ದೂರುಗಳ ಸುರಿಮಳೆ: ಅಧಿಕಾರಿಗಳ ಬೆವರಿಳಿಸಿದ ಶಾಸಕ!

7

ದೂರುಗಳ ಸುರಿಮಳೆ: ಅಧಿಕಾರಿಗಳ ಬೆವರಿಳಿಸಿದ ಶಾಸಕ!

Published:
Updated:
ಶ್ರೀರಂಗಪಟ್ಟಣದ ತಾಲ್ಲೂಕು ಬೀಚನಕುಪ್ಪೆ ಗ್ರಾಮದಲ್ಲಿ, ಕೊಳಚೆ ಗುಂಡಿಯ ಪಕ್ಕದಲ್ಲೇ ಶನಿವಾರ ಜನ ಸಂಪರ್ಕ ಸಭೆ ನಡೆಯಿತು

ಶ್ರೀರಂಗಪಟ್ಟಣ: ‘ನಮ್ಮೂರಿನಲ್ಲಿ ಇದುವರೆಗೆ ಒಮ್ಮೆಯೂ ಗ್ರಾಮ ಸಭೆ ನಡೆದಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಕುಡಿಯುವ ನೀರು ಬರುತ್ತದೆ. ರಸ್ತೆಯೂ ಇಲ್ಲ ಚರಂಡಿಯೂ ಇಲ್ಲ. ದಿನದಲ್ಲಿ ಮೂರು ಅಥವಾ ನಾಲ್ಕು ತಾಸು ಮಾತ್ರ ವಿದ್ಯುತ್‌ ಇರುತ್ತದೆ. ಮತಗಟ್ಟೆ ಇಲ್ಲದ ಕಾರಣ ಮತ ಹಾಕಲು ಮೂರು ಕಿ.ಮೀ. ದೂರದ ಹೊಸ ಉಂಡವಾಡಿಗೆ ಹೋಗಬೇಕು....’ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಬೀಚನಕುಪ್ಪೆ ಗ್ರಾಮದಲ್ಲಿ ಜನರಿಂದ ಕೇಳಿ ಬಂದ ಪ್ರಮುಖ ದೂರುಗಳಿವು.

ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ಸಂಪರ್ಕ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಎದುರು ಗ್ರಾಮದ ಮಧು, ಪುಟ್ಟತಾಯಮ್ಮ, ಸುಂದರಮ್ಮ, ಪಾಪೇಗೌಡ ಅಹವಾಲು ಸಲ್ಲಿಸಿದರು.

‘ನಮ್ಮ ಗ್ರಾಮಕ್ಕೆ ಪಿಡಿಒ ಒಮ್ಮೆಯೂ ಭೇಟಿ ನೀಡಿಲ್ಲ. ಇಷ್ಟಕ್ಕೂ ಪಿಡಿಒ ಯಾರೆಂಬುದೇ ನಮಗೆ ಗೊತ್ತಿಲ್ಲ. ನಡು ಬೀದಿಯಲ್ಲಿರುವ ಕೆಸರು ಗುಂಡಿಯನ್ನು ನೀವೇ ನೋಡಿ’ ಎಂದು ಹೇಳಿದರು.

ಇದರಿಂದ ಕೋಪಗೊಂಡ ರವೀಂದ್ರ ಶ್ರೀಕಂಠಯ್ಯ, ಹುಲಿಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಣ್ಣಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಊರಿನಲ್ಲಿ ಒಬ್ಬರಿಗೂ ನೀವು ಪಿಡಿಒ ಅಂತ ಗೊತ್ತಿಲ್ಲ. ಸ್ವಚ್ಛತೆ ಕೆಲಸ ನಡೆದಿಲ್ಲ. ವಾರಕ್ಕೆ ಎರಡು ದಿನ ಕುಡಿಯುವ ನೀರು ಕೊಡುವುದು ಅಂದ್ರೆ ಏನರ್ಥ. ಅದೂ ಅಶುದ್ಧ ನೀರು ಬರ್ತಾ ಇದೆ ಎಂದು ಜನರು ದೂರುತ್ತಿದ್ದಾರೆ. ಆ ಕೆಸರು ಗುಂಡಿಯನ್ನು ನೋಡಿ, ಹೇಗಿದೆ’ ಎಂದು ಸಭೆ ನಡೆಯುತ್ತಿದ್ದ ಪಕ್ಕದಲ್ಲೇ ಇದ್ದ ಕೆಸರು ಗುಂಡಿಯನ್ನು ತೋರಿಸಿ ಪ್ರಶ್ನಿಸಿದರು.

‘ಶಿಥಿಲಗೊಂಡಿರುವ ವಿದ್ಯುತ್‌ ಕಂಬಗಳನ್ನು ಶೀಘ್ರ ಬದಲಿಸಬೇಕು. ವಿದ್ಯುತ್‌ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಸಮಪರ್ಕ ವಿದ್ಯುತ್‌ ಪೂರೈಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ ಜಕ್ಕನಕುಪ್ಪೆ ಗ್ರಾಮವನ್ನು ಸೇರಿಸಬೇಕು. ಪಡಿತರ ಚೀಟಿ ಸಿಗದವರ ಪಟ್ಟಿ ಸಿದ್ಧಪಡಿಸಬೇಕು. ವರ್ಷದ ಹಿಂದೆಯೇ ಮಾಸಾಶನ ಮಂಜೂರಾಗಿದ್ದರೂ ಹಣ ಬಿಡುಗಡೆ ಆಗಿಲ್ಲ ಎಂದು ಜನರು ಹೇಳುತ್ತಿದ್ದು, ತುರ್ತು ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ಕೆಆರ್‌ಎಸ್‌ನಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯರು ಅಹವಾಲು ಸಲ್ಲಿಸಿದರು.

‘ನೋಟಿಫೈ ಏರಿಯ ಎಂದು ಘೋಷಣೆ ಆಗಿರುವ ಕಾರಣ ಕೆಆರ್‌ಎಸ್‌ನಲ್ಲಿ ಸುಮಾರು 1,800 ಮನೆಗಳಿಗೆ ಸೂಕ್ತ ದಾಖಲೆಗಳಿಲ್ಲ. ಈ ಸಂಬಂಧ ಸದನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ. ಕೆಆರ್‌ಎಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಪೊಲೀಸರು ಕ್ರಮ ವಹಿಸಬೇಕು. ಕೆಆರ್‌ಎಸ್‌ ಜಲಾಶಯದ ಭದ್ರತೆಗೆ ನಿಯೋಜನೆಗೊಂಡಿರುವ ಕೈಗಾರಿಕಾ ಭದ್ರತಾಪಡೆಯ ಸಿಬ್ಬಂದಿ ಸ್ಥಳೀಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಹೊಂಗಹಳ್ಳಿಯಲ್ಲಿ ರಸ್ತೆ ಮತ್ತು ಚರಂಡಿ ಸಮಸ್ಯೆ ಬಗ್ಗೆ ದೂರು ಬಂದಿದ್ದು ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಹಿಂದುಳಿದ ಬವರಿ ಜನರು ತಮ್ಮನ್ನು ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ರವೀಂದ್ರ ಶ್ರೀಕಂಠಯ್ಯ ಅವರಿಗೆ ಮನವಿ ಸಲ್ಲಿಸಿದರು.

‘ಕ್ಷೇತ್ರದಲ್ಲಿ ಲಭ್ಯ ಇರುವ ಗ್ರಾಮ ಠಾಣಾ ಜಾಗವನ್ನು ಗುರುತಿಸಿ ಮಾಹಿತಿ ನೀಡಬೇಕು. ಅದರ ಜತೆಗೆ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎ.ದರ್ಶನ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಲೋಕೇಶ್‌. ಮಾಜಿ ಸದಸ್ಯ ಎ.ಎಚ್‌.ನಾರಾಯಣಗೌಡ, ಜೆಡಿಎಸ್‌ ಕ್ಷೇತ್ರ ಘಟದ ಅಧ್ಯಕ್ಷ ಮುಕುಂದ, ಸೆಸ್ಕ್‌ ಎಇಇ ಮಂಜುನಾಥಪ್ರಸಾದ್‌, ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಬಸವರಾಜು, ಕಾವೇರಿ ನೀರಾವರಿ ನಿಗಮದ ಎಇಇ ತಮ್ಮೇಗೌಡ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ವೆಂಕಟೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸ್ವಾಮಿಗೌಡ, ಬಿ.ವಿ.ಲೋಕೇಶ್‌, ಸುರೇಶ್‌, ಕೆಆರ್‌ಎಸ್‌ ಮಂಜು, ವಿಜಯಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !