ಶನಿವಾರ, ಸೆಪ್ಟೆಂಬರ್ 19, 2020
27 °C
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಮಳವಳ್ಳಿ ತಾಲ್ಲೂಕು ಕುಂದೂರು ಸರ್ಕಾರಿ ಪ್ರೌಢಶಾಲೆ

ಮಳವಳ್ಳಿ : ಶಾಲೆಯಲ್ಲೇ ವಾಸ್ತವ್ಯ ಹೂಡುವ ಮುಖ್ಯ ಶಿಕ್ಷಕ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಿಂಗಳಿರುವಾಗ ಮಳವಳ್ಳಿ ತಾಲ್ಲೂಕು ಕುಂದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾತ್ರಿ ವೇಳೆಯಲ್ಲೂ ತರಗತಿ ನಡೆಯುತ್ತವೆ. ಶಾಲೆಯಲ್ಲೇ ವಾಸ್ತವ್ಯ ಹೂಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಮುಖ್ಯಶಿಕ್ಷಕ ಮಹಾದೇವ ಪ್ರಸಾದ್‌ ಗುಣಮಟ್ಟದ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕುಂದೂರು ಪ್ರೌಢಶಾಲೆಯ ಚಿತ್ರಣವೇ ಬದಲಾಗಿದೆ. ಮಕ್ಕಳ ಗೈರುಹಾಜರಿಯಿಂದ ಸಂಕಷ್ಟ ಅನುಭವಿಸುತ್ತಿದ್ದ ಶಾಲೆಗೆ ಮಹಾದೇವ ಪ್ರಸಾದ್‌ ಹೊಸ ರೂಪ ಕೊಟ್ಟಿದ್ದಾರೆ. ಪೋಷಕರ ಮೊಬೈಲ್‌ ನಂಬರ್‌ ಸಂಗ್ರಹಿಸಿಟ್ಟುಕೊಂಡಿರುವ ಅವರು ಮಕ್ಕಳು ಶಾಲೆಗೆ ಬಾರದಿದ್ದಾಗ ನೇರವಾಗಿ ಪೋಷಕರಿಗೆ ಕರೆಮಾಡಿ ವಿಚಾರಿಸುತ್ತಾರೆ. ಪ್ರತಿಯೊಂದು ಮಗುವಿನ ಬೆಳವಣಿಗೆಯ ಮೇಲೂ ನಿಗಾ ಇಟ್ಟಿರುವ ಅವರು ಆಗಾಗ ಮಕ್ಕಳ ಮೌಲ್ಯ ಮಾಪನ ಮಾಡುತ್ತಾರೆ.

ಪ್ರತಿದಿನ ವಿದ್ಯಾರ್ಥಿ ಮನೆಗೆ ತೆರಳುವಾಗ ಅಂದು ಕಲಿತ ಪಾಠದ ವಿವರವನ್ನು ಡೈರಿಯಲ್ಲಿ ನಮೂದಿಸುವ ಗುಣ ಬೆಳೆಸಿದ್ದಾರೆ. ಅಂದಿನ ಪಾಠವನ್ನು ಶಾಲೆಯಲ್ಲೇ ಕಲಿತು ಮನೆಗೆ ತೆರಳುವ ಪರಿಪಾಠ ರೂಢಿಸಿದ್ದಾರೆ. ಶಾಲೆಯ ಇತರ ಐವರು ಶಿಕ್ಷಕರ ಸಹಕಾರದ ಮೂಲಕ ಹೊಸ ಮಾದರಿಯ ಬೋಧನಾ ವ್ಯವಸ್ಥೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾದೇವ ಪ್ರಸಾದ್‌ ಅವರು ಕುಂದೂರು ಗ್ರಾಮಕ್ಕೆ ಬರುವುದಕ್ಕೂ ಮೊದಲು ಬ್ಯಾಡರಹಳ್ಳಿಯಲ್ಲಿ 22 ವರ್ಷ, ಬೆಳ್ಳಾಳೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಘೋಷಣೆಯಾಗುತ್ತಿದ್ದಂತೆ ಶಾಲೆಯಲ್ಲೇ ವಾಸ್ತವ್ಯ ಹೂಡುವ ಅವರು ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡುತ್ತಾರೆ. ಆಗ ಶಾಲಾ ಸಮಯ ಬದಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ವಿಶೇಷ ತರಗತಿ ನಡೆಯುತ್ತವೆ. 9.30ರಿಂದ ಸಂಜೆ 4.30ರವರೆಗೆ ನಿತ್ಯದ ತರಗತಿ ನಡೆಯುತ್ತವೆ. ನಂತರ 4.30ರಿಂದ 5.30ರವರೆಗೆ ವಿಶೇಷ ತರಗತಿ ಇರುತ್ತದೆ. ಮತ್ತೆ ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೂ ರಾತ್ರಿ ಪಾಠ ಇರುತ್ತದೆ.

ರಾತ್ರಿ ಪಾಠದ ನಂತರ ಮಕ್ಕಳೆಲ್ಲರೂ ಮನೆಗೆ ತೆರಳುತ್ತಾರೆ. ಕಡ್ಡಾಯವಾಗಿ ಪೋಷಕರೇ ಬಂದು ಕರೆದೊಯ್ಯುವಂತೆ ನಿಯಮ ರೂಪಿಸಲಾಗಿದೆ. ಶಾಲೆಯಲ್ಲೇ ಅಡುಗೆ ಮಾಡಿಕೊಳ್ಳುವ ಮಹಾದೇವ ಪ್ರಸಾದ್‌ ಅಲ್ಲೇ ವಾಸ್ತವ್ಯ ಹೂಡುತ್ತಾರೆ. ಇದಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಕಾರ ಇದೆ.

ಪ್ರೌಢಶಾಲೆಯ ಕಟ್ಟಡ ನಕ್ಷತ್ರಾಕಾರದಲ್ಲಿದ್ದು ಆವರಣದಲ್ಲಿ 200ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಿಡ ಬೆಳೆಸಲಾಗಿದೆ. ಅರಣ್ಯದ ವಾತಾವರಣವಿದ್ದು ಮಕ್ಕಳು ಮರದಡಿಯಲ್ಲೇ ಓದುತ್ತಾ ವಿಶೇಷ ಅನುಭವ ಪಡೆಯುತ್ತಾರೆ. ಮಹಾದೇವ ಪ್ರಸಾದ್‌ ಇಲ್ಲಿಗೆ ಬರುವುದಕ್ಕೂ ಮೊದಲು ಶಾಲಾ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು ಬೀಡಾಡಿ ದನ, ನಾಯಿಗಳು ಇಲ್ಲಿರುತ್ತಿದ್ದವು. ಆದರೆ ಈಗ ಆವರಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದು ಸ್ವಚ್ಛ, ಸುಂದರ ಪರಿಸರ ಸೃಷ್ಠಿಸಲಾಗಿದೆ.

ಹೊಸ ಕಾಲಕ್ಕೆ ತಕ್ಕಂತೆ ಆಧುನಿಕ ಸೌಲಭ್ಯಗಳ ಸ್ಮಾರ್ಟ್‌ ತರಗತಿಯನ್ನೂ ಶಾಲೆಯಲ್ಲಿ ತೆರೆಯಲಾಗಿದೆ. ಸರ್ಕಾರದ ಅನುದಾನಕ್ಕಾಗಿ ಕಾಯದೇ ದಾನಿಗಳ ಮೂಲಕ ಪರಿಕರ ಪಡೆಯಲಾಗಿದೆ. ಇಂಡಿಯನ್‌ ಲಿಟರಸಿ ಪ್ರಾಜೆಕ್ಟ್‌ ಕಡೆಯಿಂದ ಲ್ಯಾಪ್‌ಟಾಪ್‌, ಪ್ರೋಜೆಕ್ಟರ್‌, ಸ್ಕ್ರೀನ್‌, ನಾಲ್ಕು ಮಾನಿಟರ್‌ಗಳನ್ನು ಪಡೆಯಲಾಗಿದೆ. ಪ್ರೌಢಶಾಲೆಯ ಪ್ರತಿಯೊಂದು ಮಗುವೂ ಕಂಪ್ಯೂಟರ್‌ ಜ್ಞಾನ ಪಡೆಯಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.

‘ಇಂಡಿಯನ್‌ ಲಿಟೆರಸಿ ಪ್ರಾಜೆಕ್ಟ್‌ನವರು ಸಿದ್ಧಪಡಿಸಿರುವ ಗಣಿತ, ವಿಜ್ಞಾನ, ಸಮಾಜ ಪಠ್ಯವನ್ನು ಮಕ್ಕಳಿಗೆ ಬೋಧಿಸುತ್ತಿದ್ದೇವೆ. ಇದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಿದೆ’ ಎಂದು ಮುಖ್ಯಶಿಕ್ಷಕ ಮಹಾದೇವ ಪ್ರಸಾದ್‌ ಹೇಳಿದರು.

**

ಮಕ್ಕಳಿಗೆ ಸಿರಿಧಾನ್ಯಗಳ ಬಿಸ್ಕತ್‌ ವಿತರಣೆ

ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ. ಅದರ ಜೊತೆಗೆ ಈ ಶಾಲೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ, ಅಪಾರ ಪೌಷ್ಟಿಕಾಂಶವುಳ್ಳ ಬಿಸ್ಕತ್‌ ವಿತರಣೆ ಮಾಡಲಾಗುತ್ತಿದೆ. ಮಕ್ಕಳು ಹಾಲಿನ ಜೊತೆಗೆ ಬಿಸ್ಕತ್‌ ಸವಿಯುತ್ತಾರೆ. ಗ್ರಾಮದ ಪಕ್ಕದಲ್ಲೇ ಇರುವ ಕಾರ್ಖಾನೆಯಿಂದ ಸಿರಿಧಾನ್ಯ ಬಿಸ್ಕತ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ‘ಕಾರ್ಖಾನೆಯ ಮುಖ್ಯಸ್ಥ ಮಹೇಶ್‌ ನಮ್ಮ ಮಕ್ಕಳಿಗೆ ಉಚಿತವಾಗಿ ಬಿಸ್ಕತ್‌ ನೀಡುತ್ತಿದ್ದಾರೆ. ದಾನಿಗಳು ಮಕ್ಕಳಿಗೆ ಪಠ್ಯ ಪುಸ್ತಕ, ಬ್ಯಾಗ್‌ ವಿತರಣೆ ಮಾಡುತ್ತಿದ್ದಾರೆ’ ಎಂದು ಶಿಕ್ಷಕರು ತಿಳಿಸಿದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು