ಗುರುವಾರ , ಫೆಬ್ರವರಿ 20, 2020
27 °C
ಶಿವಾಜಿ ಜಯಂತ್ಯುತ್ಸವ: ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿಕೆ

ಸರ್ವಧರ್ಮಗಳ ಸಂರಕ್ಷಕನಾಗಿದ್ದ ಶಿವಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಹಿಂದೂ ಧರ್ಮ ಸೇರಿ ಸರ್ವಧರ್ಮೀಯರ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜ ಆದರ್ಶ, ಶೌರ್ಯ, ಸ್ತ್ರೀಗೌರವ ಹಾಗೂ ದೇಶಭಕ್ತಿ ಗುಣಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಸರ್ವಧರ್ಮಗಳ ಸಂರಕ್ಷಕ ಶಿವಾಜಿ ಶಾಂತಿಧೂತ ಸಂತ ತುಕರಾಂ, ಧರ್ಮ ಮಾರ್ಗದರ್ಶಕ ಜ್ಞಾನೇಶ್ವರರು ಹುಟ್ಟಿದ ನಾಡಿನಲ್ಲಿ ನಾವು ಜನಿಸಿದ್ದೇವೆ. ಅವರು ಕಟ್ಟಿ ಬೆಳೆಸಿದ ನಾಡಿನ ಮಣ್ಣಿನಲ್ಲಿ ಹುಟ್ಟಿರುವ ನಾವುಗಳೇ ಧನ್ಯರು. ಈ ಕುರಿತು ನಮಗೆ ಹೆಮ್ಮೆ, ಅಭಿಮಾನ ಇರಬೇಕು. ಜೊತೆಗೆ ಅವರ ಆದರ್ಶ ಹಾಗೂ ದೇಶಭಕ್ತಿ ಗುಣಗಳನ್ನು ಮೈಗೂಡಿಸಿಕೊಂಡು ಸ್ವಾಭಿಮಾನದಿಂದ ಜೀವನ ಮಾಡಬೇಕು. ಸರ್ವರೂ ಶಿವಾಜಿ ಚರಿತ್ರೆ ಓದುವ ಮೂಲಕ ಉತ್ತಮ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಆರ್‌ಎಸ್‌ಎಸ್ ಮುಖಂಡ ಕೆ.ಎನ್.ಶಂಕರರಾವ್ ಜಾಧವ್ ಮಾತನಾಡಿ ‘ನಮ್ಮ ದೇಶದ ಪಠ್ಯದಲ್ಲಿ ವಿದೇಶಿಗರ ದಾಳಿಯ ಬಗ್ಗೆ ಹೆಚ್ಚು ಸೇರ್ಪಡೆ ಮಾಡಿದ್ದಾರೆ. ವಿದೇಶಿಗರ ಆಡಳಿತವನ್ನು ಸೀಮಿತಗೊಳಿಸಿ, ದೇಶ ಹಾಗೂ ಹಿಂದೂ ಸಾಮ್ರಾಜ್ಯ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿ ಹೋರಾಡಿದವರ ಬಗ್ಗೆ ಅಳವಡಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಛತ್ರಪತಿ ಶಿವಾಜಿ ಕುರಿತು ವಿಶಾಲ ಮಾಹಿತಿಯನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ಮಾನವೀಯತೆ, ಸ್ತ್ರೀ ಕಾಳಜಿ, ದೇಶಪ್ರೇಮ, ಚತುರ ಬುದ್ಧಿ ಹಾಗೂ ಶೌರ್ಯ ಗುಣಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ನಮ್ಮ ಸಮುದಾಯ ಅಭಿವೃದ್ಧಿಗೆ ಪರಸ್ಪರ ಸಹಕಾರ ನೀಡಬೇಕು’ ಎಂದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷ ರಣೋಜೆರಾವ್‌ಸಾಠೆ ಮಾತನಾಡಿ ‘ರಾಜ್ಯದಲ್ಲಿ 60 ಲಕ್ಷ ಮರಾಠಿಗರಿದ್ದಾರೆ. ನಾವು ಎಲ್ಲರೂ ಸಂಘಟನೆಯಾಗುವ ಮೂಲಕ ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕು. ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಸಂಘ ಸಂಸ್ಥೆಗಳು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಸ್ಥಾಪನೆ, ವಿದ್ಯಾರ್ಥಿ ವೇತನ ಹಾಗೂ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಮರಾಠ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಯೋಧರು ಹಾಗೂ ಸಾಧಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಶಿವಾಜಿ ಮಹಾರಾಜರ ಭಾವಚಿತ್ರವನ್ನು ನಗರದ ವಿಶ್ವೇಶ್ವರಯ್ಯ ಪ್ರತಿಮೆಯಿಂದ, ಗಾಂಧಿ ಭವನದವರೆಗೆ ಮೆರವಣಿಗೆ ಮಾಡಲಾಯಿತು.

ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಮೈಸೂರಿನ ಎಸ್.ಸುರೇಶ್‌ರಾವ್ ಸಾಠೆ, ಖಜಾಂಚಿ ವೆಂಕಟರಾವ್ ಚವಾಣ್, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ರಾವ್ ಸಲಹರ್, ಮಾಜಿ ಶಾಸಕ ಮಾರುತಿರಾವ್ ಪವಾರ್, ಮುಖಂಡರಾದ ಭೈರೋಜಿರಾವ್, ನಾರಾಯಣರಾವ್‌ ಸೂರ್ಯವಂಶಿ, ಎನ್.ಕುಮಾರ್ ಸಾವಂತ್, ರಾಘವೇಂದ್ರರಾವ್ ಹಜಾರೆ, ಭಕ್ತವತ್ಸಲ ಜವಳೇಕರ್, ಚಿತ್ರನಟ ರವಿಶಂಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು