ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಆಮ್ಲಜನಕ ಘಟಕ ಉದ್ಘಾಟನೆ

ಚಾಲನೆಗೊಳ್ಳದ ಯಂತ್ರ, ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಆಕ್ರೋಶ
Last Updated 7 ಅಕ್ಟೋಬರ್ 2021, 13:20 IST
ಅಕ್ಷರ ಗಾತ್ರ

ಮಂಡ್ಯ: ನಗರದ ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಆಮ್ಲಜನಕ ತಯಾರಿಕಾ ಘಟಕದ ಕಾಮಗಾರಿ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಹಲವು ಗೊಂದಲಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಗುರುವಾರ ಉದ್ಘಾಟಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಆಮ್ಲಜನಕ ಘಟಕ ಉದ್ಘಾಟನೆಗೆ ಗುರುವಾರ ಬೆಳಿಗ್ಗೆಯಷ್ಟೇ ತರಾತುರಿಯಲ್ಲಿ ಸಮಯ ನಗದಿ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಸಚಿವ ನಾರಾಯಣಗೌಡ ಘಟಕದ ಗುಂಡಿ ಒತ್ತಿದಾಗ ಯಂತ್ರ ಚಾಲನೆಗೊಳ್ಳಲಿಲ್ಲ. ಇದರಿಂದ ಕೆಂಡಾಮಂಡಲರಾದ ಸಚಿವರು ಮಿಮ್ಸ್‌ ಆಸ್ಪತ್ರೆ ವೈದ್ಯರು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಗೊಂದಲಕ್ಕೀಡಾದ ಅಧಿಕಾರಿಗಳು ನಂತರ ತಾಂತ್ರಿಕ ಸಮಸ್ಯೆ ಸರಿಪಡಿಸಿ ಉದ್ಘಾಟನೆ ಮಾಡಿಸಿದರು.

‘ಕಾಮಗಾರಿ ಪೂರ್ಣಗೊಳ್ಳದಿದ್ದರೂ ಘಟಕ್ಕೆ ಚಾಲನೆ ನೀಡುವ ಅನಿವಾರ್ಯ ಏನಿತ್ತು, ಕಾರ್ಯಕ್ರಮ ಆಯೋಜನೆ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ, ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ, ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ದಸರಾ ಕೆಲಸ ಮಾಡುತ್ತಿದ್ದಾರೆ. ಗೊಂದಲಗಳ ನಡುವೆ ಏಕೆ ಕಾರ್ಯಕ್ರಮ ಮಾಡಬೇಕಾಗಿತ್ತು’ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ‘ತಾಂತ್ರಿಕ ಸಮಸ್ಯೆಯಿಂದ ಯಂತ್ರ ಚಾಲನೆಗೊಳ್ಳಲಿಲ್ಲ, ಈಗ ಸರಿಪಡಿಸಲಾಗಿದೆ. ಘಟಕದ ಕಾಮಗಾರಿ ಪೂರ್ಣಗೊಂಡಿದ್ದು ಆಮ್ಲಜನಕ ಸರಬರಾಜು ಮಾಡುವ ಸಿಬ್ಬಂದಿಗೆ ತರಬೇತಿ ನೀಡಬೇಕಾಗಿದೆ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಹೈಟ್ಸ್‌ ತಂಡ ಸಿಬ್ಬಂದಿಗೆ ತರಬೇತಿ ನಿಡಲಿದ್ದಾರೆ. ಇನ್ನು 10 ದಿನಗಳಲ್ಲಿ ಘಟಕದಿಂದ ಆಮ್ಲಜನಕ ಸರಬರಾಜು ಮಾಡಲಾಗುವುದು’ ಎಂದು ಹೇಳಿದರು.

ಸಚಿವ ನಾರಾಯಣಗೌಡ ಮಾತನಾಡಿ ‘ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳುಂಟಾದರೂ ನುರಿತ ತಂತ್ರಜ್ಞರನ್ನು ನೇಮಿಸಿ ಶೀಘ್ರದಲ್ಲಿ ಸರಿಪಡಿಸಲಾಗುವುದು’ ಎಂದರು.

‘ಮುಂಬರುವ ಕೋವಿಡ್ ಅಲೆಗಳನ್ನು ಎದುರಿಸಲು ಮುನ್ನೆಚ್ಚರಿಕಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ನಮ್ಮ ಜಲ್ಲೆಯಾದ್ಯಂತ ಪ್ರತೀ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಲಾಗಿದೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಜನರಿಗೆ ಚಿಕಿತ್ಸೆ ನೀಡುವಲ್ಲಿ ಹಾಗೂ ಲಸಿಕಾ ಪ್ರಮಾಣವನ್ನು ಹೆಚ್ಚಿಸುವಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಪ್ರಯತ್ನ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆ ನಿರಂತರವಾಗಿ ನಡೆಯುತ್ತಿದ್ದು ಸೋಂಕು ಹರಡದಂತೆ ತಡೆಯಲಾಗಿದೆ’ ಎಂದರು.

ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಮಿಮ್ಸ್ ನಿರ್ದೇಶಕರಾದ ಹರೀಶ್, ಜಿಲ್ಲಾ ಆರೋಗ್ಯಾಧಿಕಾರಿ ಧನಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT