ಮಂಗಳವಾರ, ಸೆಪ್ಟೆಂಬರ್ 27, 2022
27 °C
ಜಾರ್ಖಂಡ್‌ ಮೂಲದ ಸಂಸ್ಥೆಗೆ ಗಣಿ ಪರಿಣಾಮ ಅಧ್ಯಯನದ ಪರಿಣತಿ ಇದೆಯೇ?

ಮಂಡ್ಯ | ಕಲ್ಲು ಗಣಿಯಲ್ಲಿ ಪರೀಕ್ಷಾರ್ಥ ಸ್ಫೋಟ, ವಿಜ್ಞಾನಿಗಳ ಮೇಲೆ ಅನುಮಾನ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಾರ್ಖಂಡ್‌, ಧನ್‌ಬಾದ್‌ ಮೂಲದ ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ ವಿಜ್ಞಾನಿಗಳ ತಂಡ ಕೆಆರ್‌ಎಸ್‌ ಆಸುಪಾಸಿನಲ್ಲಿ ಜುಲೈ 25ರಿಂದ ಪರೀಕ್ಷಾರ್ಥ ಸ್ಫೋಟ ನಡೆಸಲು ಸಜ್ಜಾಗಿದೆ. ಆದರೆ, ಜಿಲ್ಲೆಯ ರೈತ ಮುಖಂಡರು, ಹೋರಾಟಗಾರರು ವಿಜ್ಞಾನಿಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಧನಬಾಗ್‌ನಲ್ಲಿರುವ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆಯು (ಸಿಎಸ್‌ಐಆರ್‌–ಸಿಐಎಂಎಫ್‌ಆರ್‌) ಮೂಲ ಸೌಲಭ್ಯಗಳಿಲ್ಲದೇ ನರಳುತ್ತಿದೆ, ಅಲ್ಲಿಯ ವಿಜ್ಞಾನಿಗಳು ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಮೇಲಾಗುತ್ತಿರುವ ಪರಿಣಾಮಗಳ ಎಷ್ಟರಮಟ್ಟಿಗೆ ಅಧ್ಯಯನ ಮಾಡಬಲ್ಲರು ಎಂದು ಮುಖಂಡರು ಪ್ರಶ್ನಿಸಿದ್ದಾರೆ.

ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ, ಶ್ರೀರಂಗಪಟ್ಟಣ ತಾಲ್ಲೂಕಿನ ಗಣಿ ಚಟುವಟಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕದಲ್ಲೇ ಇರುವ, ಸರ್ಕಾರದ ಅಂಗ ಸಂಸ್ಥೆಯಾಗಿರುವ ವಿಜ್ಞಾನಿಗಳ ತಂಡ ಧಕ್ಕೆ ಇದೆ ಎಂಬು ಅಭಿಪ್ರಾಯ ಪಟ್ಟ ನಂತರ ದೂರದ ಜಾರ್ಖಂಡ್‌ ರಾಜ್ಯದಲ್ಲಿರುವ ಇನ್ನೊಂದು ಸಂಸ್ಥೆ ಕರೆಸಿ ಸ್ಫೋಟ ನಡೆಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

‘ಜಾರ್ಖಂಡ್‌ ಸಂಸ್ಥೆಯ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಗಣಿ ಸ್ಫೋಟದ ಪರಿಣಾಮ ಅಧ್ಯಯನ ಮಾಡುವಷ್ಟು ತಾಂತ್ರಿಕ ಪರಿಣತಿ ಅಲ್ಲಿಯ ವಿಜ್ಞಾನಿಗಳಿಗೆ ಇಲ್ಲ. ಜೊತೆಗೆ ಆಧುನಿಕ ಯಂತ್ರೋಪಕರಣಗಳೂ ಅವರ ಬಳಿ ಇಲ್ಲ. ಕಾವೇರಿ ನೀರಾವರಿ ನಿಗಮ, ಗಣಿ ಇಲಾಖೆ ನೀಡಿರುವ ಹಣದಲ್ಲಿ ಅವರು ಪರೀಕ್ಷೆ ನಡೆಸಲಿದ್ದಾರೆ. ಗಣಿ ಮಾಲೀಕರ ಪರವಾಗಿಯೇ ವರದಿ ಬರುವ ಸಾಧ್ಯತೆ ಇದೆ. ಗಣಿ ಇಲಾಖೆ ಅಧಿಕಾರಿಗಳು ಕೂಡ ಗಣಿ ಮಾಲೀಕರ ಪರವಾಗಿಯೇ ಇದ್ದಾರೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಅನುಮಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಇದೇ ಸಂಸ್ಥೆಯ ವಿಜ್ಞಾನಿಗಳ ತಂಡ ಪರೀಕ್ಷಾರ್ಥ ಸ್ಫೋಟ ನಡೆಸಲು ಸಿದ್ಧತೆ ನಡೆಸಿತ್ತು. ಆದರೆ ರೈತ ಮುಖಂಡರು ಗೋ ಬ್ಯಾಕ್‌ ಚಳವಳಿ ನಡೆಸಿದ ಪರಿಣಾಮ ಯಾವುದೇ ಪರೀಕ್ಷೆ ನಡೆಸದೇ ಹಿಂದಿರುಗಿತ್ತು. ಈ ಬಾರಿ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ವ್ಯಾಪಕ ಪೊಲೀಸ್‌ ಭದ್ರತೆ ಪಡೆದು ಪರೀಕ್ಷಾರ್ಥ ಸ್ಫೋಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

‘ವಿಜ್ಞಾನಿಗಳ ತಂಡ ಕೇವಲ 10 ಅಡಿ ಕುಳಿ ತೋಡಿ ಪರೀಕ್ಷಾ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಗಣಿ ಮಾಲೀಕರು 35 ಅಡಿವರೆಗೆ ಕುಳಿ ತೋಡಿ ಗಣಿ ಸ್ಫೋಟ ನಡೆಸುತ್ತಾರೆ. ಇದರಿಂದ ಯಾವುದೇ ಕಾರಣಕ್ಕೂ ಸತ್ಯ ಹೊರಬರುವುದಿಲ್ಲ. ಬೇಬಿಬೆಟ್ಟದ ಆಸುಪಾಸಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಿದರೆ ಕೆಆರ್‌ಎಸ್‌ಗೆ ಯಾವುದೇ ಧಕ್ಕೆ ಇಲ್ಲ ಎಂಬ ವರದಿ ಪಡೆಯಲು ಗಣಿ ಮಾಲೀಕರು, ಭ್ರಷ್ಟ ಅಧಿಕಾರಿಗಳು ಪರೀಕ್ಷಾ ಸ್ಫೋಟದ ನಾಟಕವಾಡುತ್ತಿದ್ದಾರೆ’ ಎಂದು ಹೋರಾಟಗಾರ ರಮೇಶ್‌ ಆರೋಪಿಸಿದರು.

ಗಣಿ ಮಾಲೀಕರ ಪರವಾದ ವರದಿ
‘ಬೇಬಿಬೆಟ್ಟ ಆಸುಪಾಸಿನಲ್ಲಿ ಕಲ್ಲು ಸ್ಫೋಟ ನಡೆಸಿದರೆ ಕೆಆರ್‌ಎಸ್‌ ಜಲಾಶಯಕ್ಕೆ ಯಾವುದೇ ಧಕ್ಕೆ ಇಲ್ಲ’ ಎಂಬ ವರದಿಯನ್ನು 2007ರಲ್ಲೇ ಗಣಿ ಮಾಲೀಕರು ಪಡೆದಿದ್ದರು. ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಎಂಜನಿಯರ್‌ಗಳ ತಂಡ ರಚಿಸಿ ಅವರಿಂದ ಗಣಿ ಮಾಲೀಕರು ಪರವಾದ ವರದಿ ಪಡೆದಿದ್ದರು.

ಆದರೆ ಈ ವರದಿ ವಿರುದ್ಧ ರೈತಮುಖಂಡ, ಶಾಸಕರಾಗಿದ್ದ ದಿ.ಪುಟ್ಟಣ್ಣಯ್ಯ ಹೋರಾಟ ನಡೆಸಿದ್ದರು, ಸದನದಲ್ಲೂ ಚರ್ಚೆ ನಡೆಸಿದ್ದರು. ಈಗಲೂ ಅದೇ ರೀತಿ ಗಣಿ ಮಾಲೀಕರ ಪರ ವರದಿ ಬರಬಹುದು ಎಂಬ ಅನುಮಾನ ರೈತ ಮುಖಂಡರಲ್ಲಿದೆ.

‘ಪರೀಕ್ಷಾ ಸ್ಫೋಟದ ವಿರುದ್ಧ ನಾವು ಈ ಬಾರಿ ಹೋರಾಟ ನಡೆಸುವುದಿಲ್ಲ. ಆದರೆ ಗಣಿ ಮಾಲೀಕರ ಪರವಾದ ವರದಿ ನೀಡಿದರೆ ಅದರ ವಿರುದ್ಧ ಹೋರಾಟ ನಡೆಸುತ್ತೇವೆ. ಕೆಆರ್‌ಎಸ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ನಡೆಸಲು ನಾವು ಅವಕಾಶ ನೀಡುವುದಿಲ್ಲ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಹೇಳಿದರು.

*
ಪರೀಕ್ಷಾರ್ಥ ಸ್ಫೋಟಕ್ಕೆ ಪೊಲೀಸ್‌ ಭದ್ರತೆ ಒದಗಿಸ ಲಾಗಿದೆ. ಪರೀಕ್ಷಾ ಸ್ಥಳವನ್ನು ಗಣಿ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗುರುತಿಸುತ್ತಿದ್ದಾರೆ.
-ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು