ಶುಕ್ರವಾರ, ನವೆಂಬರ್ 27, 2020
18 °C
ಅನ್ನ ಸಂತರ್ಪಣೆ ಆಯೋಜಿಸಿದ್ದ ವೈದ್ಯ ಕುಟಂಬ, ಘಟನೆಗೆ ಕಾರಣರಾದವರ ಮೇಲೆ ಪ್ರಕರಣ

ಲಿಂಗಪಟ್ಟಣ ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯಕೀಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಗೂರು (ಮಂಡ್ಯ ಜಿಲ್ಲೆ): ಸಮೀಪದ ಲಿಂಗಪಟ್ಟಣದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲೇ ಬೀಡುಬಿಟ್ಟಿದ್ದು ಜನರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ಇಬ್ಬರು ವೈದ್ಯರು, ನಾಲ್ವರು ನರ್ಸ್‌ಗಳು, 10 ಮಂದಿ ಆಶಾಕಾರ್ತೆಯರ ತಂಡ ಗ್ರಾಮದಲ್ಲೇ ಇದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸುತ್ತಿದ್ದಾರೆ. ಪೊಲೀಸರ ತಂಡ ಕೂಡ ಗ್ರಾಮದಲ್ಲಿದ್ದು ಜನರು ಭಯಪಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರಸಾದ ಸೇವನೆಯಿಂದ ಹೆಚ್ಚು ಸುಸ್ತಾಗಿದ್ದ 10 ಮಂದಿಯನ್ನು ಬುಧವಾರ ರಾತ್ರಿ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಡಾ.ಕೆ.ಅನ್ನದಾನಿ, ಗ್ರಾಮದ ಶಾಲೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರನ್ನೂ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿಸಿದರು.

‘ಎಲ್ಲರ ಆರೋಗ್ಯ ಸ್ಥಿರವಾಗಿದೆ, ಪುಳಿಯೊಗರೆ ಸೇವಿಸಿದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ಭಯಪಡದಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ತಿಳಿಸಿದರು.

ವೈದ್ಯ ಕುಟುಂಬದಿಂದ ಅನ್ನದಾನ: ಲಿಂಗಪಟ್ಟಣ ಗ್ರಾಮದವರೇ ಆದ ವೈದ್ಯ ಕುಟುಂಬವೊಂದು ಮಂಗಳವಾರ ಮಾರಮ್ಮ ದೇವಿಗೆ ಪೂಜೆ ಆಯೋಜಿಸಿ ಅನ್ನಸಂತರ್ಪಣೆ ಮಾಡಿದ್ದರು. ಪ್ರಸಾದ ಸೇವಿಸಿದ ವೈದ್ಯ ಕುಟುಂಬ ಸದಸ್ಯರಿಗೂ ವಾಂತಿ, ಭೇದಿ ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ.

‘ಕೋವಿಡ್‌ ಅವಧಿಯಲ್ಲಿ ನಿಯಮ ಪಾಲನೆ ಮಾಡಬೇಕಾದ ವೈದ್ಯರ ಕುಟುಂಬ ಸದಸ್ಯರೇ ನಿಯಮ ಉಲ್ಲಂಘಿಸಿ ಅನ್ನ ಸಂತರ್ಪಣೆ ಮಾಡಿರುವುದು ತಪ್ಪು. ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.