ಮಂಡ್ಯ: ಸಾಹಸ ಸಿಂಹ ವಿಷ್ಣುವರ್ಧನ್ ಚಿತ್ರಗಳಿಗೆ ಹೇಳಿ ಮಾಡಿಸಿದಂತಿದ್ದ ನಗರದ ಹೃದಯ ಭಾಗದಲ್ಲಿರುವ ‘ನಂದಾ’ ಟಾಕೀಸ್ ಇನ್ನು ನೆನಪು ಮಾತ್ರ. 65 ವರ್ಷಗಳಿಂದ ಜಿಲ್ಲೆಯ ಜನರಿಗೆ ಭರಪೂರ ಮನರಂಜನೆ ನೀಡಿದ್ದ ಸುಂದರ ಚಿತ್ರಮಂದಿರ ನೆಲಸಮಗೊಂಡಿದೆ.
ಜಿಲ್ಲೆಯಾದ್ಯಂತ ನೇಪಥ್ಯಕ್ಕೆ ಸರಿದ ಹಲವು ಚಿತ್ರಮಂದಿರಗಳ ಸಾಲಿಗೆ ನಂದಾ ಕೂಡ ಸೇರುತ್ತಿದೆ. ಈ ಚಿತ್ರಮಂದಿರದೊಂದಿಗೆ ಜನರಿಗೆ ಅಪಾರ ನೆನಪುಗಳಿವೆ. ಗ್ರಾಮೀಣ ಜನರು ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಚಿತ್ರ ನೋಡುತ್ತಿದ್ದುದು ಈಗಲೂ ಹಸಿರಾಗಿದೆ.
ದಿನಕ್ಕೆ 5 ಪ್ರದರ್ಶನ ನೀಡುತ್ತಿದ್ದ ‘ನಂದಾ ದೀಪ’ ಆರಿ ಹೋಗುತ್ತಿರುವುದು ಚಿತ್ರ ಪ್ರೇಮಿಗಳಿಗೆ ಬೇಸರ ತರಿಸಿದೆ. ಮಾಲೀಕರು ಪರಿಶ್ರಮ ಪಟ್ಟು ಟಾಕೀಸ್ ಮುನ್ನಡೆಸಿ ಚಿತ್ರಪ್ರೇಮ ಮೆರೆದಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಚಿತ್ರಮಂದಿರವನ್ನು ನೆಲಸಮಗೊಳಿಸಿದ್ದು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇ ಬದಿಯಲ್ಲಿರುವ ಚಿತ್ರಮಂದಿರ ಮಂಡ್ಯದ ಹೆಮ್ಮೆಯಾಗಿತ್ತು. ನಂದಾ ಸರ್ಕಲ್, ನಂದಾ ಬಸ್ ನಿಲ್ದಾಣವೂ ರೂಪ ಪಡೆದಿತ್ತು. ಬಸ್ ಇಳಿದ ಕೂಡಲೇ ಜನ ಚಿತ್ರಮಂದಿರದೆಡೆಗೆ ಓಡೋಡಿ ಬರುತ್ತಿದ್ದರು. ಕೂಗಳತೆ ದೂರದಲ್ಲೇ ಮೈಷುಗರ್ ಕಾರ್ಖಾನೆ ಇದ್ದು ಕಬ್ಬು ತರುವ ರೈತರು ಎತ್ತಿನ ಗಾಡಿ ನಿಲ್ಲಿಸಿ ಚಿತ್ರ ನೋಡಿ ಸಂಭ್ರಮಿಸುತ್ತಿದ್ದರು.
‘ಮೈಷುಗರ್‌ಗೆ ಬರುತ್ತಿದ್ದ ಹೆಚ್ಚು ರೈತರು ಪಟಾಪಟಿ ಚಡ್ಡಿ ಧರಿಸಿ, ಕೈಯಲ್ಲಿ ಚಾವಟಿಕೋಲು ಹಿಡಿದುಕೊಂಡೇ ಬರುತ್ತಿದ್ದರು. ಆ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ’ ಎಂದು ನಗರದ ಚಿತ್ರಪ್ರೇಮಿ ಶಿವರಾಮೇಗೌಡ ಹೇಳುತ್ತಾರೆ.
ಜೋಡಿ ಚಿತ್ರಮಂದಿರ: ನಗರದಲ್ಲಿ ನಂದಾ ಹಾಗೂ ಜಯಲಕ್ಷ್ಮಿ ಚಿತ್ರಮಂದಿರಗಳು ಜೋಡಿಯಾಗಿ ಗುರುತಿಸಿಕೊಂಡಿದ್ದವು. ಒಂದೇ ಸಿನಿಮಾ ಎರಡೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದವು. ಅಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿಗೆ, ಇಲ್ಲಿ ಟಿಕೆಟ್ ಸಿಗದಿದ್ದರೆ ಅಲ್ಲಿಗೆ ಜನ ತೆರಳುತ್ತಿದ್ದರು.
ವಿಷ್ಣುವರ್ಧನ್ ಅಭಿನಯದ ಸಹೋದರರ ಸವಾಲ್, ಸ್ನೇಹಿತರ ಸವಾಲ್ , ವಿಜಯ್ ವಿಕ್ರಮ್ ಚಿತ್ರಗಳನ್ನು ಕಣ್ತುಂಬಿಕೊಂಡವರು ವಿಷ್ಣುವರ್ಧನ್ ಹಾಗೂ ನಂದಾ ಚಿತ್ರಮಂದಿರದ ಬೆಸುಗೆಯನ್ನು ಕಂಡಿದ್ದಾರೆ. ಡಾ.ರಾಜ್‌ಕುಮಾರ್ ಅವರ ಬಬ್ರುವಾಹನ, ರಾಜ ನನ್ನ ರಾಜ, ಭಕ್ತ ಸಿರಿಯಾಳ, ನಾನಿನ್ನ ಮರೆಯಲಾರೆ ಮುಂತಾದ ಚಿತ್ರಗಳು ಇಲ್ಲಿ ಅತೀ ಹೆಚ್ಚು ಪ್ರದರ್ಶನ ಕಂಡಿವೆ.
ಅಂಬರೀಷ್, ರವಿಚಂದ್ರನ್ ಚಿತ್ರಗಳೂ ಹೆಚ್ಚು ಓಡಿವೆ, ಹಲವು ಚಿತ್ರಗಳು ಶತದಿನೋತ್ಸವ ಸಂಭ್ರಮಿಸಿವೆ. 625 ಆಸನ ಸಾಮರ್ಥ್ಯದ ಟಾಕೀಸ್ ಚಿಕ್ಕ ಹಾಗೂ ಚಿಕ್ಕವಾಗಿತ್ತು.
ಉದ್ಯಾನ, ಕಾರಂಜಿ: ಚಿತ್ರಮಂದಿರ ಸುಂದರ ಉದ್ಯಾನ–ಕಾರಂಜಿಯಿಂದ ಗಮನ ಸೆಳೆಯುತ್ತಿತ್ತು. ಅದಕ್ಕಾಗಿಯೇ ಪೋಷಕರು ಮಕ್ಕಳನ್ನು ಕರೆತರುತ್ತಿದ್ದರು. ಪ್ರತಿ ವರ್ಷ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದಲ್ಲಿ ನಂದಾ ಟಾಕೀಸ್ ಪ್ರಥಮ ಬಹುಮಾನ ಪಡೆಯುತ್ತಿತ್ತು.
ಮೈಷುಗರ್‌ಗೆ ಬಂದ ರೈತರು ನಂದಾ ಮರೆಯಲುಂಟೆ? ನಂದಾ ಸರ್ಕಲ್, ಬಸ್ ನಿಲ್ದಾಣದಿಂದಲೂ ಪ್ರಸಿದ್ಧಿ ನೆಲಕ್ಕುರುಳಿದ ನಂದಾ ಟಾಕೀಸ್ ಗೋಡೆಗಳು
1961ರಿಂದ ಈತನಕ..
ಚಿತ್ರಮಂದಿರವನ್ನು ಎಚ್.ಸಿ ಚನ್ನಯ್ಯ 1961ರಲ್ಲಿ ಸ್ಥಾಪಿಸಿದರು. ಅವರ ಸಹೋದರ ಎಚ್.ಸಿ.ಶಂಕರಪ್ಪ ಮುನ್ನಡೆಸಿದರು. ನಂತರ ಅವರ ಮಕ್ಕಳಾದ ಶಶಿಕಾಂತ್ ಹಾಗೂ ಶ್ರೀಕಾಂತ್ ಮುನ್ನಡೆಸುತ್ತಿದ್ದರು. ‘ಚಿತ್ರಮಂದಿರವನ್ನು ಸಾಕಷ್ಟು ಒತ್ತಡಗಳ ನಡುವೆಯೂ ನಡೆಸಿಕೊಂಡು ಬರುತ್ತಿದ್ದೆವು. ಅಪ್ಪ ಹಾಕಿದ ಆಲದ ಮರಕ್ಕೆ ನೇತುಹಾಕಿಕೊಳ್ಳಲು ಸಾಧ್ಯವಿಲ್ಲ ನಮ್ಮನ್ನು ನಂಬಿದವರಿಗೆ ಏನಾದರೂ ಮಾಡಲೇಬೇಕು’ ಎಂದು ಮಾಲೀಕ ಶಶಿಕಾಂತ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.