ಮಂಗಳವಾರ, ಜನವರಿ 21, 2020
20 °C

ಮಂಡ್ಯ ವಿವಿ ರದ್ದಾಗಿಲ್ಲ: ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನೂತನ ಮಂಡ್ಯ ಕೇಂದ್ರೀಕೃತ ವಿಶ್ವವಿದ್ಯಾಲಯ ರದ್ದಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಮಂಡ್ಯ ವಿವಿ ಕಾಯ್ದೆ 2019 ಅಂಗೀಕಾರವಾಗಿದ್ದು ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಬಾರದು ಎಂದು ವಿವಿ ಪ್ರಭಾರ ವಿಶೇಷಾಧಿಕಾರಿ ಡಾ.ಮಹಾಲಿಂಗು ಸ್ಪಷ್ಟಪಡಿಸಿದ್ದಾರೆ.

ಮಂಡ್ಯ ವಿವಿ ರದ್ದಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ಗೊಂದಲಕ್ಕೆ ಸಿಲುಕಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಮಂಡ್ಯ ವಿಶ್ವವಿದ್ಯಾಲಯ ರದ್ದಾಗಲು ಸಾಧ್ಯವಿಲ್ಲ. ವಿವಿ ಸ್ಥಾಪನೆ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಅವುಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಮೊದಲಿದ್ದ ವಿಶೇಷಾಧಿಕಾರಿ ಡಾ.ಮಹದೇವ ನಾಯಕ್‌ ಅವರು ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ರಚನೆ, ರಾಜ್ಯಪಾಲರ ಅನುಮೋದನೆಗೂ ಮೊದಲು ಸಿಬ್ಬಂದಿ ನೇಮಕಾತಿ, ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಂಡಿದ್ದಾರೆ. ಮೊದಲ ಸೆಮಿಸ್ಟರ್‌ ಪರೀಕ್ಷೆಯನ್ನೂ ನಡೆಸಿದ್ದಾರೆ. ದಾಖಲಾಗಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಯುವವರೆಗೂ ಮೊದಲಿನಂತೆಯೇ ಸರ್ಕಾರಿ ಮಹಾವಿದ್ಯಾಲಯದ ಅಡಿಯಲ್ಲೇ ವಿದ್ಯಾರ್ಥಿಗಳ ಪದವಿ ಮುಂದುವರಿಸಲು ಸರ್ಕಾರ ಸೂಚಿಸಿದೆ ಎಂದು ತಿಳಿಸಿದ್ದಾರೆ.

‘ನಾನು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರ ಸಂಪರ್ಕದಲ್ಲಿ ಇದ್ದೇನೆ. ಅವರ ಮಾರ್ಗದರ್ಶನಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅಡಿ ವಿವಿ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಮುಂದೆ ಬರುವ ವಿಶೇಷಾಧಿಕಾರಿ, ಕುಲಪತಿಗಳು ವಿವಿಯನ್ನು ಮುನ್ನಡೆಸುತ್ತಾರೆ. ವಿಶ್ವವಿದ್ಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ’ ಎಂದು ಡಾ.ಮಹಾಲಿಂಗು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು