ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅವಧಿ ಮೀರಿದ ಮಾತ್ರೆ ವಿತರಣೆ, ಆಕ್ರೋಶ

ಆರೋಗ್ಯ ಇಲಾಖೆ ಸಿಬ್ಬಂದಿಯ ತಪ್ಪು ಪತ್ತೆ ಹಚ್ಚಿದ ವಿದ್ಯಾರ್ಥಿಗಳು, ನಿದ್ದೆಯಲ್ಲಿ ಜಿಲ್ಲಾಡಳಿತ
Last Updated 22 ಜನವರಿ 2022, 12:36 IST
ಅಕ್ಷರ ಗಾತ್ರ

ಮಂಡ್ಯ: ಮನೆಯಲ್ಲೇ ಪ್ರತ್ಯೇಕವಾಗಿರುವ ಕೋವಿಡ್‌ ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಮಾಡುತ್ತಿರುವುದು ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

3ನೇ ಅಲೆಯಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡದ ಕಾರಣ ವಿದ್ಯಾರ್ಥಿಗಳು ಸೋಂಕು ಪೀಡಿತರಾಗುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಕೋವಿಡ್‌ ಕೇರ್‌ ಕೇಂದ್ರದಿಂದ ಮಾತ್ರೆ ಪಡೆದು ಮನೆಯಲ್ಲೇ ಪ್ರತ್ಯೇಕವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೋವಿಡ್‌ ಕೇರ್‌ ಕೇಂದ್ರ, ಪಿಎಚ್‌ಸಿಗಳಲ್ಲಿ ನೀಡಿದ ಮಾತ್ರೆಗಳು ಅವಧಿ ಮೀರಿ ವರ್ಷ, 5–6 ತಿಂಗಳಾಗಿದ್ದು ಅವುಗಳನ್ನು ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸಾವಿರಾರು ಜನರು ಮಾತ್ರೆಗಳನ್ನು ಗಮನಿಸದೇ ಅವಧಿ ಮೀರಿದ ಮಾತ್ರೆಗಳನ್ನೇ ಸೇವನೆ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು, ವಿದ್ಯಾವಂತರು ಅವಧಿ ಮೀರಿದ ಮಾತ್ರೆಗಳನ್ನು ಬಿಸಾಡಿದ್ದಾರೆ, ಖಾಸಗಿ ಮೆಡಿಕಲ್‌ ಸ್ಟೋರ್‌ನಲ್ಲಿ ಮಾತ್ರೆ ಖರೀದಿಸಿ ಸೇವಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಅವಧಿ ಮೀರಿದ ಮಾತ್ರೆಗಳನ್ನು ವಾಪಸ್‌ ತಂದು ಕೊಟ್ಟಿದ್ದಾರೆ, ಈ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

‘ನನಗೆ ಕೆಮ್ಮು ಇದ್ದ ಕಾರಣ ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರಿಗೆ ತಿಳಿಸಿದೆ. ಅವರು ನನಗೆ ಹಳದಿ ಬಣ್ಣದ ಆ್ಯಂಟಿಬಯೋಟಿಕ್‌ ಮಾತ್ರೆಗಳನ್ನು ಕೊಟ್ಟರು. ಮನೆಗೆ ಬಂದು ಮಾತ್ರೆಯನ್ನು ಗಮನಿಸಿದಾಗ ಅದರ ಅವಧಿ 2021, ಜನವರಿಯಲ್ಲೇ ಮುಗಿದು ಹೋಗಿತ್ತು. ಹೀಗಾಗಿ ನಾನು ಆ ಮಾತ್ರೆ ಎಸೆದು ಮೆಡಿಕಲ್‌ ಸ್ಟೋರ್‌ನಿಂದ ಬೇರೆ ಮಾತ್ರೆ ಖರೀದಿಸಿ ಸೇವಿಸುತ್ತಿದ್ದೇನೆ’ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಹೋಂ ಐಸೊಲೇಷನ್‌ ಆಗಿರುವ ರೋಗಿಗಳಿಗೆ ಪ್ಯಾರಸಿಟಮಲ್‌, ಸಿಟ್ರೆಜನ್‌, ವಿಟಮಿನ್‌ ಸಿ ಮಾತ್ರೆಗಳನ್ನು ನೀಡಲಾಗುತ್ತಿದೆ. ಬಹುತೇಕ ಸಿಟ್ರೆಜನ್‌ ಮಾತ್ರೆಗಳು ಅವಧಿ ಮೀರಿದೆ. 1 ದಿನಕ್ಕೆ ಮಾತ್ರ ಗುಳಿಗೆ ನೀಡಿ ಉಳಿದ ದಿನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಡೆಯುವಂತೆ ಸೂಚಿಸಿ ಕಳುಹಿಸಲಾಗುತ್ತಿದೆ. ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕಿನ ಪಿಎಚ್‌ಸಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೀಡುತ್ತಿರುವ ಸಿಟ್ರೆಜನ್‌ ಮಾತ್ರೆಗಳು ಅವಧಿ ಮೀರಿದ್ದು ಅವುಗಳನ್ನೇ ವಿತರಣೆ ಮಾಡಲಾಗುತ್ತಿದೆ.

6 ತಿಂಗಳವರೆಗೆ ಬಳಸಬಹುದೇ?: ಅವಧಿ ಮೀರಿದ ಮಾತ್ರೆಗಳನ್ನು ನೀಡಿರುವ ಬಗ್ಗೆ ಬಹುತೇಕ ಕೇಂದ್ರಗಳಲ್ಲಿ ರೋಗಿಗಳು ಪ್ರಶ್ನಿಸಿದ್ದಾರೆ. ‘ಅವಧಿ ಮೀರಿದ್ದರೂ 6 ತಿಂಗಳವರೆಗೂ ಬಳಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ವೈದ್ಯರು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ನನಗೆ ಕೊಟ್ಟಿರುವ ಸಿಟ್ರೆಜನ್‌ ಮಾತ್ರೆಯ ಅವಧಿ 2021, ಅಕ್ಟೋಬರ್‌ಗೆ ಮುಗಿದು ಹೋಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಅವಧಿ ಮುಗಿದರೂ 6 ತಿಂಗಳವರೆಗೆ ಬಳಸಬಹುದು ಎಂದು ವೈದ್ಯರು ತಿಳಿಸಿದರು. ಆದರೆ ನನಗೆ ಅನುಮಾನ ಬಂದ ಕಾರಣ ಆ ಮಾತ್ರೆಗಳನ್ನು ಸೇವನೆ ಮಾಡುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ನೋಡಿಕೊಳ್ಳಬೇಕಾದ ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ’ ಎಂದು ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿಯ ರೋಗಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಅವಧಿ ಮೀರಿದ ಮಾತ್ರಗಳನ್ನು ಕೊಡುವುದು ತಪ್ಪು, ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರೆಗಳ ಅವಧಿ ಗಮನಿಸಬೇಕು. ಅವಧಿ ಮೀರಿದ ಮಾತ್ರೆ ಸೇವಿಸಿದರೆ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಎಚ್ಚರಿಸಿದರು.

*******

ಅವಧಿ ಮೀರಿದ ಮಾತ್ರೆಗಳನ್ನು ರೋಗಿಗಳಿಗೆ ನೀಡಕೂಡದು, ಈ ಬಗ್ಗೆ ಪರಿಶೀಲಿಸಲಾಗುವುದು. ಕೊಟ್ಟಿರುವುದು ನಿಜವಾದರೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು

–ಡಾ.ಟಿ.ಎನ್‌.ಧನಂಜಯ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT