ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಪ್ಟೆಂಬರ್ 13ಕ್ಕೆ ಮಂಡ್ಯ ವಿವಿ ಘಟಿಕೋತ್ಸವ: ಕುಲಪತಿ ಪ್ರೊ.ಪುಟ್ಟರಾಜು ಮಾಹಿತಿ

Published : 12 ಸೆಪ್ಟೆಂಬರ್ 2024, 13:39 IST
Last Updated : 12 ಸೆಪ್ಟೆಂಬರ್ 2024, 13:39 IST
ಫಾಲೋ ಮಾಡಿ
Comments

ಮಂಡ್ಯ: ಇಲ್ಲಿಯ ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವದ ಅಂಗವಾಗಿ 2,155 ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಪುಟ್ಟರಾಜು ತಿಳಿಸಿದರು. 

ಸೆ.13ರಂದು ಬೆಳಿಗ್ಗೆ 11.30ಕ್ಕೆ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮೊದಲನೇ ಮತ್ತು ಎರಡನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ. ಮಂಡ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಭಾಗವಹಿಸುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಿಳಾ ಪದವೀಧರರೇ ಹೆಚ್ಚು

ಸ್ನಾತಕ ವಿಭಾಗದಲ್ಲಿ 734 ಮಹಿಳಾ ಪದವೀಧರರು, 732 ಪುರುಷ ಪದವೀಧರರು ಸೇರಿದಂತೆ ಒಟ್ಟು 1,466 ಪದವೀಧರರು ಇದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ 438 ಮಹಿಳಾ ಪದವೀಧರರು, 251 ಪುರುಷ ಪದವೀಧರರು ಸೇರಿದಂತೆ ಒಟ್ಟು 689 ಪದವೀಧರರು ಇದ್ದಾರೆ. ಒಟ್ಟು 1172 ಮಹಿಳಾ ಪದವೀಧರರು ಮತ್ತು 983 ಪುರುಷ ಪದವೀಧರರು ಪ್ರಮಾಣ ಪತ್ರ ಪಡೆಯಲಿದ್ದಾರೆ ಎಂದು ತಿಳಿಸಿದರು. 

ಮಂಡ್ಯ ವಿವಿಯಲ್ಲಿ ಮಹಿಳಾ ಪದವೀಧರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಹಿಳೆಯರ ಉನ್ನತ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಆದ್ಯತೆ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು. 

159 ರ‍್ಯಾಂಕ್‌ ವಿಜೇತರು

ಸ್ನಾತಕ ವಿಭಾಗದಲ್ಲಿ 86, ಸ್ನಾತಕೋತ್ತರ ವಿಭಾಗದಲ್ಲಿ 73 ಸೇರಿದಂತೆ ಒಟ್ಟು 159 ಪದವೀಧರರು ರ‍್ಯಾಂಕ್‌ ವಿಜೇತರಾಗಿದ್ದಾರೆ. ಇವರಲ್ಲಿ 46 ಪದವೀಧರರು ಪ್ರಥಮ ರ‍್ಯಾಂಕ್‌ನಲ್ಲಿ, 36 ಪದವೀಧರರು ದ್ವಿತೀಯ ರ‍್ಯಾಂಕ್‌, 16 ಪದವೀಧರರು ತೃತೀಯ ರ‍್ಯಾಂಕ್‌ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. 

90 ವಿದ್ಯಾರ್ಥಿಗಳಿಗೆ ದತ್ತಿ ನಗದು

ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಪ್ರೊ.ಚಂದ್ರಮ್ಮ, ಮಾಲತಿ, ಮರೀಗೌಡ, ಶಶಿಕಲಾ, ಗೌರಮ್ಮ, ಡಿ.ನರಸಿಂಹಸ್ವಾಮಿ, ಪುಟ್ಟಮ್ಮ ಸೇರಿದಂತೆ 13 ದತ್ತಿ ದಾನಿಗಳು ವಿವಿಧ ವಿಷಯಗಳಿಗೆ ದತ್ತಿನಿಧಿ ಇಟ್ಟಿದ್ದಾರೆ. ಇದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ದತ್ತಿ ನಗದು ಬಹುಮಾನ ನೀಡಲಾಗುತ್ತದೆ. ಅದರಂತೆ ಈ ಬಾರಿ ಸ್ನಾತಕ ವಿಭಾಗದಲ್ಲಿ 42, ಸ್ನಾತಕೋತ್ತರ ವಿಭಾಗದಲ್ಲಿ 48 ಸೇರಿದಂತೆ 90 ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಅತಿಥಿ ಉಪನ್ಯಾಸಕರ ನೇಮಕ

ಅತಿಥಿ ಉಪನ್ಯಾಸಕರ ಅವಧಿ ಮುಗಿದಿದ್ದು, ಮರು ನೇಮಕಕ್ಕೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುವ ಭರವಸೆ ಇದ್ದು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ತರಗತಿ ನಡೆಸಲು ಕ್ರಮವಹಿಸುತ್ತೇವೆ ಎಂದು ಕುಲಪತಿ ತಿಳಿಸಿರು. 

ವಿವಿ ಸಿಂಡಿಕೇಟ್ ಸದಸ್ಯ ಬಸವರಾಜ ಯತ್ತಹಳ್ಳಿ, ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ. ಯೋಗನರಸಿಂಹಚಾರಿ, ಕುಲಸಚಿವ (ಪ್ರಭಾರ) ಡಾ.ಎಸ್.ಎಸ್. ಸುರೇಶ್, ಪ್ರಾಂಶುಪಾಲೆ ಪ್ರೊ.ಸ್ವರ್ಣಾ ಇದ್ದರು.

‘ಚಿನ್ನದ ಪದಕ ಪ್ರದಾನಕ್ಕೆ ಕ್ರಮ’

ಸಿಂಡಿಕೇಟ್‌ ಸಭೆ ಕರೆದು ನಿಯಮಾವಳಿ ಪ್ರಕಾರ ಮುಂದಿನ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಹೆಚ್ಚುವರಿ ದತ್ತಿ ನಗದು ಬಹುಮಾನ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಪುಟ್ಟರಾಜು ತಿಳಿಸಿದರು. 

ರಾಜ್ಯದ 7 ಹೊಸ ವಿವಿಗಳಲ್ಲಿ ಒಂದಾದ ಮಂಡ್ಯ ವಿವಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಂದಿಲ್ಲ. ಕುಲಪತಿ ಒಬ್ಬರೇ ಕಾಯಂ ನೌಕರ. ಉಳಿದ ಹುದ್ದೆಗಳಿಗೆ ಎರವಲು ಸೇವೆಯನ್ನು ಪಡೆಯಲಾಗಿದೆ. ಅನುದಾನ ಮತ್ತು ಕಾಯಂ ಬೋಧಕರ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು. 

‘ಕನ್ನಡದಲ್ಲೇ ಪ್ರಶ್ನೆಪತ್ರಿಕೆ ನೀಡಲು ಆದ್ಯತೆ’

ಎಂ.ಎ. ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ನೀಡುವ ಬದಲು ಇಂಗ್ಲಿಷ್‌ ಭಾಷೆಯಲ್ಲಿ ನೀಡಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಮೈಸೂರು ವಿವಿ ಮಾದರಿಯಲ್ಲಿ ಇಂಗ್ಲಿಷ್‌ನಲ್ಲೇ ಪ್ರಶ್ನೆಪತ್ರಿಕೆ ನೀಡಿದ್ದೆವು. ಮುಂದಿನ ಬಾರಿ ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಪ್ರಶ್ನೆಪತ್ರಿಕೆ ನೀಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಕುಲಪತಿ ಪ್ರೊ.ಪುಟ್ಟರಾಜು ತಿಳಿಸಿದರು. 

ದೋಷಪೂರಿತ ಅಂಕಪಟ್ಟಿಗೆ ಸಂಬಂಧಿಸಿದಂತೆ, ಸರಿಪಡಿಸಲು ಈಗಾಗಲೇ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗಿದೆ. ಮೌಲ್ಯಮಾಪನದಲ್ಲಿ ತಪ್ಪು ಎಸಗಿದ ಮೌಲ್ಯಮಾಪಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT