ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಶಾಲಾ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಅನಧಿಕೃತ ಶಾಲಾ ವಾಹನಗಳ ಓಡಾಟ, ಜೀವ ಕೈಯಲ್ಲಿ ಹಿಡಿದು ಪರಿತಪಿಸುವ ಪೋಷಕರು
Last Updated 21 ಜುಲೈ 2019, 20:00 IST
ಅಕ್ಷರ ಗಾತ್ರ

ಮಂಡ್ಯ: ಬೆಳಿಗ್ಗೆ ಬೇಗ ಎದ್ದು, ಮಕ್ಕಳನ್ನು ಸಿದ್ಧಗೊಳಿಸಿ ಶಾಲಾ ಬಸ್‌ ಹತ್ತಿಸಿದೊಡನೆ ಪೋಷಕರು ನೆಮ್ಮದಿಯಿಂದ ಇರುವಂತಿಲ್ಲ. ನಗರದಾದ್ಯಂತ ಅನಧಿಕೃತ ಶಾಲಾ ವಾಹನಗಳು ಓಡಾಡುತ್ತಿದ್ದು, ಮಕ್ಕಳು ಶಾಲೆ ತಲುಪಿ, ಮನೆ ಸೇರುವವರೆಗೂ ಪೋಷಕರು ಕೈಯಲ್ಲಿ ಜೀವ ಹಿಡಿದು ಪರಿತಪಿಸುವ ಪರಿಸ್ಥಿತಿ ಇದೆ.

ಹಲವು ಖ್ಯಾತನಾಮ ಶಾಲೆಗಳು ನಗರದ ಹೊರವಲಯದಲ್ಲಿವೆ. ಪ್ರತಿನಿತ್ಯ ಪುಟಾಣಿಗಳು 5–10 ಕಿ.ಮೀ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಕೆಲ ಶಾಲೆಗಳಲ್ಲಿ ಆಡಳಿತ ಮಂಡಳಿಯಿಂದಲೇ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಪೋಷಕರೇ ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ವಾಹನಗಳನ್ನು ಓಡಿಸುತ್ತಿರುವ ಕಾರಣ ಮಕ್ಕಳ ಮುಗ್ಧ ಜೀವಗಳನ್ನು ಅಪಾಯಕ್ಕೆ ದೂಡಿದಂತಾಗಿವೆ.

ಹಲವು ಖಾಸಗಿ ಶಾಲೆಗಳ ವಾಹನಗಳು ಅಗತ್ಯಕ್ಕಿಂತಲೂ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಓಡಾಡುತ್ತಿವೆ. ಆರಂಭದಲ್ಲಿ ಶುಲ್ಕ ಪಾವತಿಸುವಾಗ ಸುರಕ್ಷತಾ ಕ್ರಮ ಅನುಸರಿಸುವ ಬಗ್ಗೆ ವಾಗ್ದಾನ ನೀಡಿದ್ದ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು, ನಂತರ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಖಾಸಗಿ ಏಜಂಟರು ಓಡಿಸುತ್ತಿರುವ ಬಸ್‌, ಆಟೊ, ವ್ಯಾನ್‌ಗಳು ನಿತ್ಯ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಕಡೇ ಪಕ್ಷ ‘ಶಾಲಾ ವಾಹನ’ ಎಂಬ ಫಲಕವನ್ನೂ ಹಾಕದೇ ಮಕ್ಕಳನ್ನು ಕರೆದೊಯ್ಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ನಗರದ ಹೊರವಲಯದಲ್ಲಿರುವ ಶಾಲೆಗಳಿಗೆ 20 ವರ್ಷಗಳಿಗಿಂತಲೂ ಹಳೆಯದಾದ ಮಾರುತಿ ವ್ಯಾನ್‌, ಗೂಡ್ಸ್‌ ಆಟೊಗಳಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ವ್ಯಾನ್‌, ಆಟೊ ಸುತ್ತಲೂ ಮಕ್ಕಳ ಶಾಲಾ ಬ್ಯಾಗ್‌, ಲಂಚ್‌ ಬ್ಯಾಗ್‌ಗಳನ್ನು ನೇತುಹಾಕಿ ವಾಹನದೊಳಗೆ ಗಾಳಿಯೂ ಬಾರದಂತೆ ಮಾಡಲಾಗುತ್ತಿದೆ. ವ್ಯಾನ್‌ಗಳಲ್ಲಿ 25, ಆಟೊಗಳಲ್ಲಿ 20 ಮಕ್ಕಳು ಪ್ರಯಾಣ ಮಾಡುತ್ತಿರುವ ದೃಶ್ಯಗಳು ನಗರದೆಲ್ಲೆಡೆ ಸಾಮಾನ್ಯವಾಗಿ ಕಂಡು ಬರುತ್ತಿವೆ.

‘ಶಾಲೆಯ ಆರಂಭದಲ್ಲೇ ಬಸ್‌ ಶುಲ್ಕಕ್ಕಾಗಿಯೇ ₹15 ಸಾವಿರ ಪಾವತಿಸಬೇಕು. ಹೀಗಾಗಿ ನಮ್ಮ ಬೀದಿಯಲ್ಲಿರುವ 10 ಮಕ್ಕಳನ್ನು ಮಾರುತಿ ವ್ಯಾನ್‌ನಲ್ಲಿ ಕಳುಹಿಸುತ್ತಿದ್ದೇವೆ. ವ್ಯಾನ್‌ ಚಾಲಕ ಆರಂಭದಲ್ಲಿ ಹತ್ತೇ ಮಕ್ಕಳು ಎಂದಿದ್ದ, ಆದರೆ, ಈಗ 20 ಮಕ್ಕಳನ್ನು ತುಂಬಿಕೊಂಡು ಬರುತ್ತಿದ್ದಾನೆ. ಹೀಗಾಗಿ ಮಕ್ಕಳು ಮನೆಗೆ ಬರುವವರೆಗೂ ನಮಗೆ ಭಯವಾಗುತ್ತಿರುತ್ತದೆ’ ಎಂದು ಕಲ್ಲಹಳ್ಳಿಯ ಸಿದ್ದರಾಮೇಗೌಡ ಆತಂಕ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ಮಾರ್ಗಸೂಚಿ: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್‌ ಹಲವು ಬಾರಿ ಮಾರ್ಗಸೂಚಿ ರೂಪಿಸಿದೆ. ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇರಬೇಕು, ಜಿಪಿಎಸ್‌ ಅಳವಡಿಸಬೇಕು. ಅಗ್ನಿಶಾಮಕ ಉಪಕರಣ ಅಳವಡಿಕೆ ಕಡ್ಡಾಯ. ತುರ್ತು ನಿರ್ಗಮನ ಬಾಗಿಲು, ಪ್ರಥಮ ಚಿಕಿತ್ಸಾ ಕಿಟ್‌ ಇರಬೇಕು ಎಂದು ಸೂಚಿಸಿದೆ. ಆದರೆ, ಮಂಡ್ಯದಲ್ಲಿ ಓಡಾಡುವ ಶಾಲಾ ವಾಹನಗಳಲ್ಲಿ ಈ ಮಾರ್ಗಸೂಚಿಗಳ ಪಾಲನೆ ಶೂನ್ಯವಾಗಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಕೂಡ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುತ್ತಲೇ ಇದೆ. ಆದರೆ, ಇವುಗಳ ಪಾಲನೆ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಚಕಾರ ಎತ್ತುತ್ತಿಲ್ಲ. ಮಂಡ್ಯದಲ್ಲಿ ಶಾಲಾ ಬಸ್‌ ಓಡಿಸುವ ಯಾವೊಬ್ಬ ಚಾಲಕನೂ ಸಮವಸ್ತ್ರ ಧರಿಸುವುದಿಲ್ಲ. ಗುರುತಿನ ಚೀಟಿಯೂ ಇಲ್ಲ. ನಿಯಮಾವಳಿ ಪ್ರಕಾರ ವಾಹನದ ಸಂಪೂರ್ಣ ವಿವರ, ಚಾಲಕನ ಹೆಸರು, ಅನುಭವ, ಮೊಬೈಲ್‌ ಸಂಖ್ಯೆಯನ್ನು ಬಸ್‌ ಹೊರಭಾಗದಲ್ಲಿ ಪ್ರದರ್ಶಿಸಬೇಕು. ಆದರೆ, ನಗರದಲ್ಲಿ ಓಡಾಡುವ ಯಾವ ವಾಹನಗಳಲ್ಲೂ ವಿವರ ಪ್ರಕಟಣೆ ಮಾಡಿಲ್ಲ.

‘ನಿನ್ನೆ ಕ್ಲೀನರ್‌ ಆಗಿದ್ದವನು ಇಂದು ಡ್ರೈವರ್‌ ಸೀಟ್‌ನಲ್ಲಿ ಕುಳಿತಿರುತ್ತಾನೆ. ಶಾಲೆ ವತಿಯಿಂದ ಯಾವ ಸಿಬ್ಬಂದಿಯೂ ಇರುವುದಿಲ್ಲ. ಸಣ್ಣ ಮಕ್ಕಳಾದ ಕಾರಣ ಬಸ್‌ನೊಳಗಿನ ಚಿತ್ರಣ ಹೊರಕ್ಕೆ ಕಾಣುವುದಿಲ್ಲ. ಮಕ್ಕಳಿಗೆ ಸೀಟ್‌ ಕೂಡ ಸಿಗುವುದಿಲ್ಲ. ಇದೇ ಕಾರಣಕ್ಕೆ ಎರಡು ಬಸ್‌ ಬದಲಾಯಿಸಿದ್ದೇನೆ’ ಎಂದು ಪೋಷಕರಾದ ಶೈಲಜಾ ದೂರಿದರು.

ಡಕೋಟ ಎಕ್ಸ್‌ಪ್ರೆಸ್‌ಗಳು: ನಗರ ದಲ್ಲಿ ಓಡಾಡುವ ಬಹುತೇಕ ಶಾಲಾ ವಾಹನಗಳು ಡಕೋಟ ಎಕ್ಸ್‌ಪ್ರೆಸ್‌ ಗಳಾಗಿವೆ. ನಿಯಮಾವಳಿ ಪ್ರಕಾರ ಪ್ರತಿ ಬಸ್‌ನಲ್ಲಿ ವೇಗ ನಿಯಂತ್ರಕ (ಸ್ಪೀಡ್‌ ಗೌರ್ನರ್‌) ಅಳವಡಿಸಿರಬೇಕು. ಆ ಬಗ್ಗೆ ಬಸ್‌ನಲ್ಲಿ ಸೂಚನಾ ಫಲಕ ಇರಬೇಕು. ಆದರೆ, ಈ ಫಲಕ ಯಾವ ಬಸ್‌ಗಳಲ್ಲೂ ಇಲ್ಲ. ವಾಹನ ಅನುಮತಿ ಪತ್ರ, ಮಾಲಿನ್ಯ ಸುರಕ್ಷಾ ಪ್ರಮಾಣ ಪತ್ರದ ಚೀಟಿ ಅಂಟಿಸಿರಬೇಕು. ಆದರೆ ಅದನ್ನೂ ಅಂಟಿಸಿಲ್ಲ.

ಶಾಲಾ ವಾಹನ ಚಾಲನೆ ಮಾಡುವ ಚಾಲಕ ಕಡ್ಡಾಯವಾಗಿ ನಾಲ್ಕು ವರ್ಷ ಅನುಭವ ಪಡೆದಿರಬೇಕು. ಆ ಬಗ್ಗೆ ಯಾವ ಚಾಲಕನ ಬಳಿಯೂ ಪ್ರಮಾಣ ಪತ್ರ ಇಲ್ಲ.‌ ಜೊತೆಗೆ ವಾಹನಗಳು ನೋಂದಣಿಯಾಗಿ 15 ವರ್ಷ ಮೀರಿರುವಂತಿಲ್ಲ. ಆದರೆ, 20 ವರ್ಷಕ್ಕೂ ಹಳೆಯದಾದ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಹಲವು ಬಸ್‌ಗಳು ರಸ್ತೆ ನಡುವೆಯೇ ಕೆಟ್ಟು ನಿಂತ ಹಲವು ಉದಾಹರಣೆಗಳಿವೆ. ಆಗ ಪೋಷಕರು ವೈಯಕ್ತಿಕ ವಾಹನಗಳಲ್ಲಿ ತೆರಳಿ ಮಕ್ಕಳನ್ನು ಮನೆಗೆ ಕರೆ ತಂದಿದ್ದಾರೆ. ನಗರದಲ್ಲಿ ಅನುಮತಿ ಪಡೆದ 320 ಶಾಲಾ ವಾಹನ, 1,200 ಆಟೊ, ವ್ಯಾನ್‌ಗಳಿವೆ. ಆದರೆ ಅನುಮತಿ ಪಡೆಯದೇ ಇರುವ ಸಾವಿರಾರು ವಾಹನಗಳು ರಸ್ತೆಯಲ್ಲಿವೆ.

‘ನಮ್ಮ ಶಾಲೆಯ ಬಸ್‌ಗಳಲ್ಲಿ ಓಡಾಡುವ ಮಕ್ಕಳಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರ ಯಾವುದೇ ದೂರುಗಳಿಲ್ಲ. ಆಟೊ, ವ್ಯಾನ್‌ಗಳಲ್ಲಿ ಬರುವ ಮಕ್ಕಳ ಸುರಕ್ಷತೆ ಬಗ್ಗೆ ನಾವು ಜವಾಬ್ದಾರರಲ್ಲ’ ಎಂದು ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಹೇಳಿದರು.

ಶಾಲಾ ವಾಹನಗಳ ಪ್ರತ್ಯೇಕ ತಪಾಸಣೆ ಇಲ್ಲ
ಶಾಲಾ ವಾಹನಗಳು ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿರುವ ಬಗ್ಗೆ ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ಪ್ರತ್ಯೇಕವಾಗಿ ತಪಾಸಣೆ ಮಾಡುತ್ತಿಲ್ಲ. ಆದರೆ, ನಿಯಮಾವಳಿ ಪ್ರಕಾರ ಸಾರಿಗೆ ಇಲಾಖೆಯಲ್ಲಿ ಶಾಲಾ ವಾಹನಗಳ ತಪಾಸಣೆಗೆ ಪ್ರತ್ಯೇಕ ತಂಡ ಇರಬೇಕು. ಮಂಡ್ಯ ಕಚೇರಿಯಲ್ಲಿ ಎಲ್ಲಾ ವಾಹನಗಳನ್ನು ಒಟ್ಟಾರೆಯಾಗಿ ತಪಾಸಣೆ ಮಾಡಲಾಗುತ್ತಿರುವ ಕಾರಣ ಅನಧಿಕೃತ ಶಾಲಾ ವಾಹನಗಳಿಗೆ ಕಡಿವಾಣ ಇಲ್ಲದಂತಾಗಿದೆ.

‘ಶಾಲೆಯ ವತಿಯಿಂದ ನೋಂದಣಿ ಮಾಡಲಾಗಿರುವ ವಾಹನಗಳ ಪರಿಶೀಲನೆ ಮಾಡುತ್ತಿಲ್ಲ. ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರು ಸುರಕ್ಷತಾ ನಿಯಮ ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ. ಖಾಸಗಿ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಎಸ್‌.ಪುರುಷೋತ್ತಮ್‌ ಹೇಳಿದರು.

ಶಾಲೆಗಳಲ್ಲಿ ಇಲ್ಲದ ಸುರಕ್ಷತಾ ಸಮಿತಿ
ಸರ್ಕಾರ ರೂಪಿಸಿರುವ ನಿಯಮಾವಳಿ ಪ್ರಕಾರ, ಪ್ರತಿ ಶಾಲೆಯಲ್ಲೂ ‘ಸುರಕ್ಷತಾ ಸಮಿತಿ’ ರಚನೆ ಆಗಿರಬೇಕು. ಶಾಲೆ ಆರಂಭವಾಗುವ ಜೂನ್‌ನಲ್ಲಿ ಮಕ್ಕಳ ಸುರಕ್ಷತಾ ಸಭೆ ನಡೆಯಬೇಕು. ಈ ಸಮಿತಿಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು, ವಾಹನ ಮಾಲೀಕರು, ಚಾಲಕರು, ಶಿಕ್ಷಣ, ಸಾರಿಗೆ, ಪೊಲೀಸ್‌ ಇಲಾಖೆ ಸಿಬ್ಬಂದಿ ಇರಬೇಕು. ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ಆಡಳಿತ ಮಂಡಳಿ ವಿವರಿಸಬೇಕು. ಇದನ್ನು ಸಾರಿಗೆ ಹಾಗೂ ಪೊಲೀಸರು ಪರಿಶೀಲಿಸ ಬೇಕು. ಆದರೆ, ಮಂಡ್ಯದ ಯಾವ ಶಾಲೆಯಲ್ಲೂ ಸಮಿತಿ ರಚನೆಯಾಗಿಲ್ಲ.

*
ಮಂಡ್ಯದಲ್ಲಿ ಬಾಲಕರು ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಶಾಲಾ ವಾಹನಗಳ ಪರಿಶೀಲನೆಯನ್ನೂ ಮಾಡುತ್ತಿದ್ದೇವೆ.
-ಟಿ.ಎಸ್‌.ಪುರುಷೋತ್ತಮ್‌, ಆರ್‌ಟಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT