ಬುಧವಾರ, ಫೆಬ್ರವರಿ 19, 2020
23 °C
ಜನರ ಮನವೊಲಿಸುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು

ಮಂಡ್ಯದಲ್ಲಿ ಪ್ಲಾಸ್ಟಿಕ್‌ ಬಳಕೆ ತಡೆಗೆ ಗಾಂಧಿಗಿರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪ್ಲಾಸ್ಟಿಕ್‌ ಬಳಕೆ ತಡೆಗಟ್ಟಲು ತಾಲ್ಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಧಿಕಾರಿಗಳು ‘ಗಾಂಧಿಗಿರಿ’ ಮಾರ್ಗ ಹಿಡಿದಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಬೀಗರ ಔತಣ, ಗೃಹ ಪ್ರವೇಶ, ಜನ್ಮದಿನ, ತಿಥಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ತೆರಳಿ ಪ್ಲಾಸ್ಟಿಕ್‌ ಹಾಳೆ, ತಟ್ಟೆ, ಲೋಟ, ಬಾಟಲಿ, ಬೋಗುಣಿ, ಚಮಚ ಬಳಸದಂತೆ ಮನವೊಲಿಸುತ್ತಿದ್ದಾರೆ.

ಕಾರ್ಯಕ್ರಮದ ಒಂದೆರಡು ದಿನ ಮೊದಲೇ ಸಂಬಂಧಿಸಿದವರ ಮನೆಗೆ ತೆರಳಿ ಪ್ಲಾಸ್ಟಿಕ್‌ ಬದಲು ಕಾಗದ, ಎಲೆ, ಇತರ ಕರಗುವ ಮತ್ತು ನಿರುಪದ್ರವಿ ವಸ್ತುಗಳನ್ನು ಬಳಸುವಂತೆ ಅರಿವು ಮೂಡಿಸುತ್ತಿದ್ದಾರೆ.

ಸಾಮೂಹಿಕ ಊಟದ ಕಾರ್ಯ ಕ್ರಮಗಳಿಗೆ ತೆರಳಿ ‘ಪ್ಲಾಸ್ಟಿಕ್‌ ವಸ್ತು ಬಳಸುವುದಿಲ್ಲ’ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ. ತಮ್ಮ ಮನವಿಗೆ ಓಗೊಡುವವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಮತ್ತು ಕಾರ್ಯದರ್ಶಿ ಸಾರ್ವಜನಿಕವಾಗಿ ಅಭಿನಂದಿಸುತ್ತಿದ್ದಾರೆ. ಮೈಸೂರು ಪೇಟ, ಮಣಿ ಹಾರ ತೊಡಿಸಿ ಸನ್ಮಾನಿಸಲಾಗುತ್ತಿದೆ. ಆ ಮೂಲಕ ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ.

ನಗುವನಹಳ್ಳಿಯ ನಿವಾಸಿ ನಟರಾಜ್‌ ಅವರ ಗೃಹ ಪ್ರವೇಶ ಕಾರ್ಯಕ್ರಮ ಶುಕ್ರವಾರ ನಡೆದಿದ್ದು, ಅದಕ್ಕಾಗಿ ತಂದಿದ್ದ ನೀರಿನ ಬಾಟಲಿ, ಹಾಳೆ, ಲೋಟಗಳನ್ನು ಬದಿಗಿಡಲಾಯಿತು. ‘ಪ್ಲಾಸ್ಟಿಕ್‌ ಬಳಸುವುದಿಲ್ಲ’ ಎಂದು ‌ಶಪಥ ಮಾಡಿದರು. ನಟರಾಜ್‌ ಅವರನ್ನು ಗ್ರಾ.ಪಂ ವತಿಯಿಂದ ಸನ್ಮಾನಿಸಲಾಯಿತು.

ಪ್ಲಾಸ್ಟಿಕ್‌ ಬಳಕೆ ವಿರುದ್ಧ ಮಂಡ್ಯ ಡಯಟ್‌ನ ಉಪನ್ಯಾಸಕ ಜಯಶಂಕರ್‌ ನೇತೃತ್ವದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

‘ಪ್ಲಾಸ್ಟಿಕ್‌ ವಸ್ತುಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಇದ್ದು, ಜನರ ಆರೋಗ್ಯವನ್ನು ಕೆಡಿಸುತ್ತಿವೆ. ಪರಿಸರ ಹಾಳಾಗುತ್ತಿದೆ. ಜಾನುವಾರುಗಳ ಹೊಟ್ಟೆ ಸೇರುತ್ತಿದೆ. ಮೂರು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಉಪನ್ಯಾಸಕ ಜಯಶಂಕರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು