ಭಾನುವಾರ, ನವೆಂಬರ್ 28, 2021
20 °C
ಪದವೀಧರ ಕ್ಷೇತ್ರದ ಸದಸ್ಯ ನೋಂದಣಿಗೆ ಚಾಲನೆ

ಕಾಂಗ್ರೆಸ್‌ ಗೆಲುವಿಗಾಗಿ ಸಂಘಟಿತ ಹೋರಾಟ: ಎನ್‌.ಚಲುವರಾಯಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ವಿಧಾನ ಪರಿಷತ್‌ ಪದವೀಧರ ಕ್ಷೇತ್ರದಿಂದ ಕಳೆದ 40 ವರ್ಷದಿಂದಲೂ ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯಾಗಿಲ್ಲ. ಇನ್ನು ಮುಂದಾದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಸಂಘಟಿತ ಹೋರಾಟ ನಡೆಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಕಲ್ಲಹಳ್ಳಿ ಸುಮರವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಮಂಗಳವಾರ ನಡೆದ ಪದವೀಧರ ಕ್ಷೇತ್ರದ ಸದಸ್ಯ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಾಸನ ಹೊರತುಪಡಿಸಿದರೆ ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಿಂದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಜೆಡಿಎಸ್‌ ಪಕ್ಷವೇ ನಮಗೆ ಸ್ಪರ್ಧಿಯಾಗಿದ್ದು ಬಿಜೆಪಿ ನಮಗೆ ಸ್ಪರ್ಧಿಯಲ್ಲ. ಹಿಂದೆ ಯಾರು ತಪ್ಪು ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಮುಂದೆ ಇಂತಹ ತಪ್ಪುಗಳು ನಡೆಯದಂತೆ ಎಚ್ಚರ ವಹಿಸಬೇಕು. ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಬೇಕು’ ಎಂದರು.

‘ಮೈಷುಗರ್‌ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವಿಷಯದಲ್ಲಿ ಸದನದಲ್ಲೂ ಧ್ವನಿ ಎತ್ತಿದ್ದರು. ಆದರೆ, ಮಂಡ್ಯ ಜಿಲ್ಲೆ ನಂದು ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜೊತೆಗೆ ತುಮಕೂರು ಜಿಲ್ಲೆಯನ್ನು ಯಾವ ಕಾರಣಕ್ಕೆ ಕಡೆಗಣಿಸಿದರು, ಮನ್‌ಮುಲ್‌ ಹಗರಣಕ್ಕೆ ಮೂಗು ತೂರಿಸುವ ಇವರು, ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ಏಕೆ ಚಕಾರ ಎತ್ತಲಿಲ್ಲ’ ಎಂದು ಪ್ರಶ್ನಿಸಿದರು.

ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘ನಾಗಮಂಗಲದಲ್ಲಿ ಲಂಚ ತಾಂಡವ ಆಡುತ್ತಿದೆ ಎಂದು ಅಲ್ಲಿಯ ಶಾಸಕ ಸುರೇಶ್‌ಗೌಡ ಹೇಳುತ್ತಾರೆ, ಇತ್ತ ಮತ್ತೊಬ್ಬ ಶಾಸಕರು ತಮ್ಮ ಪಕ್ಷದ ಮುಖಂಡರ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕುತ್ತಾರೆ. ಜಿಲ್ಲೆಯಾದ್ಯಂತ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ತಾಲ್ಲೂಕುಗಳಲ್ಲಿ ಜೆಡಿಎಸ್‌ ಶಾಸಕ ಕಾರ್ಯವೈಖರಿಯನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮಧು ಜಿ.ಮಾದೇಗೌಡ ಮಾತನಾಡಿ ‘ದಕ್ಷಿಣ ಪದವೀಧರ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಜಯಗಳಿಸುವ ವಿಶ್ವಾಸವಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜನಪರ ಯೋಜನೆ ಜಾರಿಗೆ ತಂದಿದ್ದು ಬಿಟ್ಟರೆ ಸದ್ಯ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಜನರು ಮನಗಂಡಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಪದವೀಧರ ಕ್ಷೇತ್ರದ ನೋಂದಣಿ ಸದಸ್ಯತ್ವಕ್ಕೆ ಅರ್ಜಿ ನೀಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ಎಸ್‌.ಆತ್ಮಾನಂದ, ಬಿ.ರಾಮಕೃಷ್ಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮುಖಂಡರಾದ ರವಿಕುಮಾರ್ ಗಣಿಗ, ಹಾಲಹಳ್ಳಿ ರಾಮಲಿಂಗಯ್ಯ, ಅಪ್ಪಾಜಿಗೌಡ, ಸುರೇಶ್‌ಕಂಠಿ, ಸಿ.ಎಂ.ದ್ಯಾವಪ್ಪ, ಜಬೀವುಲ್ಲಾ, ಪ್ರಕಾಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು