ಗುರುವಾರ , ಅಕ್ಟೋಬರ್ 21, 2021
27 °C
ಮೈಷುಗರ್‌ ಧರಣಿ ಸ್ಥಳಕ್ಕೆ ಭೇಟಿ; ಏಕೈಕ ಸರ್ಕಾರಿ ಕಾರ್ಖಾನೆ ಉಳಿಸುವಂತೆ ಹೋರಾಟಗಾರರ ಮನವಿ

ಮೈಷುಗರ್‌ ಉಳಿವಿಗಾಗಿ ಹೋರಾಟ: ರೈತರ ನಿರೀಕ್ಷೆಯಂತೆ ಸರ್ಕಾರ ಕ್ರಮ, ಎಸ್‌.ಎಂ.ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಗೆ ಶೋಭಾಯಮಾನದಂತಿರುವ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು ಎಂಬುದು ಜಿಲ್ಲೆಯ ಜನರ ಆಶಯ, ಅದರಂತೆ ನಾನೂ ಮುಖ್ಯಮಂತ್ರಿ ಅವರಿಗೆ ಲಿಖಿತವಾಗಿ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿಗಳು ರೈತರ ನಿರೀಕ್ಷೆಯಂತೆ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಹೇಳಿದರು.

ಮೈಸೂರು ದಸರಾ ಉದ್ಘಾಟನೆ ತೆರಳುತ್ತಿದ್ದ ಎಸ್‌.ಎಂ.ಕೃಷ್ಣ ಅವರು ಮಾರ್ಗ ಮಧ್ಯೆ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಮೈಷುಗರ್‌ ಕಾರ್ಖಾನೆಯು ನಮ್ಮ ಜಿಲ್ಲೆಯ ಅತ್ಯಂತ ಪ್ರಮುಖ ಕೈಗಾರಿಕೆ.  ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ಅದು ಉಳಿಯಬೇಕು ಎಂಬ ಒತ್ತಾಯಕ್ಕೆ ನಮ್ಮ ಬೆಂಬಲವಿದೆ. ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂಬುದಕ್ಕೆ ನಾವು ಸಹ ಸ್ಪಂದಿಸುತ್ತೇವೆ. ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಚರ್ಚೆ ನಡೆಯುತ್ತಿರುವಾಗ ಜಿಲ್ಲೆಯ ರೈತರು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸುವಂತೆ ಒತ್ತಾಯಿಸುತ್ತಿರುವುದು ಸಮಂಜಸ’ ಎಂದರು.

‘1968 ರಲ್ಲಿ ಇದೇ ರೀತಿಯ ಸಮಸ್ಯೆ ಬಂದಿತ್ತು. ನಾನು ಆಗ ತಾನೇ ಪಾರ್ಲಿಮೆಂಟ್‌ಗೆ ಆಗತಾನೆ ಪದಾರ್ಪಣೆ ಮಾಡಿದೆ. ಮಳವಳ್ಳಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡುವ ಹಾಗೂ ಖಾಸಗಿ ವಲಯದಲ್ಲಿ ಕಾರ್ಖಾನೆ ಆರಂಭವಿಸುವ ಚರ್ಚೆ ನಡೆದಿತ್ತು. ನಾನು ಪಾರ್ಲಿಮೆಂಟ್‌ನಲ್ಲಿ ಅದನ್ನು ತೀವ್ರವಾಗಿ ವಿರೋಧಿಸಿದ್ದೆ’ ಎಂದರು.

‘ಆಗ ಗುರುಪಾದಸ್ವಾಮಿಯರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಹಲವಾರು ಏಳುಬೀಳುಗಳ ಮಧ್ಯೆ ಮುಂದೆ ಹೋಗುತ್ತಿದ್ದೇವೆ, ನಿಮ್ಮ ಒಕ್ಕೂರಲಿನ ಅಭಿಪ್ರಾಯವನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಧರಣಿ ಬಹಳ ಬೇಗ ಮುಗಿಯುವಂತಾಗಲಿ. ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ, ಭಯಬೇಡ’ ಎಂದು ಭರವಸೆ ನೀಡಿದರು.

ಸಕ್ಕರೆ ಸಚಿವರೊಂದಿಗೆ ಸಂಭಾಷಣೆ: ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಜೊತೆ ಮೊಬೈಲ್‌ ಸಂಭಾಷಣೆ ನಡೆಸಿದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‘ಮೈಷುಗರ್‌ ಕುರಿತಂತೆ ಸದನದಲ್ಲಿಯೂ ಮಾತನಾಡಿದ್ದೇನೆ, ಅಚ್ಚುಕಟ್ಟಾಗಿ ಹಬ್ಬ ಮಾಡಿ, ಆತಂಕ ಬೇಡ, ಕಳೆದ ಎರಡೂ ದಿನಗಳಿಂದ ಮೈಷುಗರ್ ವಿಚಾರವಾಗಿ ಉತ್ತಮ ಬೆಳವಣಿಗೆ ಆಗಿದ್ದು, ರೈತರ ಪರವಾಗಿಯೇ ನಿರ್ಧಾರ ತೆಗೆದುಕೊಳ್ಳುವ ಲಕ್ಷಣಗಳಿವೆ, ಆತಂಕ ಬೇಡ’ ಎಂದು ಭರವಸೆ ನೀಡಿದರು.

ಸಾಹಿತಿ ಜಿ.ಟಿ.ವೀರಪ್ಪ, ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಸಂಘ(ಮೂಲಸಂಘಟನೆ)ದ ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕನ್ನಡಸೇನೆ ಮಂಜುನಾಥ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು