ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕಾಮಗಾರಿ: ಸಂಸದೆ, ಶಾಸಕರಿಂದ ಪ್ರತ್ಯೇಕ ಭೂಮಿ ಪೂಜೆ

ಪಾಂಡವಪುರದ ಹುಲ್ಕೆರೆ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ
Last Updated 16 ಜನವರಿ 2021, 3:17 IST
ಅಕ್ಷರ ಗಾತ್ರ

ಪಾಂಡವಪುರ: ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಸುಮಲತಾ ಭೂಮಿ ಪೂಜೆ ನೆರವೇರಿಸಿದ ಎರಡು ತಿಂಗಳ ಬಳಿಕ ಅದೇ ಕಾಮಗಾರಿಗೆ ಶಾಸಕ ಸಿ.ಎಸ್‌.ಪುಟ್ಟರಾಜು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ತಾಲ್ಲೂಕಿನ ಹುಲ್ಕೆರೆ ಗ್ರಾಮದಿಂದ ಜಾಗಶೆಟ್ಟಹಳ್ಳಿ, ಎಂ.ಬೆಟ್ಟಹಳ್ಳಿ, ಶ್ಯಾದನಹಳ್ಳಿ ಮೂಲಕ ಜಾಗಟೆ ಮಲ್ಲೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ₹6.11 ಕೋಟಿ ಅಂದಾಜು ವೆಚ್ಚದ 7.51ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಲತಾ ನ.9ರಂದು ಹುಲ್ಕೆರೆ ಗ್ರಾಮದ ಬಳಿ ಭೂಮಿ ಪೂಜೆ ನೆರವೇರಿಸಿ,
ಕೇಂದ್ರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸು ತ್ತಿರುವುದಾಗಿ ತಿಳಿಸಿದ್ದರು.

ಶಾಸಕ ಸಿ.ಎಸ್.ಪುಟ್ಟರಾಜು ಅವರು ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅದೇ ಕಾಮಗಾರಿಗೆ ಶುಕ್ರವಾರ ಎಂ.ಬೆಟ್ಟಹಳ್ಳಿ ಹಾಗೂ ಶ್ಯಾದನಹಳ್ಳಿ ಗ್ರಾಮದ ಬಳಿ ಭೂಮಿ ಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಪುಟ್ಟರಾಜು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಕ್ಷೇತ್ರಕ್ಕೆ ಯಾವುದೇ ತೊಂದರೆ ನೀಡಿಲ್ಲ. ಮಂಜೂರಾದ ಎಲ್ಲ ಕಾಮಗಾರಿಗಳಿಗೂ ಅನುದಾನ ನೀಡುತ್ತಿದ್ದಾರೆ. ಅವರ ಕೋರಿಕೆಯ ಮೇರೆಗೆ ಎಂಡಿಸಿಸಿ ಬ್ಯಾಂಕ್‌ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ತರಲಾಯಿತು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ತಾ.ಪಂ.ಸದಸ್ಯ ಎಸ್.ವಿ.ನಿಂಗೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಣ್ಣಾಚಾರ್, ಕಾಂತರಾಜು, ಜೆಡಿಎಸ್ ಮುಖಂಡರಾದ ದ್ಯಾವಪ್ಪ, ಎನ್.ಬಸವರಾಜು, ಎಂ.ಎಸ್.ಮಂಜುನಾಥ್, ವೆಂಕಟೇಶ್, ಪ್ರಸನ್ನ, ಪವನ್‌, ಯಜಮಾನ್‌ ಶ್ರೀನಿವಾಸಗೌಡ, ಸ್ವಾಮಿಗೌಡ, ವಿಎಸ್‌ಎಸ್ಎನ್‌ಬಿ ಅಧ್ಯಕ್ಷ ಮಂಜುನಾಥ್‌, ಅಕ್ಷಯ ಚಲುರಾಜು, ಸೋಮೇಗೌಡ ಇದ್ದರು.

‘ತಾಲ್ಲೂಕಿನ ಹುಲ್ಕೆರೆ ಗ್ರಾಮದಿಂದ ಜಾಗಶೆಟ್ಟಹಳ್ಳಿ, ಎಂ.ಬೆಟ್ಟಹಳ್ಳಿ, ಶ್ಯಾದನಹಳ್ಳಿ ಗ್ರಾಮಗಳ ಮೂಲಕ ಜಾಗಟೆ ಮಲ್ಲೇನಹಳ್ಳಿ ಸೇರುವ ಸಂಪರ್ಕದ ಪ್ರಧಾನಿ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ₹ 6.11ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈ ಹಿಂದೆ ಸಂಸದೆ ಸುಮಲತಾ ಅವರು ಭೂಮಿ ಪೂಜೆ ನೆರವೇರಿಸಿದ್ದರೂ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ಕ್ಷೇತ್ರದ ಶಾಸಕರಾಗಿ ಸಿ.ಎಸ್.ಪುಟ್ಟರಾಜು ಅವರು ಅದೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ಪಿಎಂಜಿಎಸ್‌ವೈ ಎಇಇಕಾಳಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT