ನಾಗಮಂಗಲ: ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ವೀರಭದ್ರ ಸ್ವಾಮಿ ನಂದಿವಾಹನ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿದವು.
ಪ್ರತಿ ವರ್ಷದಂತೆ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ 11ಕ್ಕೆ ಪಟ್ಟಣದ ಬಸವೇಶ್ವರ ದೇವಾಲಯದಿಂದ ಮಂಗಳವಾದ್ಯದ ಸಮೇತವಾಗಿ ಸ್ವಾಮಿಗೆ ಹೂವು ಮಾಲೆ, ಹೊಂಬಾಳೆಯನ್ನು ವೀರಶೈವ ಸಮಾಜದ ಮುಖಂಡರು ಮತ್ತು ಸದಸ್ಯರು ತರುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಸರ್ವಾಲಂಕೃತ ವೀರಭದ್ರ ಸ್ವಾಮಿ ಉತ್ಸವಮೂರ್ತಿಯನ್ನು ನಂದಿವಾಹನದ ಮೇಲೆ ಕೂರಿಸಿ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಯಘೋಷದೊಂದಿಗೆ ರಥವನ್ನು ಪಟ್ಟಣದ ಮಂಡ್ಯ ವೃತ್ತ ಸೇರಿದಂತೆ ಪ್ರಮುಖ ರಾಜಬೀದಿಗಳಲ್ಲಿ ಎಳೆಯಲಾಯಿತು.
ಮೈಸೂರು, ಹುಣಸೂರು, ಕೆ.ಆರ್.ನಗರ, ಕೆ.ಆರ್.ಪೇಟೆ, ಮಂಡ್ಯ, ಬೆಂಗಳೂರು, ಹಾಸನ, ಅರಸೀಕೆರೆ, ತಿಪಟೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸುವ ಜೊತೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಅರ್ಪಿಸಿದರು.
ವೀರಶೈವ ಸಮಾಜದಿಂದ ಭಕ್ತರಿಗೆ ಅನ್ನದಾನ ಮತ್ತು ಪ್ರಸಾದ, ಪಾನಕ ಮತ್ತು ನೀರು, ಮಜ್ಜಿಗೆ ವಿತರಿಸಲಾಯಿತು.
ಕೊಂಡೋತ್ಸವ ಇಂದು: ಬುಧವಾರ ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವ ಜರುಗಲಿದೆ. ಜೊತೆಗೆ ಕಸುವಿನಹಳ್ಳಿ, ಬೀರೇಶ್ವರಪುರ, ನೇರಲೆಕೆರೆ ಸೇರಿದಂತೆ ವಿವಿಧ ಗ್ರಾಮಗಳಿಂದ ದೇವರುಗಳ ಉತ್ಸವ ಮೂರ್ತಿಯನ್ನು ತಂದು ಮೆರವಣಿಗೆ ಮಾಡಲಾಗುತ್ತದೆ.
ಮೆರವಣಿಗೆಯು ತಮಟೆ, ಡೋಲು, ಪಟದ ಕುಣಿತ, ವೀರಗಾಸೆ, ಪೂಜಾ ಕುಣಿತ ತಂಡಗಳೊಂದಿಗೆ ಸಾಗಲಿದೆ. ಬುಧವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಸ್ವಾಮಿಗೆ ವಿವಿಧ ಸೇವೆಗಳನ್ನು ಸಲ್ಲಿಸಲಿದ್ದಾರೆ. ರಥೋತ್ಸವದ ಕೊನೆಯ ದಿನವಾದ ಗುರುವಾರ ಆನೆ ವಾಹನೋತ್ಸವವು ವಿಜೃಂಭಣೆಯಿಂದ ಜರುಗಲಿದ್ದು, ರಾತ್ರಿ ಧ್ವಜಾರೋಹಣದೊಂದಿಗೆ ಮುಕ್ತಾಯವಾಗುತ್ತದೆ.