ಭಾನುವಾರ, ಮೇ 22, 2022
25 °C

ಮನ್‌ಮುಲ್ ಸೂಪರ್ ಸೀಡ್, ದಿನೇಶ್ ಹೇಳಿಕೆ ಸರಿಯಲ್ಲ: ರಾಮಚಂದ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಮನ್‌ಮುಲ್‌ ಸೂಪರ್‌ಸೀಡ್ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಹೇಳಿರುವುದು ಸರಿಯಲ್ಲ. ಅವರು ಒಕ್ಕೂಟಕ್ಕೆ ಹಾಗೂ ಕೆ.ಹೊನ್ನಲಗೆರೆ ಡೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಮನ್‌ಮುಲ್ ಉಪ ವ್ಯವಸ್ಥಾಪಕ ಕಚೇರಿಯಲ್ಲಿ ಸೋಮವಾರ ನಡೆದ ರಾಸುಗಳ ಮಾಲೀಕರಿಗೆ ವಿಮೆ ಚೆಕ್‌ ವಿತರಣೆ, ಮೇವು ಕತ್ತರಿಸುವ ಯಂತ್ರ ವಿತರಣೆ, ನಿವೃತ್ತ ಡೇರಿ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮದ್ದೂರು ಕೆ.ಹೊನ್ನಲಗೆರೆ ಗ್ರಾಮದ ಡೇರಿಯಲ್ಲಿ ಅಲ್ಲಿನ ಕಾರ್ಯ ದರ್ಶಿ ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿದ ಪ್ರಕರಣಕ್ಕೂ ಮನ್‌ ಮುಲ್‌ಗೂ ಸಂಬಂಧವಿಲ್ಲ. ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿದ ಹಾಲನ್ನು ಒಕ್ಕೂಟ ಖರೀದಿಸಿಲ್ಲ. ವಾಸ್ತವ ಹೀಗಿರುವಾಗ ವಿಧಾನ ಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ಮನ್‌ಮುಲ್ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಎಂದು ಹೇಳಿರುವುದು ಸರಿಯಲ್ಲ ಎಂದರು.

ಕೆ.ಹೊನ್ನಲಗೆರೆಯಲ್ಲಿ ನಡೆದಿರುವ ಘಟನೆಗೆ ಅಲ್ಲಿನ ಕಾರ್ಯದರ್ಶಿ, ಆಡಳಿತ ಮಂಡಳಿಯೇ ನೇರ ಹೊಣೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡೇರಿ ಕಾರ್ಯದರ್ಶಿ ವಿರುದ್ಧ ಕ್ರಮವಹಿಸಲಾಗಿದೆ. ಮನ್‌ಮುಲ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ರೈತರ ಹಾಲು ಖರೀದಿ, ಹಾಲಿನ ಹಣ ನೀಡಿಕೆ ಜತೆಗೆ ರೈತರಿಗೆ ಬೇಕಾದ ಸೌಲಭ್ಯ ಒದಗಿಸಿಕೊಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಡೇರಿ ಕಾರ್ಯದರ್ಶಿ ಕಡ್ಡಾಯ ವಾಗಿ ಹಾಲನ್ನು ಪರೀಕ್ಷೆ ಮಾಡಿ ತೆಗೆದು ಕೊಳ್ಳಬೇಕು. ಪರೀಕ್ಷೆ ನಡೆಸಿ ಹಾಲು ಖರೀದಿಸಿ ರೈತರಿಗೆ ಕೊಬ್ಬಿನಾಂಶದ ಮೇಲೆ ದರ ನೀಡಿ, ಕಳಪೆ ಗುಣಮಟ್ಟದ ಹಾಲು ಹಾಕುವವರನ್ನು ವಾಪಸ್‌ ಕಳುಹಿ ಸಬೇಕು ಎಂದು ಸಲಹೆ ನೀಡಿದರು.

ಅಕಾಲಿಕ ಮರಣ ಹೊಂದಿದ 12 ಮಂದಿ ರಾಸುಗಳ ಮಾಲೀಕರಿಗೆ ಒಟ್ಟು ₹ 5.40ಲಕ್ಷದ ಚೆಕ್ ಹಾಗೂ ಸೇವೆಯಿಂದ ನಿವೃತ್ತಗೊಂಡ 5 ಮಂದಿ ಕಾರ್ಯದರ್ಶಿಗಳಿಗೆ ತಲಾ ₹ 1ಲಕ್ಷ ನೀಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳ 6ಮಂದಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಲಾಯಿತು.

ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿಗಳಾದ ಎಚ್.ಎಸ್.ಮಂಜುನಾಥ್, ಎ.ಎಸ್.ಸಿದ್ದರಾಜು, ಎಚ್.ಎನ್‌.ಉಷಾ, ಕಾರ್ಯದರ್ಶಿಗಳಾದ ಬೋರೇಗೌಡ, ಡಿಂಕಾ ಶಿವಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು