ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇಲ್ಲಿನ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣಾ ಅಖಾಡ ಪ್ರವೇಶಿಸುವ ಮೂಲಕ, ಆಡಳಿತ ಚುಕ್ಕಾಣಿಯನ್ನು ಜೆಡಿಎಸ್ ತೆಕ್ಕೆಯಲ್ಲೇ ಉಳಿಸಿಕೊಳ್ಳುವಲ್ಲಿ ಬುಧವಾರ ಯಶಸ್ವಿಯಾದರು.
ಅಧ್ಯಕ್ಷರಾಗಿ ಜೆಡಿಎಸ್‌ನ ಎಂ.ವಿ. ಪ್ರಕಾಶ್ (ನಾಗೇಶ್), ಉಪಾಧ್ಯಕ್ಷರಾಗಿ ಬಿಜೆಪಿಯ ಎಂ.ಪಿ. ಅರುಣ್‌ಕುಮಾರ್ ತಲಾ 19 ಮತ ಪಡೆದು ಗೆದ್ದರು. ‘ಮೈತ್ರಿ’ ಇಲ್ಲಿಯೂ ಮುಂದುವರಿಯಿತು. ಕಾಂಗ್ರೆಸ್ ಮುಖಭಂಗ ಅನುಭವಿಸಿತು.
ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ (ಪ್ರವರ್ಗ-ಎ) ಮೀಸಲಾಗಿತ್ತು. ಕಾಂಗ್ರೆಸ್ 10, ಜೆಡಿಎಸ್ 18, ಬಿಜೆಪಿ 2 ಹಾಗೂ ಪಕ್ಷೇತರ ಐವರು ಸದಸ್ಯರು ಹಾಗೂ ಶಾಸಕ, ಸಂಸದ ಸೇರಿ ಒಟ್ಟು 37 ಮತಗಳಿದ್ದವು. ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್.ಎಸ್.ಮಂಜು ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜಾಕೀರ್‌ಪಾಷಾ ತಲಾ 18 ಮತ ಪಡೆದು, ಒಂದೇ ಮತದ ಅಂತರದಲ್ಲಿ ಸೋತರು.
18 ಸದಸ್ಯರ ಬಲವಿದ್ದ ಜೆಡಿಎಸ್ ಗೆಲ್ಲಲು ಇನ್ನೊಂದು ಮತವಷ್ಟೇ ಬೇಕಿತ್ತು. ಆದರೆ, ಪಕ್ಷದ ಎಚ್.ಎಸ್. ಮಂಜು, ಭಾರತೀಶ್, ರಜಿನಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರಿಂದ ಬಲ 15ಕ್ಕೆ ಕುಸಿದಿತ್ತು. ಬಿಜೆಪಿಯ ಇಬ್ಬರು ಮತ್ತು ಕುಮಾರಸ್ವಾಮಿ ಮತ ಸೇರಿ ಮೈತ್ರಿಬಲ 18ಕ್ಕೇರಿದ್ದರೂ ಒಂದು ಮತದ ಕೊರತೆ ಇತ್ತು. ಐವರು ಪಕ್ಷೇತರರನ್ನು ಕಾಂಗ್ರೆಸ್ ಸೆಳೆದುಕೊಂಡಿದ್ದರಿಂದ, ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಟಿ.ಕೆ. ರಾಮಲಿಂಗಯ್ಯ ಅವರನ್ನೇ ಕುಮಾರಸ್ವಾಮಿ ಸೆಳೆದು ಮೈತ್ರಿಗೆ ಬಲ ತುಂಬಿದರು.
ಕಾಂಗ್ರೆಸ್‌ಗೆ, ಆ ಪಕ್ಷದ 9, ಪಕ್ಷೇತರ 5, ಜೆಡಿಎಸ್‌ನ 3 ಹಾಗೂ ಶಾಸಕ ಪಿ.ರವಿಕುಮಾರ್‌ಗೌಡರ ಮತ ಸೇರಿ 18 ಮತಗಳು ಬಂದವು.
ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಹಾಕಿದ್ದೇನೆ. ಕಾಂಗ್ರೆಸ್‌ನವರ ಆಮಿಷಗಳಿಗೆ ಮಣಿಯದ ನಿಷ್ಠಾವಂತ ಜೆಡಿಎಸ್ ಸದಸ್ಯರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ– ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.