ಮಂಡ್ಯ ಜನತೆ ನಮಗೆ ಮೋಸ ಮಾಡಿಲ್ಲ: ನಿಖಿಲ್ ಕುಮಾರಸ್ವಾಮಿ

ಭಾರತೀನಗರ: ‘ನನಗೆ ಮಂಡ್ಯ ಜಿಲ್ಲೆಯ ಜನತೆ ಮೋಸ ಮಾಡಲಿಲ್ಲ. ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಿದ್ದೇನೆಯೇ ಹೊರತು ಮಂಡ್ಯ ಜಿಲ್ಲೆಯ ಜನತೆಯಿಂದಲ್ಲ’ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿರುವ ಶಾಸಕ ಡಿ.ಸಿ. ತಮ್ಮಣ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಮಂಡ್ಯ- ಮೈಸೂರು, ರಾಮನಗರಕ್ಕೆ ಮಾತ್ರ ಜೆಡಿಎಸ್ ಪಕ್ಷ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಪ್ರಬಲವಾಗಿ ಬೆಳೆದಿದೆ. 2023ಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕ ಮನುಷ್ಯ. ಅವರು ಕೇವಲ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎಂದು ವಿರೋಧಿಗಳು ಅಣಕು ಮಾಡಿದರು. ಅವರು ಎಲ್ಲ ಜಿಲ್ಲೆಗಳಿಗೂ ಅನುದಾನವನ್ನು ಪಕ್ಷಭೇದ ಮರೆತು ನೀಡಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ಹೆಚ್ಚು ಅಭಿಮಾನ ಇದ್ದುದರಿಂದ ಸ್ವಲ್ಪ ಹೆಚ್ಚಿನ ಅನುದಾನ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.
ಜೆಡಿಎಸ್ ಮುಖಂಡ ಡಿ.ಟಿ. ಸಂತೋಷ್, ತಾಲ್ಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗೌರವಾಧ್ಯಕ್ಷ ಎಚ್.ಎಂ. ಮರಿಮಾದೇಗೌಡ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.