ಬುಧವಾರ, ಜೂಲೈ 8, 2020
25 °C

ಮೇಲುಕೋಟೆ: ಪಿಂಚಣಿ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ‘ಫಲಾನುಭವಿಗಳ ಬಳಿಗೆ ಬಂದು ಮಾಸಾಶನ ಮಂಜೂರಾತಿ ಆದೇಶಗಳನ್ನು ವಿತರಿಸುವ ಕಾರ್ಯವನ್ನು ಪಿಂಚಣಿ ಅದಾಲತ್ ಮೂಲಕ ಮಾಡಲಾಗುತ್ತಿದೆ’ ಎಂದು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ ತಿಳಿಸಿದರು.

ಮೇಲುಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಂಚಣಿ ಅದಾಲತ್ ಹಾಗೂ ಜನಸ್ಪಂದನ ಸಭೆಯಲ್ಲಿ ಫಲಾನುಭವಿಗಳಿಗೆ ಆದೇಶಪತ್ರಗಳನ್ನು ವಿತರಿಸಿದ ತಹಶೀಲ್ದಾರ್ ಮಾತನಾಡಿದರು.

ಮೇಲುಕೋಟೆ ಹೋಬಳಿಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ ಮಾಸಾಶನಕ್ಕೆ ಅರ್ಹ ಫಲಾನುಭವಿಗಳಿಂದ ಕಳೆದ ತಿಂಗಳು ಅರ್ಜಿಗಳನ್ನು ಸ್ವೀಕರಿಸಿ, ಮೇಲುಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಮಂದಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ.

ಮಾಸಾಶನ ಪಡೆಯುತ್ತಿದ್ದವರಿಗೆ ಆಕಸ್ಮಿಕವಾಗಿ ಸ್ಥಗಿತವಾಗಿದ್ದರೆ, ಅಂತಹ ಫಲಾನುಭವಿಗಳು ಆದೇಶಪತ್ರ, ಆಧಾರ್‌ಕಾರ್ಡ್‌ ಹಾಗೂ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಪಾಂಡವಪುರ ಖಜಾನಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು. ಮಾಸಾಶನ ಮಂಜೂರಾತಿ ಪತ್ರ ಪಡೆಯದಿದ್ದವರು, ಗ್ರಾ.ಪಂ. ಕಚೇರಿಯಲ್ಲಿ ಆದೇಶಪತ್ರಗಳನ್ನು ಪಡೆಯಬಹುದು ಎಂದರು.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮುಖ್ಯಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸಿದರೆ, ಶಾಲೆಯ ಕೊಳವೆಬಾವಿಗೆ ರೀಬೋರಿಂಗ್ ಮಾಡಿಸಲು ಕ್ರಮ ವಹಿಸಲಾಗುತ್ತದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ತುರ್ತು ನಿರ್ದೇಶನ ನೀಡುತ್ತೇನೆ. ಕುಡಿಯುವ ನೀರಿನ ಯಾವುದೇ ರೀತಿಯ ಸಮಸ್ಯೆಯನ್ನೂ ತಾಲ್ಲೂಕು ಆಡಳಿತ ತಕ್ಷಣ ಬಗೆಹರಿಸುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ತಿಳಿಸಿದರು.

ಮಾಸಾಶನ ಪಡೆಯಲು ಮೇಲುಕೋಟೆ ಎಸ್.ಬಿ.ಐ.ನಲ್ಲಿ ಬ್ಯಾಂಕ್ ಖಾತೆ ತೆರೆಯಲು ಕಷ್ಟವಾಗುತ್ತಿದೆ ಎಂಬ ಫಲಾನುಭವಿಗಳ ಮನವಿ ಆಲಿಸಿದ ತಹಶೀಲ್ದಾರ್ ಮೇಲುಕೋಟೆ ಎಸ್‌.ಬಿ.ಐ. ಬ್ಯಾಂಕ್‌ನ ವ್ಯವಸ್ಥಾಪಕ ಹಮೀದ್ ಹನ್ಸಾರಿ ಅವರನ್ನು ಕರೆಸಿ, ಫಲಾನುಭವಿಗಳಿಗೆ ಶೂನ್ಯ ಠೇವಣಿಯ ಬ್ಯಾಂಕ್ ಖಾತೆಗಳನ್ನು ತೆರದು ಕೊಡಿ. ಸರ್ಕಾರದ ಯೋಜನೆಗಳ ಸೌಲಭ್ಯ ಬಡವರಿಗೆ ತಲುಪಲು ಕ್ರಮ ವಹಿಸಿ ಎಂದು ಸಭೆಯಲ್ಲಿ ಸೂಚಿಸಿದರು.

ಗ್ರಾ.ಪಂ. ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಸಾಕಮ್ಮ, ಉಪ ತಹಶೀಲ್ದಾರ್ ರಾಜೇಶ್, ಕಂದಾಯ ವೃತ್ತ ನಿರೀಕ್ಷಕ ದಿನೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ರಮೇಶ್, ಸೋಮು, ಮಹೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು