ಶುಕ್ರವಾರ, ಏಪ್ರಿಲ್ 16, 2021
25 °C
ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮ

ಚುನಾವಣೆಗೆ ಸ್ಪರ್ಧಿಸಲು ಹಣವೇ ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಗೂರು: ‘ಮತದಾರರು ಬುದ್ಧಿವಂತರಾಗಿ ಚುನಾವಣೆಗಳಲ್ಲಿ ಮತ ಚಲಾಯಿಸದೇ ನಮ್ಮ ದೇಶಕ್ಕೆ ಭವಿಷ್ಯವಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನುಡಿದರು.

ಸಮೀಪದ ಹಾಡ್ಲಿ ಮೇಗಳಾಪುರ ಸರ್ಕಲ್ ಬಳಿ ಎಚ್.ಡಿ.ಕುಮಾರಣ್ಣ ಗೆಳೆಯರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮೊದಲ ವರ್ಷದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಜನರೇ ಹಣ ಸಂಗ್ರಹಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಯಕರನ್ನು ಆಯ್ಕೆ ಮಾಡುತ್ತಿದ್ದರು. ಇಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಲು ಒಬ್ಬೊಬ್ಬರು ಕನಿಷ್ಟ ₹ 3 ಲಕ್ಷ ವೆಚ್ಚ ಮಾಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಕೊಟ್ಯಂತರ ರೂಪಾಯಿ ಹಣ ಖರ್ಚು ಮಾಡಲಿದ್ದಾರೆ. ಬಡವರು, ಪ್ರಮಾಣಿಕರು, ನಿಜವಾದ ಸಮಾಜ ಸೇವೆ ಮಾಡ ಬಯಸುವವರು ಚುನಾವಣೆ ಎದುರಿಸಲಾಗದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.

‘ಕೆಲವು ಜನಪ್ರತಿನಿಧಿಗಳಿಂದ ಸಾರ್ವಜನಿಕ ವಲಯದಲ್ಲಿ ಅಸಹ್ಯ ಮೂಡುವಂಥ ವಾತಾವರಣ ನಿರ್ಮಾಣವಾಗಿದ್ದು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಬಡವರ ಪರ ಕೆಲಸ ಮಾಡುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ’ ಎಂದು ಕರೆ ನೀಡಿದರು.

‘ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರಾಗಿದ್ದಾಗ ಮಾಡಿದ ಕೆಲಸ ಅಪಾರವಾದುದು. ನಾನು ಮುಖ್ಯಮಂತ್ರಿ ಆಗಿದ್ದಾಗ 189 ಪ್ರಥಮ ದರ್ಜೆ ಕಾಲೇಜು, 450 ಸರ್ಕಾರಿ ಪದವಿ ಪೂರ್ವ ಕಾಲೇಜು, 1,400 ಪ್ರೌಢಶಾಲೆಗಳನ್ನು ಆರಂಭಿಸಿ, 54 ಸಾವಿರ ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಗಳನ್ನು ನೇಮಕಾತಿ ಮಾಡಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೆ. ಸಾವಿರಾರು ಕುಟುಂಬಗಳು ಇವರ ಕಾರ್ಯವನ್ನು ಸ್ಮರಿಸುತ್ತಿವೆ’ ಎಂದು ಹೇಳಿದರು.

‘ಸದ್ಯದಲ್ಲೇ ತಾಲ್ಲೂಕು ಕೇಂದ್ರದಲ್ಲಿ ಪಕ್ಷದ ಸಭೆ ಸೇರಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ನನ್ನ ಮೇಲೆ ಭರವಸೆ ಇಟ್ಟು ವಿಧಾನ ಪರಿಷತ್ ಸಭಾಪತಿ ಮಾಡಿದ್ದಾರೆ. ಕಪ್ಪು ಚುಕ್ಕೆ ಇಲ್ಲದಂತೆ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವೆ’ ಎಂದರು.

ಶಾಸಕ ಡಾ. ಕೆ.ಅನ್ನದಾನಿ ಮಾತನಾಡಿ, ‘ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ₹1,300 ಕೋಟಿ ಅನುದಾನವನ್ನು ತಡೆಹಿಡಿಯಲಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದರೆ ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವೆ’ ಎಂದು ಹೇಳಿದರು.

ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯ‌ಕ್ಷ ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ರವಿ ಕಂಸಾಗರ, ಮಾದೇಗೌಡ, ಪುರಸಭಾ ಉಪಾಧ್ಯಕ್ಷ ನಂದ ಕುಮಾರ್, ಮಲ್ಲೇಗೌಡ, ಸುಹಾಸ್‌ ಮಹದೇವಯ್ಯ, ರಾಜಣ್ಣ, ಪುಟ್ಟಸ್ವಾಮಿ, ಸೋಮಶೇಖರ್, ಸೇರಿದಂತೆ ಹಲವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು