ಗುರುವಾರ , ಮಾರ್ಚ್ 23, 2023
21 °C
ವೈಯಕ್ತಿಕ ಶೌಚಾಲಯಗಳಿದ್ದರೂ ಬಯಲಿಗೆ ತೆರಳುವುದು ತಪ್ಪಿಲ್ಲ; ಬೆಳಿಗ್ಗೆ ಎದ್ದು ಕೆರೆ, ಕಟ್ಟೆ, ಕಾಲುವೆ ಕಡೆಗೆ ನಡಿಗೆ

ಬಯಲು ಶೌಚ ಮುಕ್ತ; ದಾಖಲೆಗಷ್ಟೇ ಸೀಮಿತ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಗೆ ‘ಬಯಲು ಶೌಚ ಮುಕ್ತ ಜಿಲ್ಲೆ’ ಗರಿ ದೊರಕಿ ನಾಲ್ಕು ವರ್ಷ ಕಳೆದಿವೆ. ಇದು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಜನ ಈಗಲೂ ಕೆರೆ, ಕಟ್ಟೆ, ನಾಲೆ, ಕಾಲುವೆ ಕಡೆಗೆ ತೆರಳು ವುದು ತಪ್ಪಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಿಸಿದ್ದರೂ ಜನರು ಬಯಲಿಗೆ ಹೋಗುವುದು ಮಾತ್ರ ನಿಂತಿಲ್ಲ.

ಸದ್ಯ ಎಲ್ಲೆಡೆ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿರುವ ಕಾರಣ ಜನರು ಶೌಚಕ್ಕಾಗಿ ಹೊಲ, ಗದ್ದೆ ಗಳನ್ನೇ ಆಶ್ರಯಿಸಿದ್ದಾರೆ. ಮನೆಯ ಮೂಲೆಯಲ್ಲಿರುವ ಶೌಚಾಲಯಗಳು ಕೃಷಿ ಪರಿಕರಗಳನ್ನು ಸಂಗ್ರಹಿಸುವ ಗೋದಾಮುಗಳಾಗಿವೆ. ಜಿಲ್ಲೆಯ 234 ಗ್ರಾಮ ಪಂಚಾಯಿತಿಗಳ 3.52 ಲಕ್ಷ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದು, 2017ರ ಅಕ್ಟೋಬರ್‌ನಲ್ಲೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ.

ಉದ್ಯೋಗ ಖಾತ್ರಿ ಯೋಜನೆ ಸಹಾಯದಿಂದ ಬಯಲು ಶೌಚಾಲಯ ಮುಕ್ತಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದ ವಾರ್ಷಿಕ ಪ್ರಶಸ್ತಿಯೂ ಸಂದಿದೆ. ಜೊತೆಗೆ ಹಲವು ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರವೂ ಸಂದಿದೆ. ಘೋಷಣೆಗಳು ಕೇವಲ ದಾಖಲೆಗಳಲ್ಲಷ್ಟೇ ಇದ್ದು ವಾಸ್ತವವಾಗಿ ಗ್ರಾಮೀಣ ಜನರು ಬಯಲನ್ನೇ ಆಶ್ರಯಿಸಿದ್ದಾರೆ.

ವೈಯಕ್ತಿಕ ಶೌಚಾಲಯ ಬಳಸುವಂತೆ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗಿದೆ. ಸ್ವಚ್ಛಮೇವ ಜಯತೆ ಅಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಸೌದೆ, ಕೃಷಿ ಪರಿಕರ ತೆರವುಗೊಳಿಸಿ ಶೌಚಾಲಯ ಬಳಸುವಂತೆ ಗ್ರಾ.ಪಂ ವತಿಯಿಂದಲೂ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಶೌಚಾಲಯಗಳ ಬಳಕೆಗೆ
ಆಸಕ್ತಿ ತೋರಿಸುತ್ತಿಲ್ಲ.

‘ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ, ನೀರಿನ ಕೊರತೆ ಇರುವ ಕಾರಣ ಜನರು ಚೊಂಬು ಹಿಡಿದು ಶೌಚಕ್ಕೆ ತೆರಳುತ್ತಾರೆ. ಆದರೆ, ನಮ್ಮ ಭಾಗದಲ್ಲಿ ಅಂಥ ಸ್ಥಿತಿ ಇಲ್ಲ. ಎಲ್ಲರೂ ಕೆರೆ, ಕಟ್ಟೆ, ನಾಲೆಗಳ ಬಳಿಯೇ ಶೌಚ ಮಾಡುತ್ತಾರೆ. ಮನೆಯಲ್ಲಿ
ಶೌಚಾಲಯ ಇದ್ದರೂ ಅವುಗಳನ್ನು ಬಳಸಲು ಜನರಿಗೆ ಆಸಕ್ತಿ ಇಲ್ಲ’ ಎಂದು ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು. ಜಿಲ್ಲೆಯ ಹಲವೆಡೆ ಶೌಚಾಲಯ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಅವುಗಳಿಗೂ ಬಿಲ್‌ ಮಾಡಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತೋರಿಸಲಾಗಿದೆ. ರೈತ ಕುಟುಂಬಗಳು ಅರ್ಧಕ್ಕೆ ನಿಂತ ಶೌಚಾಲಯಗಳನ್ನು ಬಳಕೆ ಮಾಡುತ್ತಿಲ್ಲ. ನಾಗಮಂಗಲ ತಾಲ್ಲೂಕು ಹೊಣಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಮಣ್ಣಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಆ ವ್ಯಾಪ್ತಿಯ ಬಹುತೇಕ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೂ ಹಲವೆಡೆ ಶೌಚಾಲಯಗಳು ಕುಸಿದಿದ್ದು, ಅವು ಗಳನ್ನು ಪುನರ್‌ ನಿರ್ಮಾಣ ಮಾಡಿಲ್ಲ.

ಶೌಚಾಲಯವಿಲ್ಲ:  ಮದ್ದೂರು ಪಟ್ಟಣದ ಸಿದ್ಧಾರ್ಥ ನಗರ, ಚನ್ನೇಗೌಡ ಬಡಾವಣೆ, ತಮಿಳು ಕಾಲೊನಿಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು
ವಾಸವಿದ್ದಾರೆ. ಈ ಗುಡಿಸಲುಗಳಲ್ಲಿ ಶೌಚಾಲಯ ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ಪಟ್ಟಣದಲ್ಲಿ ಹಾದುಹೋಗುವ ಕೆಮ್ಮಣ್ಣುನಾಲೆಯ ರಸ್ತೆ ಬದಿ ಹಾಗೂ ಅಕ್ಕಪಕ್ಕದ ಜಮೀನುಗಳನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ಮಂಡ್ಯ ತಾಲ್ಲೂಕಿನ ಕೀಲಾರದ ತಮಿಳು ಕಾಲೊನಿ ನಿವಾಸಿಗಳೂ ಶೌಚ ಕ್ಕಾಗಿ ಬಯಲನ್ನೇ ಅವಲಂಬಿ ಸಿದ್ದಾರೆ.

ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈದ್ಯನಾಥಪುರದ ಬಳಿ ರಸ್ತೆ ಬದಿಯಲ್ಲಿ 10 ತಮಿಳು ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿವೆ. ಈ ಗುಡಿಸಲುಗಳಲ್ಲೂ ಶೌಚಾಲಯ ಇಲ್ಲ. ಆಲೂರು ಗ್ರಾಮದ ನಟರಾಜು ಅವರ ಮನೆಯಲ್ಲಿ ಸ್ಥಳಾವ ಕಾಶದ ಕೊರತೆಯಿಂದಾಗಿ ಶೌಚಾಲಯ ನಿರ್ಮಿಸಿಕೊಂಡಿಲ್ಲ.

ಶಿಂಷಾನದಿ ಎಡ ಹಾಗೂ ಬಲದಂಡೆ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಲಾಗಿದ್ದರೂ, ಅವುಗಳನ್ನು ಸೌದೆ ಇನ್ನಿತರ ವಸ್ತುಗಳ ಸಂಗ್ರಹಕ್ಕೆ ಬಳಸಿಕೊಳ್ಳಲಾಗಿದೆ. ಬಹು ತೇಕ ಜನರು ಶಿಂಷಾನದಿ ಬಯಲನ್ನು, ವಿಶ್ವೇಶ್ವರಯ್ಯ ನಾಲೆಗಳ ಬಯಲು ಪ್ರದೇ ಶವನ್ನು ಬಳಸುತ್ತಿದ್ದಾರೆ. ಮದ್ದೂರು ಪಟ್ಟಣದ ಹೊರವಲಯದಲ್ಲಿ ಉತ್ತರ ಕರ್ನಾಟಕದಿಂದ ಬಂದ ಕಬ್ಬು ಕಡಿಯುವ ಕಾರ್ಮಿಕರು ಗುಡಿಸಲು ನಿರ್ಮಿಸಿಕೊಂಡು ಜೀವನಸಾಗಿಸು ತ್ತಿದ್ದಾರೆ. ಅವರು ಸುತ್ತಲಿನ ಜಾಗವನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ನಗರ ವ್ಯಾಪ್ತಿ; ಬಯಲು ಶೌಚ, ದುರ್ವಾಸನೆ

ಮಂಡ್ಯ ನಗರ ವ್ಯಾಪ್ತಿಯಲ್ಲಿ ಶೌಚಾಲಯಗಳಿಲ್ಲದ ಕಾರಣ ರಸ್ತೆ ಬದಿಯೇ ಶೌಚಾಲಯವಾಗಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ತರಕಾರಿ ಮಾರುಕಟ್ಟೆ ಸಮೀಪ ವ್ಯಾಪಾರಿಗಳು, ರೈಲು ಟ್ರ್ಯಾಕ್‌ ಸಮೀಪ ಶೌಚ ಮಾಡುತ್ತಾರೆ. ಆ ಪ್ರದೇಶವನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸದ ಕಾರಣ ಮಳೆ ಬಿದ್ದ ಸಂದರ್ಭದಲ್ಲಿ ಇಡೀ ಮಾರುಕಟ್ಟೆಗೆ ದುರ್ವಾಸನೆ ಬಡಿಯುತ್ತದೆ. ಮೇಲ್ಸೇತುವೆ ಅಕ್ಕಪಕ್ಕದಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಲ್ಲಿ ಓಡಾಡುವುದು ಕಷ್ಟವಾಗಿದೆ. ಪೇಟೆಬೀದಿ, ಹಳೇ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಮಳಿಗೆಗಳೇ ಶೌಚಾಲಯಗಳಾಗಿವೆ.

ನಗರದ ಹಾಲಹಳ್ಳಿ ಕೊಳೆಗೇರಿಯಲ್ಲಿ 150ಕ್ಕೂ ಹೆಚ್ಚು ನಿವಾಸಿಗಳಿಗೆ 2 ಶೌಚಾಲಯಗಳಿದ್ದು, ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಜೋರು ಮಳೆ ಬಂದರೆ ಆ ಶೌಚಾಲಯದಲ್ಲೂ ನೀರು ತುಂಬಿಕೊಳ್ಳುವ ಕಾರಣ ಅಲ್ಲಿನ ನಿವಾಸಿಗಳು ಪಕ್ಕದ ಬಯಲಿಗೆ ಶೌಚಕ್ಕೆ ತೆರಳಬೇಕಾಗುತ್ತದೆ. ಪಟ್ಟಣ ಪ್ರದೇಶಗಳ ಸಮುದಾಯ ಶೌಚಾಲಯಗಳು ಬಳಕೆಗೆ ಅಯೋಗ್ಯವಾಗಿದ್ದು ಜನರು ಬಯಲನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ಕಾಡಂಚಿನ ಜನರಿಗೆ ಬಯಲೇ ಗತಿ

ಮಳವಳ್ಳಿ ತಾಲ್ಲೂಕು ಹಲಗೂರು ಭಾಗದ ಅರಣ್ಯದಂಚಿನ ಭಾಗದ ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹಲವು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡಂಚಿನ ಹಲವಾರು ಗ್ರಾಮಗಳಲ್ಲಿ ಶೌಚಾಲಯದ ಅರಿವು ಕಡಿಮೆ ಇದ್ದು ಜನರು ಬಯಲನ್ನೇ ಅವಲಂಬಿಸಿದ್ದಾರೆ.

ಮುತ್ತತ್ತಿಯಲ್ಲಿ ಪ್ರವಾಸಿಗರಿಗಾಗಿ ಸರ್ಕಾರದಿಂದ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳುವ ರಸ್ತೆಯ ವಿವಾದದಿಂದ ಅದು ಬಾಗಿಲು ಮುಚ್ಚಿದೆ. ಕೃಷ್ಣೇಗೌಡನದೊಡ್ಡಿ ಗ್ರಾಮದ ಕೆರೆ ಬಳಿಯಲ್ಲಿ ವಾಸವಾಗಿರುವ 40 ಪರಿಶಿಷ್ಟ ಸಮುದಾಯಗಳಿಗೆ ಸ್ವಂತ ನಿವೇಶನವೇ ಇಲ್ಲ. ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು 30ವರ್ಷಗಳಿಂದ ಬದುಕುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅವರಿಗೆ ಬಯಲು ಶೌಚಾಲಯವೇ ಅನಿವಾರ್ಯ ಆಗಿದೆ. ಹಲಗೂರು ಗ್ರಾ.ಪಂ.ನಪೌರ ಕಾರ್ಮಿಕರು, ವಳಗೆರೆದೊಡ್ಡಿ ಸಂಪರ್ಕಿಸುವ ರಸ್ತೆಯಲ್ಲಿ 15 ಕುಟುಂಬಗಳು ಜೋಪಡಿಯಲ್ಲಿ ವಾಸಿಸುತ್ತಿದ್ದು ಅವರಿಗೆ ಶೌಚಾಲಯ ಇಲ್ಲ.

ಜಾಗೃತಿಯೊಂದೇ ಮಾರ್ಗ

‘ಜಿಲ್ಲೆಯಲ್ಲಿ ಶೇ 100ರಷ್ಟು ಬಯಲು ಶೌಚ ಮಕ್ತಗೊಳಿಸಲಾಗಿದೆ. ಆದರೂ ವಿವಿಧೆಡೆ ಶೌಚಾಲಯ ಬಳಕೆ ಮಾಡದೇ ಇರಲು ಅರಿವಿನ ಕೊರತೆಯೇ ಕಾರಣ. ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾ ಪ್ರಭು ತಿಳಿಸಿದರು.

‘ಹಳ್ಳಿಗಳಲ್ಲಿರುವ ಶೌಚಾಲಯಗಳ ಸ್ಥಿತಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿ ಪೂರ್ಣವಾಗಿರದ ಶೌಚಾಲಯಗಳ ಮಾಹಿತಿ ತರಿಸಿಕೊಳ್ಳಲಾಗುವುದು. ಅಧಿಕಾರಿಗಳಿಂದ ಯಾವುದೇ ಲೋಪವಾಗಿದ್ದರೂ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು