ಶುಕ್ರವಾರ, ಸೆಪ್ಟೆಂಬರ್ 24, 2021
27 °C
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಗೊಂದಲ; ಟ್ರಾಫಿಕ್‌ ನಿರ್ವಹಣೆಯಲ್ಲಿ ವೈಫಲ್ಯ

ಸಿಗ್ನಲ್‌ ದೀಪಗಳೇ ಇಲ್ಲದ ಮಂಡ್ಯದ ಜೆ.ಸಿ ವೃತ್ತ: ಪರದಾಟ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಜೆ.ಸಿ.ವೃತ್ತದಲ್ಲಿ ಸಿಗ್ನಲ್‌ ದೀಪಗಳಿಲ್ಲದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿ ಸಮರ್ಪಕವಾಗಿ ಟ್ರಾಫಿಕ್‌ ನಿರ್ವಹಣೆಯನ್ನೂ ಮಾಡದ ಹಿನ್ನೆಲೆಯಲ್ಲಿ ಜನರು ಅಪಾಯ ಎದುರಿಸುವಂತಾಗಿದೆ.

ಜೆ.ಸಿ.ವೃತ್ತವು ನಗರದ ಹೃದಯ ಭಾಗವಾಗಿದ್ದು ನಾಲ್ಕು ರಸ್ತೆ ಕೂಡುತ್ತವೆ. ಜೊತೆಗೆ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಕೂಡು ರಸ್ತೆಯೂ ಇದ್ದು ಈ ವೃತ್ತದಲ್ಲಿ ವಾಹನ ದಟ್ಟಣೆ ವಿಪರೀತವಾಗಿದೆ. ಬಸ್‌ ನಿಲ್ದಾಣ, ಸಂಜಯ ಚಿತ್ರ ಮಂದಿರ, ಇಂದಿರಾ ಕ್ಯಾಂಟೀನ್‌, ಎರಡು ಪೆಟ್ರೋಲ್‌ ಬಂಕ್‌ ವೃತ್ತವನ್ನು ಆವರಿಸಿಕೊಂಡಿವೆ. ವಿಶಾಲವಾದ ವೃತ್ತದಲ್ಲಿ ಸಿಗ್ನಲ್‌ ದೀಪ ಇಲ್ಲದೆ ಟ್ರಾಫಿಕ್‌ ನಿಯಮ ಪಾಲಿಸಲು ವಾಹನ ಸವಾರರಿಗೆ ಸಾಧ್ಯವಾಗುತ್ತಿಲ್ಲ. ಬೇಕಾಬಿಟ್ಟಿ ವಾಹನಗಳು ನುಗ್ಗುವ ಕಾರಣ ಜೆ.ಸಿ ವೃತ್ತ ದಾಟುವುದೇ ಕಡುಕಷ್ಟವಾಗಿದೆ.

ಮೈಸೂರಿನಿಂದ ಬೆಂಗಳೂರು ಕಡೆ ತೆರಳುವಾಗ ಸಿಗ್ನಲ್‌ ದೀಪಗಳು ವಾಹನ ಸವಾರರಿಗೆ ಕಾಣುತ್ತವೆ. ಆದರೆ ಬೆಂಗಳೂರು ಕಡೆಯಿಂದ ಮೈಸೂರಿಗೆ ತೆರಳುವಾಗ ಸಿಗ್ನಲ್‌ ದೀಪಗಳು ಕಾಣುವುದಿಲ್ಲ. ವೇಗವಾಗಿ ಬರುವ ವಾಹನ ಸವಾರರು ಸಿಗ್ನಲ್‌ ದೀಪಗಳಿಗಾಗಿ ಹುಡುಕಾಡುತ್ತಾರೆ. ಮುಂದಕ್ಕೆ ಹೋಗಬೇಕೋ, ಬೇಡವೋ ಎಂಬ ಗೊಂದಲಕ್ಕೀಡಾಗುತ್ತಾರೆ.

ಸಿಗ್ನಲ್‌ ದೀಪಗಳಿಲ್ಲದ ಕಾರಣ ಕೆಲ ವಾಹನ ಸವಾರರು ವೃತ್ತದಲ್ಲಿ ಏಕಾಏಕಿ ವಾಹನ ನಿಲ್ಲಿಸಿಬಿಡುತ್ತಾರೆ. ಹಿಂದೆ ಬರುವ ವಾಹನಗಳಿಗೂ ತೊಂದರೆಯಾಗಿ ಸವಾರರು ಗಾಬರಿ ಬೀಳುತ್ತಾರೆ. ಕೆಲವೊಮ್ಮೆ ವಾಹನಗಳು ಒಂದಕ್ಕೊಂದು ಗುದ್ದಿಕೊಳ್ಳುತ್ತವೆ. ಹಲವು ಬಾರಿ ದೊಡ್ಡ ಅಪಘಾತಗಳೂ ನಡೆದಿವೆ.

ಈ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದಲೂ ಇಲ್ಲಿ ಶಾಶ್ವತವಾಗಿ ಟ್ರಾಫಿಕ್‌ ಸಿಗ್ನಲ್‌ ದೀಪ ಅಳವಡಿಸಲು ಸಾಧ್ಯವಾಗುತ್ತಿಲ್ಲ. ವರ್ಷದ ಹಿಂದಷ್ಟೇ ಇಲ್ಲಿ ದೀಪ ಅಳವಡಿಸಲಾಗಿತ್ತು, ಕಂಬ ಮುರಿದು ಬಿದ್ದಿದ್ದು ದೀಪಗಳು ಮಾಯವಾಗಿವೆ. ಮತ್ತೆ ಕಂಬ, ದೀಪ ಅಳವಡಿಕೆ ಕೆಲಸ ನಡೆದಿಲ್ಲ. ಹೀಗಾಗಿ ವಾಹನ ಸವಾರರ ಪರದಾಟು ಮುಂದುವರಿದಿದೆ.

ಟ್ರಾಫಿಕ್‌ ನಿರ್ವಹಣೆಯೂ ಇಲ್ಲ: ಜೆ.ಸಿ ವೃತ್ತ ಮಾತ್ರವಲ್ಲದೇ ರಾಷ್ಟ್ರೀಯ ಹೆದ್ದಾರಿಯ ಹಲವು ವೃತ್ತಗಳಲ್ಲಿ ಟ್ರಾಫಿಕ್‌ ನಿರ್ವಹಣಾ ಕಾರ್ಯ ಕೇವಲ ನೆಪ ಮಾತ್ರಕ್ಕಿದೆ. ಮಹಾವೀರ ವೃತ್ತ, ನಂದ ವೃತ್ತ, ಫಾಕ್ಟರಿ ಸರ್ಕಲ್‌ನಲ್ಲಿ ಟ್ರಾಫಿಕ್‌ ನಿರ್ವಹಣೆ ಇಲ್ಲದೇ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಾರೆ. ಸ್ಥಳೀಯರು ನಿಯಮ ಉಲ್ಲಂಘಿಸಿ ಗಾಡಿ ಓಡಿಸುವ ಕಾರಣ ಜನರು, ಪ್ರವಾಸಿಗರು ನಗರ ದಾಟಲು ಹೈರಾಣಾಗುತ್ತಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ, ವಾರಾಂತ್ಯದಲ್ಲಿ ವಾಹನಗಳ ಸಂಖ್ಯೆ ಲಕ್ಷ ಸಮೀಪಿಸುತ್ತದೆ. ಟ್ರಾಫಿಕ್‌ ಸಿಬ್ಬಂದಿ ಬೆಳಿಗ್ಗೆ– ಸಂಜೆ ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಉಳಿದ ಅವಧಿಯಲ್ಲಿ ಪೊಲೀಸರು ಹಳದಿ ದೀಪ ಹಾಕಿ ತೆರಳುತ್ತಾರೆ. ಆಗ ಸವಾರರು ವಾಹನ ದಟ್ಟಣೆ ನಡುವೆ ಹೈರಾಣಾಗುತ್ತಾರೆ.

‘ಮಂಡ್ಯ ನಗರದಲ್ಲಿ ಗಾಡಿ ಓಡಿಸಲು ಭಯವಾಗುತ್ತದೆ. ನಗರ ದಾಟಿದರೆ ಸಾಕು ಎನ್ನುವಷ್ಟು ಆತಂಕ ಕಾಡುತ್ತದೆ. ಟ್ರಾಫಿಕ್‌ ದೀಪಗಳಿಲ್ಲ, ಟ್ರಾಫಿಕ್ ನಿರ್ವಹಣೆ ಮಾಡುವವರಿಲ್ಲ, ಜೊತೆಗೆ ಟ್ರಾಫಿಕ್‌ ನಿಯಮ ಪಾಲಿಸುವವರೂ ಇಲ್ಲ. ಹೀಗಾಗಿ ಮಂಡ್ಯದಲ್ಲಿ ಗಾಡಿ ಓಡಿಸುವುದು ಸಾಹಸವೇ ಆಗಿದೆ’  ಎಂದು ವಾಹನ ಚಾಲಕ ರಮೇಶ್‌ ಹೇಳಿದರು.

******

ಸಿಗ್ನಲ್‌ ದೀಪಕ್ಕೆ ಹಣ ಇಲ್ಲ

ಟ್ರಾಫಿಕ್‌ ದೀಪ ಅಳವಡಿಕೆ ಕುರಿತು ಪೊಲೀಸ್‌ ಸಿಬ್ಬಂದಿ ಹಾಗೂ ನಗರಸಭೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ, ಇದರಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ.

‘ಟ್ರಾಫಿಕ್‌ ದೀಪ ಅಳವಡಿಸಲು ಪೊಲೀಸ್‌ ಇಲಾಖೆಯಲ್ಲಿ ಪ್ರತ್ಯೇಕ ಹಣ ಇಲ್ಲ. ನಗರಸಭೆಯಿಂದ ದೀಪ ಅಳವಡಿಸಬೇಕು, ನಾವು ಟ್ರಾಫಿಕ್‌ ನಿರ್ವಹಣೆಗೆ ಆದ್ಯತೆ ನೀಡುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.

‘ಪೊಲೀಸ್‌ ಇಲಾಖೆಯಿಂದಲೇ ಸಿಗ್ನಲ್‌ ದೀಪ ಅಳವಡಿಸಿಕೊಳ್ಳಬೇಕು. ನಾವು ರಸ್ತೆ, ಚರಂಡಿ ಸೇರಿ ಮೂಲ ಸೌಲಭ್ಯವನ್ನಷ್ಟೇ ಒದಗಿಸುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು