ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿಗೆ ತುಡಿಯುವ ಮಹಮ್ಮದ್ ಇಲಿಯಾಜ್

Last Updated 15 ನವೆಂಬರ್ 2020, 2:08 IST
ಅಕ್ಷರ ಗಾತ್ರ

ಕೊಪ್ಪ: ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಬೆಳೆಸಿಕೊಂಡವರು ಬೆಸಗರಹಳ್ಳಿ ಮಹಮ್ಮದ್ ಇಲಿಯಾಜ್. ಅವರ ತನು, ಮನವೆಲ್ಲಾ ಕನ್ನಡವೇ ತುಂಬಿದೆ.

ತಾಲ್ಲೂಕಿನಲ್ಲಿ ಎಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯೋತ್ಸವ ಆಚರಣೆ ನಡೆದರೂ ಅಲ್ಲಿ ಹಾಜರಿರುತ್ತಾರೆ. ಕನ್ನಡ ಬಾವುಟದ ಬಣ್ಣ ಹೊಂದಿರುವ ಅಂಗಿ, ಪೇಟ ಧರಿಸಿ ಉತ್ಸಾಹಿ ಯುವಕನಂತೆ ಕನ್ನಡಮ್ಮನ ಸೇವೆ ಮಾಡುತ್ತಾರೆ.

ಪ್ರತಿ ವರ್ಷ 10ನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕನ್ನಡ ನಾಡು ನುಡಿಗೆ ದುಡಿದವರನ್ನು ಗುರುತಿಸಿ ಸ್ವಂತ ಹಣ ಖರ್ಚು ಮಾಡಿ ಕಳೆದ 8 ವರ್ಷಗಳಿಂದ ಅಭಿನಂದನಾ ಸಮಾರಂಭ ಆಯೋಜಿಸುತ್ತಿದ್ದಾರೆ.

ಕೊಪ್ಪದಲ್ಲಿ ಸಣ್ಣ ವಾಚ್‌ ಅಂಗಡಿ ಇಟ್ಟುಕೊಂಡಿರುವ ಮಹಮ್ಮದ್‌, ತಮ್ಮ ಅಂಗಡಿಗೆ ಕನ್ನಡ ಬಾವುಟದ ಬಣ್ಣವನ್ನು ಹೊಡೆಸಿದ್ದಾರೆ. ಕೊಪ್ಪ ಭಾಗದ ಯಾವುದೇ ಹಿಂದೂ ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳಲ್ಲಿ ಭಾಗವಹಿಸಿ ದೇವತಾ ಕಾರ್ಯಗಳಲ್ಲಿ ಸೇವೆ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಉತ್ತಮವಾಗಿ ಅಲಂಕಾರ ಮಾಡುವ ರಾಸುಗಳಿಗೆ ಬಹುಮಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ವಿವಿಧ ಶಾಲಾ ಮಕ್ಕಳಿಗೆ ರಾಷ್ಟ್ರ ನಾಯಕರ ವೇಷಭೂಷಣ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡುತ್ತಿದ್ದಾರೆ.

ಇವರು ಜಿಲ್ಲಾ, ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಂಘ ಸಂಸ್ಥೆಗಳ ಅಭಿನಂದನೆಗಳಿಗೆ ಪಾತ್ರರಾಗಿದ್ದಾರೆ.

‘ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು. ಕನ್ನಡ ನಾಡು ಸೌಹಾರ್ದದಿಂದ ಬದುಕುವ ಅವಕಾಶ ಕಲ್ಪಿಸಿದೆ. ನಾಡಿನ ಋಣ ತೀರಿಸಲು ನಾನು ನಿರಂತರವಾಗಿ ಕನ್ನಡದ ಸೇವೆ ಮಾಡುತ್ತಿದ್ದೇನೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದೇನೆ’ ಎಂದು ಮಹಮ್ಮದ್ ಇಲಿಯಾಜ್ ಹೇಳಿದರು.

***

ನಾಡು, ನೆಲ, ಜಲ, ಭಾಷೆಗೆ ಧಕ್ಕೆಯಾದಾಗ ಈ ಭಾಗದಲ್ಲಿ ಮೊದಲು ಹೋರಾಟಕ್ಕಿಳಿಯುವ ವ್ಯಕ್ತಿಯೇ ಮಹಮ್ಮದ್. ಅವರ ಕನ್ನಡ ಪ್ರೀತಿಯನ್ನು ಮೆಚ್ಚಲೇಬೇಕು.

-ಯದುಶೈಲಾ ಸಂಪತ್, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

***

ರಾಜ್ಯೋತ್ಸವ, ರಾಷ್ಟ್ರೀಯ ಮತ್ತು ಹಿಂದೂಗಳ ಹಬ್ಬಗಳಲ್ಲಿ ಮಹಮ್ಮದ್‌ ಭಾಗವಹಿಸಿ ಕಾರ್ಯ ಕ್ರಮದ ಯಶಸ್ಸಿಗೆ ಶ್ರಮಿಸುತ್ತಾರೆ.

-ಹುರುಗಲವಾಡಿ ರಾಮಯ್ಯ, ಜಾನಪದ ಅಕಾಡೆಮಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT