ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯ ಧ್ವಜಸ್ತಂಭ ತೆರವಿಗೆ ನೋಟಿಸ್‌‌, ಬಿಗುವಿನ ಸ್ಥಿತಿ

Published 27 ಜನವರಿ 2024, 23:27 IST
Last Updated 27 ಜನವರಿ 2024, 23:27 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿರುವ 108 ಅಡಿ ಎತ್ತರದ ಆಂಜನೇಯ– ಅರ್ಜುನ ಧ್ವಜಸ್ತಂಭ ತೆರವಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೋಟಿಸ್‌ ನೀಡಿರುವುದನ್ನು ಖಂಡಿಸಿ ಅಕ್ಕಪಕ್ಕದ 12 ಹಳ್ಳಿಗಳ ಜನ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದ್ದು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಗ್ರಾಮದ ಮಾರಮ್ಮ ದೇವಾಲಯ ಬೀದಿಯ ರಂಗಮಂದಿರದ ಬಳಿ ಸುತ್ತಮುತ್ತಲಿನ ಹಳ್ಳಿಗಳ (12 ದೊಡ್ಡಿ) ಜನ ಸ್ವಂತ ಹಣ ಹಾಕಿ ಜನವರಿ 19ರಂದು ಧ್ವಜ ಸ್ತಂಭ ಸ್ಥಾಪಿಸಿ ಆಂಜನೇಯ–ಅರ್ಜುನರ ಭಾವಚಿತ್ರವುಳ್ಳ ಬೃಹತ್‌ ಬಾವುಟ ಹಾರಿಸಿದ್ದರು. ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ತೆರಳಿದ ತಾಲ್ಲೂ ಪಂಚಾಯತ್ ಇ.ಒ ವೀಣಾ ಅವರು ನೋಟಿಸ್‌ ನೀಡಿ ಸ್ತಂಭದ ತೆರವಿಗೆ ಸೂಚಿಸಿದರು.

‘ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್‌ ಅವರ ಸೂಚನೆ ಮೇರೆಗೆ ಸ್ತಂಭ ತೆರವುಗೊಳಿಸಲಾಗುತ್ತಿದೆ’ ಎಂಬ ವದಂತಿ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನ ರಂಗಮಂದಿರದ ಬಳಿ ಸೇರಿದರು. ಗ್ರಾಮವನ್ನು ಬಂದ್‌ ಮಾಡಿ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್‌ ಮುಖಂಡರೂ ಇದ್ದರು.

‘ಸ್ತಂಭ ನಿರ್ಮಾಣ ಕೋರಿ ಮನವಿ ಸಲ್ಲಿಸಿದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಈಗ ಏಕಾಏಕಿ ತೆರವಿಗೆ ಮುಂದಾಗಿರುವುದು ಖಂಡನೀಯ. ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಶಿವಕುಮಾರ ಬಿರಾದರ, ಡಿವೈಎಸ್‌ಪಿ ಶಿವಮೂರ್ತಿ ಅವರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು 4 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT