರಾಹಕರಿಗೆ ಸರಬರಾಜಾಗುವ ನಂದಿನಿ ಹಾಲಿನ ಪಾಕೀಟುಗಳಲ್ಲಿ ಹೆಚ್ಚಿನ ನೀರಿನಾಂಶ ಸೇರ್ಪಡೆ ಮಾಡಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು.

ನಂದಿನಿ ಪಾಕೀಟಿನ ಮೇಲೆ ಮುದ್ರಿಸಲಾದ ಪೋಷಕಾಂಶಗಳ ಪಟ್ಟಿಯಲ್ಲಿರುವಷ್ಟು ಕೊಬ್ಬಿನಾಂಶ ವಾಸ್ತವವಾಗಿ ಹಾಲಿನಲ್ಲಿ ಇರಲಿಲ್ಲ. ಕೊಬ್ಬಿನಾಂಶದ ಪ್ರಮಾಣ ಕಡಿತಗೊಳಿಸಲಾಗಿತ್ತು. ಆ ಮೂಲಕ ಮನ್‌ಮುಲ್‌ಗೆ ಸರಬರಾಜಾಗುತ್ತಿದ್ದ ನೀರು ಮಿಶ್ರಿತ ಹಾಲಿನಿಂದಾದ ನಷ್ಟವನ್ನು ನಿರ್ವಹಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

‘ಮೇ 28ಕ್ಕಿಂತ ಮೊದಲು ಉತ್ಪಾದನೆಯಾದ ಹಾಲಿನ ಪಾಕೀಟುಗಳಲ್ಲಿ ಕೊಬ್ಬಿನಾಂಶ ಕಡಿಮೆ ಇದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸರಿಪಡಿಸಿಕೊಂಡಿದ್ದಾರೆ. ಒಕ್ಕೂಟಕ್ಕೆ ನೀರುಮಿಶ್ರಿತ ಹಾಲು ಸರಬರಾಜಾಗುತ್ತಿದ್ದರೂ ಎಲ್ಲೂ ನಷ್ಟ ತೋರಿಸಿಲ್ಲ. ಆದರೆ ಕಳಪೆ ಹಾಲು ಉತ್ಪಾದಿಸಿ ನಷ್ಟ ಸರಿದೂಗಿಸಿಕೊಳ್ಳಲಾಗುತ್ತಿತ್ತು. ಇದು ಸಮಗ್ರವಾಗಿ ತನಿಖೆಯಾಗಬೇಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮನ್‌ಮುಲ್‌ ತಂತ್ರಜ್ಞರೊಬ್ಬರು ತಿಳಿಸಿದರು.

ಬ್ರ್ಯಾಂಡ್‌ಗೆ ಧಕ್ಕೆ: ಜಿಲ್ಲೆಯು, ಬೆಲ್ಲದೊಂದಿಗೆ ಹೈನುಗಾರಿಕೆಗೂ ಹೆಸರಾಗಿದೆ. ಮನ್‌ಮುಲ್‌ ಹಾಲು ರಾಮನಗರ ಜಿಲ್ಲೆ, ಬೆಂಗಳೂರು ನಗರಕ್ಕೂ ಸರಬರಾಜಾಗುತ್ತದೆ. ಮಂಡ್ಯ ಬೆಲ್ಲದಷ್ಟೇ ಹಾಲಿಗೂ ಬ್ರ್ಯಾಂಡ್‌ ರೂಪವಿದೆ. ಈಚೆಗೆ ಮಂಡ್ಯ ಬೆಲ್ಲ ಕಲಬೆರಕೆಯಾಗಿರುವ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಮಂಡ್ಯ ಹಾಲಿನ ಅವ್ಯವಹಾರ ಬಯಲಿಗೆ ಬಂದಿದ್ದು ಬ್ರ್ಯಾಂಡ್‌ ರೂಪಕ್ಕೆ ಧಕ್ಕೆಯಾಗಿದೆ.

‘ಟ್ಯಾಂಕರ್‌ ಜಪ್ತಿ ಮಾಡಿದ ನಂತರ ಹಾಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಂದಿನಿ ಮಾದರಿಯನ್ನೂ ಪರೀಕ್ಷಿಸಲಾಗುವುದು’ ಎಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದರು.

ಅನಧಿಕೃತ ಟ್ಯಾಂಕರ್‌ಗಳ ಹಾವಳಿ

ನಿತ್ಯ 9 ಲಕ್ಷ ಲೀಟರ್‌ ಹಾಲು ಮನ್‌ಮುಲ್‌ಗೆ ಸಂಗ್ರಹವಾಗುತ್ತಿದ್ದು, ಈ ಹಾಲು ಸರಬರಾಜು ಮಾಡಲು 50 ಟ್ಯಾಂಕರ್‌ಗಳಿಗೆ ಮಾತ್ರ ಗುತ್ತಿಗೆ ನೀಡಲಾಗಿದೆ. ಆದರೆ, 100ಕ್ಕೂ ಹೆಚ್ಚು ಟ್ಯಾಂಕರ್‌ಗಳಿಗೆ ಅನಧಿಕೃತವಾಗಿ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅಕ್ರಮ ನಡೆದಿರುವುದು ಸಾಬೀತಾದರೆ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಲು ಹಿಂಜರಿಯುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

* ತಪ್ಪೆಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಗ್ರಾಹಕರಿಗೆ ಪೂರೈಸುವ ನಂದಿನಿ ಹಾಲಿನ ಗುಣಮಟ್ಟ ಕಡಿಮೆ ಮಾಡಿಲ್ಲ

–ಬಿ.ಎಂ.ರಾಮಚಂದ್ರ, ಮನ್‌ಮುಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT