ಶುಕ್ರವಾರ, ಅಕ್ಟೋಬರ್ 7, 2022
28 °C
ಕಲಾಮಂದಿರದಲ್ಲಿ ವಸ್ತ್ರ ಬದಲಾಯಿಸಲೂ ಸೌಲಭ್ಯವಿಲ್ಲ, ತಾಲ್ಲೂಕು ಕೇಂದ್ರಗಳಲ್ಲಿ ಕಲ್ಯಾಣಮಂಟಪಗಳೇ ರಂಗಸ್ಥಳ

ಪೌರಾಣಿಕ ನಾಟಕಕ್ಕೆ ಮಂಡ್ಯದಲ್ಲಿ ಸುಸಜ್ಜಿತ ರಂಗಮಂದಿರವಿಲ್ಲ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಪೌರಾಣಿಕ ನಾಟಕಗಳ ತವರು ಎನಿಸಿರುವ ಜಿಲ್ಲೆಯಲ್ಲಿ ರಂಗ ಪ್ರದರ್ಶನಕ್ಕೆ ಸುಸಜ್ಜಿತವಾದ ಒಂದೇ ಒಂದು ರಂಗಮಂದಿರ ಇಲ್ಲದಿರುವುದು ಕಲಾವಿದರನ್ನು ಸಂಕಷ್ಟಕ್ಕೆ ದೂಡಿದೆ. ಸಕಲ ಸೌಲಭ್ಯಗಳುಳ್ಳ ರಂಗ ಮಂದಿರ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಾಣವಾಗಬೇಕು ಎಂಬ ಕಲಾವಿದರ ಕನಸು ಕನಸಾಗಿಯೇ ಉಳಿದಿದೆ.

ಜಿಲ್ಲೆಯ ಜನರು ಪೌರಾಣಿಕ ನಾಟಕಳಿಗೆ ಮನಸೋತಿದ್ದು ಹಳ್ಳಿಹಳ್ಳಿಗಳಲ್ಲೂ ನಾಟಕ ಮಂಡಳಿಗಳಿವೆ. ನಷ್ಟದ ನಡುವೆಯೂ ನಾಲ್ಕಾರು ಡ್ರಾಮಾ ಸೀನರಿಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಆಧುನಿಕ ಕಾಲಕ್ಕೆ ತಕ್ಕಂತೆ ಬೆಳಕು, ಧ್ವನಿ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದ್ದು ರಂಗ ಮೇಲೆ ಜೀವಂತ ರಾಜ–ಮಹಾರಾಜನ ಆಸ್ಥಾನವನ್ನೇ ಸೃಷ್ಟಿ ಮಾಡುತ್ತಾರೆ.

ನಗರದಲ್ಲಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ನಾಲ್ವಡಿ ಕಷ್ಣರಾಜ ಕಲಾಮಂದಿರವಿದೆ, ಆದರೆ ಅದು ಅವ್ಯವಸ್ಥೆಯ ಆಗರವಾಗಿದ್ದು ಕಲಾವಿದರು ಹಲವು ಸಮಸ್ಯೆಗಳ ನಡುವೆ ನಾಟಕ ಪ್ರದರ್ಶನ ಮಾಡಬೇಕಾಗಿದೆ. ವರ್ಷದಲ್ಲಿ ಕನಿಷ್ಠ 200 ದಿನ ಕಲಾಮಂದಿರದಲ್ಲಿ ಪೌರಾಣಿಕ ನಾಟಕ ನಡೆಯುತ್ತವೆ. ಆದರೆ ಸೌಲಭ್ಯಗಳಿಲ್ಲದ ಕಾರಣ ಪೌರಾಣಿಕ ನಾಟಕ ಕಲೆ ಸೊರಗುವಂತಾಗಿದೆ.

ವಸ್ತ್ರ ಬದಲಾಯಿಸಲೂ ಕಷ್ಟ: ಕಲಾಮಂದಿರದಲ್ಲಿ ರಂಗಭೂಮಿಕೆಯ ಎರಡೂ ಕಡೆ ಎರಡು ಗ್ರೀನ್‌ರೂಂಗಳಿವೆ. ಆದರೆ ಅವುಗಳಿಗೆ ಬಾಗಿಲುಗಳೇ ಇಲ್ಲದ ಕಾರಣ ಕಲಾವಿದೆಯರು ವಸ್ತ್ರಬದಲಾಯಿಸಲು ಪರದಾಡುವ ಸ್ಥಿತಿ ಇದೆ. ಬಾಗಿಲಲ್ಲಿ ಒಬ್ಬರನ್ನು ನಿಲ್ಲಿಸಿ ಭಯದಿಂದಲೇ ಬಟ್ಟೆ ಬದಲಾಯಿಸುವ ಪರಿಸ್ಥಿತಿ ಇದೆ. ಜೊತೆಗೆ ಎರಡೂ ಕಡೆ ಶೌಚಾಲಯದಲ್ಲಿ ನೀರು ಬಾರದ ಕಾರಣ ಅವುಗಳನ್ನು ಬಳಸಲು ಅಸಾಧ್ಯವಾಗಿದೆ.

ನಗರದಲ್ಲಿ ಪೌರಾಣಿಕ ನಾಟಕಗಳಿಗೆ ಜನರು ತುಂಬಿ ಬರುತ್ತಾರೆ, ಆದರೆ ಪ್ರೇಕ್ಷಕರಿಗೂ ಶೌಚಾಲಯ ಇಲ್ಲದಾಗಿದೆ. ಹೊರಗಿರುವ 2 ಶೌಚಾಲಗಳ ಬಾಗಿಲು ಬಂದ್‌ ಆಗಿದ್ದು ಗಿಡಗಂಟಿಗಳು ಬೆಳೆದು ನಿಂತಿವೆ. ಹೀಗಾಗಿ ಕೆಲವರು ಕಲಾಮಂದಿರ ಕಾಂಪೌಂಡ್‌ ಗೋಡೆಗೆ ಶೌಚ ಮಾಡುತ್ತಾರೆ. ಸೂಕ್ತ ಭದ್ರತೆಯೂ ಇಲ್ಲದ ಕಾರಣ ಕಲಾಮಂದಿರದಲ್ಲಿ ಮಕ್ಕಳು, ಮಹಿಳೆಯರು ಬರಲು ಭಯ ಪಡುತ್ತಾರೆ. ಜೊತೆಗೆ ಕಳ್ಳರ ಕಾಟವೂ ಜೋರಾಗಿದ್ದು ಹಲವು ಬೈಕ್‌ ಕಳ್ಳತನ ಪ್ರಕರಣಗಳು ನಡೆದಿವೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರಕ್ಕೆ ₹ 6,500 ಬಾಡಿಗೆ ಪಡೆಯುತ್ತಾರೆ. ಆದರೆ ಯಾವುದೇ ಸೌಲಭ್ಯ ನೀಡುವುದಿಲ್ಲ. ಬೆಳಕು, ಧ್ವನಿ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕು. ಒಂದು ನಾಟಕವಾಡಿಸಲು ನಮಗೆ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ’ ಎಂದು ಹಿರಿಯ ರಂಗಕಲಾವಿದರ ಕಾಳೇನಹಳ್ಳಿ ಕೆಂಚೇಗೌಡ ಹೇಳಿದರು.

ಒಂದು ಕಾಲದಲ್ಲಿ ಮಂಡ್ಯದ ಸುಸಜ್ಜಿತ ಸಭಾಂಗಣ ಎಂಬ ಕೀರ್ತಿ ಹೊತ್ತಿದ್ದ ರೈತಸಭಾಂಗಣ ಇಂದು ಹಾಳಾಗಿದೆ. ಕೆ.ವಿ.ಶಂಕರಗೌಡರು ರೈತರ ಸೊಸೈಟಿ ತೆರೆದಾಗ ಅತ್ಯುತ್ತಮ ರಂಗಮಂದಿರವನ್ನೂ ತೆರೆದಿದ್ದರು. ಆರ್‌ಎಪಿಸಿಎಂಎಸ್‌ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದಾಗಿ ಈಗ ಅದು ಹಾಳಾಗಿದೆ. ಚೇರ್‌ಗಳು ಮುರಿದಿವೆ, ಶೌಚಾಲಯಗಳು ಹಾಳಾಗಿವೆ. ಅದು ಸಾಮಾಜಿಕ ನಾಟಕಗಳಿಗೆ ಹೇಳಿ ಮಾಡಿಸಿದಂತಿತ್ತು. ಆದರೆ ಹಾಳಾಗಿರುವ ಕಾರಣ ಅಲ್ಲಿ ನಾಟಕಗಳು ನಡೆಯದಾಗಿದೆ.

ಪಿಇಎಸ್‌ ಪದವಿ ಕಾಲೇಜು ಆವರಣದಲ್ಲಿರುವ ವಿವೇಕಾನಂದ ರಂಗಮಂದಿರು ಸುಸಜ್ಜಿತವಾಗಿದೆ. ಆದರೆ ಪಿಇಟಿ ಸಿಬ್ಬಂದಿ ರಂಗಮಂದಿರವನ್ನು ಪೌರಾಣಿಕ ನಾಟಕಗಳಿಗೆ ಕೊಡುವುದಿಲ್ಲ, ಕೇವಲ ಸಾಮಾಜಿಕ, ಆಧುನಿಕ ರಂಗ ಪ್ರಯೋಗಗಳಿಗೆ ಮಾತ್ರ ಕೊಡುತ್ತಾರೆ. ಅದೂ ವಾರಾಂತ್ಯದಲ್ಲಿ ಮಾತ್ರ ಕೊಡುತ್ತಾರೆ, ಬೇರೆದಿನಗಳಲ್ಲಿ ಹೊರಗಿನವರಿಗೆ ಕೊಡದ ಕಾರಣ ಅಲ್ಲಿ ನಾಟಕವಾಡಲು ಸಾಧ್ಯವಾಗುತ್ತಿಲ್ಲ.

ಕರ್ನಾಟಕ ಸಂಘದ ಆವರಣದಲ್ಲಿರುವ ಕುವೆಂಪು ತೆರೆದ ರಂಗಮಂದಿರದಲ್ಲಿ ಮಾತ್ರ ಸೌಲಭ್ಯಗಳಿವೆ, ಆದರೆ ಅಲ್ಲೂ ಪೌರಾಣಿಕ ನಾಟಕ ಮಾಡಲು ಸಾಧ್ಯವಿಲ್ಲ. ಆಧುನಿಕ ರಂಗಪ್ರಯೋಗಗಳು, ಯಕ್ಷಗಾನಗಳು, ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಮಾತ್ರ ಅದು ಚೆನ್ನಾಗಿದೆ.

ಉಳಿದಂತೆ ತಾಲ್ಲೂಕು ಕೇಂದ್ರಗಳಲ್ಲೂ ಸುಸಜ್ಜಿತ ರಂಗಮಂದಿರಗಳಿಲ್ಲ. ಕಲಾವಿದರು ಕಲ್ಯಾಣಮಂಟಪಗಳನ್ನೇ ಕಲಾಮಂದಿರಗಳನ್ನಾಗಿ ಮಾಡಿಕೊಂಡು ನಾಟಕವಾಡುತ್ತಿದ್ದು ನಾಟಕ ಕಲೆಯನ್ನು ಜೀವಂತವಾಗಿ ಇರಿಸಿದ್ದಾರೆ.

*****

‘ಕನ್ನಡ ಸಂಘ’ಕ್ಕೆ ರಂಗಮಂದಿರವಿಲ್ಲ

ಆಧುನಿಕ ರಂಗಭೂಮಿಯಲ್ಲಿ ವಿಶಿಷ್ಟ ರಂಗಪ್ರಯೋಗಳ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ನಾಗಮಂಗಲ ‘ಕನ್ನಡ ಸಂಘ’ಕ್ಕೆ ಇಲ್ಲಿಯವರೆಗೂ ಸುಸಜ್ಜಿತ ರಂಗಮಂದಿರವಿಲ್ಲ. ಸ್ವಂತ ರಂಗಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕಲಾವಿದರು ಹಲವು ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಇದ್ದಾರೆ.

‘ಕನ್ನಡ ಸಂಘ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದೆ. ಈಗಲೂ ಮುರುಕಲು ಮಂಟಪದಲ್ಲಿ ನಾಟಕವಾಡಬೇಕಾದ ಪರಿಸ್ಥಿತಿ ಇದೆ. ಆಡಳಿತ ನಡೆಸುವವರು ಕನ್ನಡ ಸಂಘದ ಸಾಧನೆಗಳತ್ತ ತಿರುಗಿ ನೋಡಿ ಸ್ವಂತ ರಂಗಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಬೇಕು’ ಎಂದು ಕತೆಗಾರ ನಾಗಮಂಗಲ ಕೃಷ್ಣಮೂರ್ತಿ ಹೇಳಿದರು.

*****

ಬಿಡುಗಡೆಯಾಗದ ₹ 1 ಕೋಟಿ

2019–20ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಸಂಘದ ಅಭಿವೃದ್ಧಿಗೆ ₹ 1 ಕೋಟಿ ಘೋಷಣೆಯಾಗಿತ್ತು. ಅದನ್ನು ಬಳಸಿಕೊಂಡು ಕರ್ನಾಟಕ ಸಂಘದ ಆವರಣದಲ್ಲಿ ಸುಸಜ್ಜಿತ, ಸುಂದರ ರಂಗಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡದ ಕಾರಣ ಕರ್ನಾಟಕ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಿನ್ನೆಯವರೆಗೂ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದೇನೆ, ಪತ್ರದ ಮೇಲೆ ಪತ್ರ ಬರೆದಿದ್ದೇನೆ. ಆದರೆ ಸರ್ಕಾರ ಹಣ ಬಿಡುಗಡೆಗೆ ಆಸಕ್ತಿ ತೋರಿಸುತ್ತಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲೆಯ ಕಲಾವಿದರ ಪರವಾಗಿ ಒತ್ತಾಯಿಸುತ್ತೇನೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.
 

****

ಕಲಾಮಂದಿರ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಿರುವ ವ್ಯವಸ್ಥೆಯಲ್ಲೇ ನಾಟಕ ಹಾಗೂ ಇತರ ಕಾರ್ಯಕ್ರಮ ಆಯೋಜನೆಗೆ ಸೌಲಭ್ಯ ನೀಡಲಾಗುತ್ತಿದೆ

–ಉದಯ್‌ಕುಮಾರ್‌, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು