ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ರಾತ್ರಿಯಿಡೀ ರಂಗಕುಣಿದು ಸಂಭ್ರಮಿಸಿದ ಗ್ರಾಮಸ್ಥರು

Published 29 ಮಾರ್ಚ್ 2024, 14:10 IST
Last Updated 29 ಮಾರ್ಚ್ 2024, 14:10 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಪಿ.ನೇರಲೆಕೆರೆ ಗ್ರಾಮದಲ್ಲಿ ನೇರಲಕೆರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ 15 ದಿನ ಮೊದಲೇ ಗ್ರಾಮದ ರಂಗದಟ್ಟಿಯಲ್ಲಿ ಕಂಭ ಸ್ಥಾಪನೆ ಮಾಡಿ ಪ್ರತಿದಿನ ರಂಗ ಕುಣಿಯುವುದು ವಿಶೇಷವಾಗಿದ್ದು, ಗುರುವಾರ ರಂಗಕುಣಿತದ ಕೊನೆಯ ದಿನವಾಗಿದ್ದು, ಗ್ರಾಮದ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ರಾತ್ರಿಯಿಡೀ ಜಾಗರಣೆ ಮಾಡುವ ಜೊತೆಗೆ ರಂಗಕುಣಿದು ಸಂಭ್ರಮಿಸಿದರು.

ಜಾತ್ರಾ ಮಹೋತ್ಸವದ ಮುನ್ನ ದಿನವಾದ ಗುರುವಾರ ರಾತ್ರಿ ರಂಗದ ಹಟ್ಟಿಯಲ್ಲಿ ಪೂಜೆ ಸಲ್ಲಿಸಿ ರಂಗ ಕುಣಿತವನ್ನು ಪ್ರಾರಂಭಿಸುವ ಗ್ರಾಮಸ್ಥರು ನಂತರ ಸುತ್ತಮುತ್ತಲಿನ ಗ್ರಾಮಗಳ ರಂಗಕುಣಿತದ ತಂಡಗಳು ಬಂದು ಪ್ರದರ್ಶನ ನೀಡುವ ಮೂಲಕ ಶುಕ್ರವಾರ ಬೆಳಗಿನ ಜಾವದ ತಂಬಿಟ್ಟಿನ ಆರತಿ ಪೂಜೆ ಸಲ್ಲಿಸುವವರೆಗೂ ಜಾಗರಣೆಯಿದ್ದು, ರಂಗ ಕುಣಿತ ಮುಂದುವರಿಸುವುದು ವಿಶೇಷವಾಗಿದೆ. ಗುರುವಾರ ರಾತ್ರಿ 9.30 ಕ್ಕೆ ನೇರಲೆಕೆರಮ್ಮ ದೇವಿಯ ಮೂರ್ತಿಗೆ ರಂಗದ ಹಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಮಂಟಪದಲ್ಲಿ ನೇರಲೆಕೆರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ನೇರೆಕೆಕೆರೆ ಗ್ರಾಮಸ್ಥರು ರಂಗಕುಣಿತ ಪ್ರಾರಂಭಿಸುತ್ತಾರೆ. ನಂತರ ನರಗಲು ಗ್ರಾಮಸ್ಥರು ಕೆಲ ಗಂಟೆ ರಂಗಕುಣಿತ ಮುಂದುವರಿಸುತ್ತಾರೆ. ತದನಂತರ ಹೂವಿನಹಳ್ಳಿ ಗ್ರಾಮಸ್ಥರು ತಂಡೋಪತಂಡವಾಗಿ ರಂಗಕುಣಿದು ಗ್ರಾಮಸ್ಥರನ್ನು ರಂಜಿಸಿ ದೇವರಿಗೆ ಭಕ್ತಿ ಸಮರ್ಪಿಸುತ್ತಾರೆ.

ಅಲ್ಲದೇ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಜೊತೆಗೆ ತಮಟೆಡೋಲು ತಂಡಗಳೊಂದಿಗೆ ಸೋಮನ ಕುಣಿತವು ಜರುಗುತ್ತದೆ. ನಂತರ ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿ ಮನೆಯಿಂದ ಮುತ್ತೈದೆಯರು ತಂದಿದ್ದ ಮಡೆ ಮತ್ತು ತಂಬಿಟ್ಟಿನ ಆರತಿಗೆ ಬೆಳಗಿನ ಜಾವದಲ್ಲಿ ಪೂಜೆ ಸಲ್ಲಿಸುವ ಮೂಲಕ 15 ದಿನಗಳ ನಿರಂತರ ರಂಗಕುಣಿತಕ್ಕೆ ಜಾಗರಣೆಯ ಅಂತ್ಯದೊಂದಿಗೆ ತೆರೆ ಬೀಳುತ್ತದೆ. ನಂತರ ಶುಕ್ರವಾರ ಬೆಳಗಿನ ಜಾವ ಶನಿವಾರ ಬೆಳಗಿನ ಜಾವ ಜರುಗುವ ರಥೋತ್ಸವಕ್ಕೆ ಸಿದ್ಧತೆಯಾಗಿ ಗ್ರಾಮಸ್ಥರು ರಥಕ್ಕೆ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿ ಸಿಂಗರಿಸುವ ಕೆಲಸವನ್ನು ಮಾಡಿ ರಥಕ್ಕೆ ಪೂಜೆ ಸಲ್ಲಿಸುತ್ತಾರೆ. ಶನಿವಾರ ಬೆಳಗಿನ ಜಾವ ಸುಮಾರು 3.30 ಕ್ಕೆ ರಥೋತ್ಸವ ಜರುಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT