ಬುಧವಾರ, ಜನವರಿ 22, 2020
23 °C

ಅನೈತಿಕ ಸಂಬಂಧ ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಘಟನೆ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ.

ತಾಲ್ಲೂಕಿನ ರಾಜೇಗೌಡನದೊಡ್ಡಿ ಗ್ರಾಮದ ನಿವಾಸಿ ರಂಗಸ್ವಾಮಿ ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದರು. ಅನೈತಿಕ ಸಂಬಂಧಕ್ಕಾಗಿ ರಂಗಸ್ವಾಮಿ ಪತ್ನಿ ರೂಪಾ ತನ್ನ ಪ್ರಿಯಕರ ಮುತ್ತುರಾಜನೊಂದಿಗೆ ಸೇರಿ ಕೊಲೆ ಮಾಡಿ ಚೆಂದಹಳ್ಳಿ ಗ್ರಾಮದ ಕೆರೆಯ ಬಳಿ ಶವ ಹೂತು ಹಾಕಿದ್ದರು. ಈಗ ಸತ್ಯ ಒಪ್ಪಿಕೊಂಡಿದ್ದು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ರಂಗಸ್ವಾಮಿ ಚಾಮರಾಜನಗರ ಜಿಲ್ಲೆ ರಾಮಪುರ ಗ್ರಾಮದ ನಿವಾಸಿ. ಮದ್ದೂರಿನ ಭೀಮನಕೆರೆ ಗ್ರಾಮದ ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದರು. ರಂಗಸ್ವಾಮಿ ಹಾಗೂ ರೂಪಾ ಪ್ರೇಮ ವಿವಾಹ ಮಾಡಿಕೊಂಡು 15 ವರ್ಷ ಸಂಸಾರ ಮಾಡಿದ್ದರು. ದಂಪತಿಗೆ ಮೂರು ಮಕ್ಕಳಿದ್ದಾರೆ.

ರೂಪಾ ರಾಜೇಗೌಡನದೊಡ್ಡಿಯ ಮುತ್ತುರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ವಿಷಯ ತಿಳಿದ ರಂಗಸ್ವಾಮಿ ಗಲಾಟೆ ಮಾಡಿದ್ದರು. ರೂಪಾ ಹಾಗೂ ಮುತ್ತುಸ್ವಾಮಿ ಸೇರಿ ರಂಗಸ್ವಾಮಿ ಅವರನ್ನು ಕೊಲೆ ಮಾಡಿ ಶವ ಹೂತು ಹಾಕಿದ್ದರು. ಪತಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು.

ನಂತರ ರೂಪಾ ಮುತ್ತುರಾಜು ಜೊತೆ ಪಟ್ಟಣದಲ್ಲಿ ಸಂಸಾರ ನಡೆಸುತ್ತಿದ್ದರು. ಇಬ್ಬರ ನಡುವೆ ಜಗಳ ಉಂಟಾಗಿ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾರೆ. ರಂಗಸ್ವಾಮಿ ಅಣ್ಣ ಮುತ್ತೇಲಿ ಮದ್ದೂರು ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ವಿಷಯ ಒಪ್ಪಿಕೊಂಡಿದ್ದಾರೆ.

ಕೆರೆ ಸಮೀಪ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು