ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರೆ ಯಶಸ್ವಿ, ಕಾಂಗ್ರೆಸ್‌ಗೆ ಜನರ ಸ್ಪಂದನೆ: ಚಲುವರಾಯಸ್ವಾಮಿ

Last Updated 8 ಅಕ್ಟೋಬರ್ 2022, 12:57 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯಲ್ಲಿ ಮೂರು ದಿನ ನಡೆದ ಭಾರತ್‌ ಜೋಡೊ ಪಾದಯಾತ್ರೆ ಯಶಸ್ವಿಯಾಗಿದೆ. ಯಾತ್ರೆಯುದ್ದಕ್ಕೂ ಜನರು ಕಾಂಗ್ರೆಸ್‌ ಪಕ್ಷದ ಜೊತೆ ಭಾವನಾತ್ಮಕ ಸ್ಪಂದಿಸಿದರು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಶನಿವಾರ ಹೇಳಿದರು.

‘ಭಾರತ್‌ ಜೋಡೊ ಪಾದಯಾತ್ರೆಯ ಮೂಲಕ ರಾಹುಲ್‌ ಗಾಂಧಿಯವರು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಾಗುತ್ತಿದ್ದಾರೆ. ಮಂಡ್ಯ ಜಿಲ್ಲೆ ಮಾತ್ರವಲ್ಲದೇ ರಾಜ್ಯದಾದ್ಯಂತ ಪಾದಯಾತ್ರೆ ಯಶಸ್ವಿಯಾಗುತ್ತಿರುವುದು ಸಂತಸ ತಂದಿದೆ. ಜನರ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ಪತ್ರಕಾಗೋಷ್ಠಿಯಲ್ಲಿ ತಿಳಿಸಿದರು.

‘ದೇಶ, ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಯಾಗಬೇಕು ಎಂಬುದು ರಾಹುಲ್‌ಗಾಂಧಿ ಅವರ ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ರಾಜಕೀಯ, ಅಧಿಕಾರದ ಆಸೆಯಿಲ್ಲ. ದೇಶದ ಬಗ್ಗೆ ಗೌರವ, ಅಭಿಮಾನ, ಪ್ರೀತಿ, ವಿಶ್ವಾಸವಿಟ್ಟುಕೊಂಡಿರುವ ನಮ್ಮ ನಾಯಕ ರಾಹುಲ್‌ಗಾಂಧಿ ಅವರಿಗೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದಾರೆ’ ಎಂದರು.

‘ರಾಹುಲ್‌ಗಾಂಧಿ ಅವರು ಸಾಕಷ್ಟು ಜ್ಞಾನ ಹೊಂದಿದ್ದು, ಪ್ರಬುದ್ಧರಾಗಿದ್ದಾರೆ. ಟೀಕೆಗಳನ್ನು ಮಾಡುವವರು ಇದ್ದೇ ಇದ್ದಾರೆ. ಸಾಕಷ್ಟು ವಿಷಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಮೂರು ದಿನಗಳ ಕಾಲ ಅವರ ಜತೆಯಲ್ಲಿಯೇ ಇದ್ದು ಗಮನಿಸಿದ್ದೇನೆ. ಬಡವರು, ದಲಿತರು, ರೈತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ’ ಎಂದರು.

‘ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ ರಾಹುಲ್‌ಗಾಂಧಿ ಅವರು ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ಹೇಗಿದೆ, ಎಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.

‘ಪಾದಯಾತ್ರೆಯಲ್ಲಿ ಸುಮಾರು 1.50 ಲಕ್ಷ ಮಂದಿ ಕಾರ್ಯಕರ್ತರು, ಮುಖಂಡರು, ನಾಯಕರು ಪಕ್ಷಾತೀತವಾಗಿ ಭಾಗವಹಿಸಿದ್ದರು. ಆ ಮೂಲಕ ಎಲ್ಲರೂ ಅಭೂತಪೂರ್ವ ಯಶಸ್ವಿಗೆ ಕಾರಣರಾಗಿದ್ದಾರೆ. ಅಲ್ಲದೆ, ವಿವಿಧ ಸಂಘಟನೆಗಳ ಮುಖಂಡರು ಬೇರೆ ಜಿಲ್ಲೆಗಳಿಂದಲೂ ಬಂದು ಬೆಂಬಲ ನೀಡಿದ್ದಾರೆ’ ಎಂದರು.

‘ಪಾದಯಾತ್ರೆಗೆ ಸೋನಿಯಾ ಗಾಂಧಿ ಅವರು ಜಿಲ್ಲೆಗೆ ಬಂದು ಬೆಂಬಲ ಸೂಚಿಸಿದ್ದರಿಂದ ಮತ್ತಷ್ಟು ಹುರುಪು ಬಂತು. ಪಕ್ಷದ ನಾಯಕರು, ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಮಂಡ್ಯ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ’ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘ದೇಶದಲ್ಲಿ ಉಂಟಾಗುತ್ತಿರುವ ಅಸಹನೆ, ದೌರ್ಜನ್ಯ, ಜಾತಿ, ಧರ್ಮಗಳ ನಡುವೆ ಸಂಘರ್ಷ, ಕೋಮುವಾದ ಹೆಚ್ಚಾಗಿದೆ. ಇದರ ಬಗ್ಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡದೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ಎತ್ತಿ ತೋರಿಸಬೇಕಾದ ಕೆಲವು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಮೌನವಾಗಿವೆ’ ಎಂದು ಆರೋಪಿಸಿದರು.

‘ದೇಶದ ಜನರ ಸಮಸ್ಯೆ ಅರಿಯಲು ಜನರ ಬಳಿಯೇ ಹೋಗುತ್ತೇನೆ ಎಂದು ನಿರ್ಧರಿಸಿ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುವ ಮೂಲಕ ಜನರ ಸಮಸ್ಯೆ ಅರಿಯುತ್ತಿದ್ದಾರೆ. ಇದರಲ್ಲಿ ಯಾವುದೇ ಅಧಿಕಾರ, ರಾಜಕೀಯವಿಲ್ಲ. ಯಾರು ಏನೇ ಟೀಕೆ ಮಾಡಿದರೂ ಪಾದಯಾತ್ರೆಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ’ಎಂದರು.

ಮುಖಂಡರಾದ ರಮೇಶ್‌ ಬಾಬುಬಂಡಿಸಿದ್ದೇಗೌಡ, ಅಮರಾವತಿ ಚಂದ್ರಶೇಖರ್, ವಿಜಯ್ ರಾಮೇಗೌಡ, ಎಂ.ಎಸ್.ಚಿದಂಬರ್, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಇದ್ದರು.

ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಪ್ರಬಲ
‘ಈ ಪಾದಯಾತ್ರೆಯು ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿಲ್ಲ, ಇದು ದೇಶ ಹಾಗೂ ರಾಜ್ಯದ ಪಾದಯಾತ್ರೆಯಾಗಿದೆ. ಆದ್ದರಿಂದ ಇದನ್ನು ಮಂಡ್ಯ ಜಿಲ್ಲೆಯ ಶಕ್ತಿ ಪ್ರದರ್ಶನ ಎಂದು ಬಿಂಬಿಸುವ ಅಗತ್ಯವಿಲ್ಲ. ಆದರೂ ಪಾದಯಾತ್ರೆಯಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ’ ಎಂದು ಚಲುವರಾಯಸ್ವಾಮಿ ಹೇಳಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಹಲವು ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ, ಗೆಲುವು ಸಾಧಿಸಿದ್ದೇವೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ. ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲುವು ಸಾಧಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT