ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಲು ಅರಕೇಶ್ವರಸ್ವಾಮಿ ದೇಗುಲದ ಅರ್ಚಕರ ಕೊಲೆ: ಐವರ ಬಂಧನ, ಮೂವರಿಗೆ ಗುಂಡೇಟು

ಆರೋಪಿಗಳಿಂದ ₹ 1.75 ಲಕ್ಷ ವಶ, ಉಳಿದವರ ಪತ್ತೆಗಾಗಿ ಹುಡುಕಾಟ
Last Updated 14 ಸೆಪ್ಟೆಂಬರ್ 2020, 9:11 IST
ಅಕ್ಷರ ಗಾತ್ರ
ADVERTISEMENT
""
""

ಮಂಡ್ಯ: ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದ ಅರ್ಚಕರನ್ನು ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಲ್ಲಿ ಮೂವರನ್ನು ಮದ್ದೂರು ತಾಲ್ಲೂಕು, ಸಾದೊಳಲು ಗೇಟ್‌ ಬಳಿ ಸೋಮವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿ, ಕಾಲಿಗೆ ಗುಂಡಿ ಹಾರಿಸಿ ಬಂಧಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು, ಗ್ರಾಮನಹಳ್ಳಿ ಗ್ರಾಮದ ಅಭಿ (22), ರಘು (22) ಅವರನ್ನು ಭಾನುವಾರವೇ ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಸಾದೊಳಲು ಗೇಟ್‌ನ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದ ಮೂವರು ಆರೋಪಿಯನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ, ಚಿತ್ತೂರು ಜಿಲ್ಲೆಯ ರೆಡೇರಿಪಲ್ಲಿ ಗ್ರಾಮದ ವಿಜಯ್‌ (28), ರಾಮನಗರ ಜಿಲ್ಲೆ ಸುಬ್ಬರಾಯನಪಾಳ್ಯದ ಮಂಜು (25), ರಾಮನಗರ ಜಿಲ್ಲೆ ಹುಗೇನಹಳ್ಳಿಯ ಚಂದ್ರ (22) ಬಂಧಿತರು.

ಆರೋಪಿಗಳ ಪತ್ತೆಗೆ ಪೊಲೀಸರ ಮೂರು ತಂಡಗಳು ಭಾನುವಾರ ರಾತ್ರಿಯಿಂದಲೂ ಹುಡುಕಾಟ ನಡೆಸಿತ್ತು. ಆರೋಪಿಗಳು ಚಾಮನಹಳ್ಳಿ ರೈಲ್ವೆ ಕೆಳಸೇತುವೆ, ಕೆಸ್ತೂರು ಕ್ರಾಸ್‌ ಸೇರಿ ಹಲವು ಸ್ಥಳಗಳ ಬದಲಾವಣೆ ಮಾಡಿದ್ದ ಮಾಹಿತಿ ತಿಳಿದಿತ್ತು. ಕೊನೆಗೆ ನಿರ್ಜನವಾಗಿದ್ದ ಸಾದೊಳಲು ಗೇಟ್‌ನ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದರು ಎಂಬ ನಿಖರ ಮಾಹಿತಿ ಸಿಕ್ಕಿತ್ತು.

‘ಶರಣಾಗುವಂತೆ ನಮ್ಮ ಪೊಲೀಸರು ಆರೋಪಿಗಳಿಗೆ ಸೂಚಿಸಿದ್ದಾರೆ. ಆದರೆ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ದುಷ್ಕರ್ಮಿಗಳು ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಾಣ ರಕ್ಷಣೆಗಾಗಿ ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ’ ಎಂದು ದಕ್ಷಿಣ ವಲಯ ಪೊಲೀಸ್‌ ಮಹಾನಿರ್ದೇಶಕ ವಿಪುಲ್‌ ಕುಮಾರ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಣ ವಶ: ‘ಅಭಿ ಮತ್ತು ರಘು ಅವರಿಂದ ಹುಂಡಿಯಲ್ಲಿ ಕಳ್ಳತನ ಮಾಡಿದ್ದ ₹ 1.75 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಣವನ್ನು ಹಂಚಿಕೊಂಡಿದ್ದಾರೆ. 9–10 ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದು ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇದು ಹುಂಡಿ ಹಣಕ್ಕಾಗಿ ಮಾಡಿದ ಕೊಲೆ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಕರಣ ಭೇದಿಸಿದ ಮಂಡ್ಯ ಎಸ್‌ಪಿ ಕೆ.ಪರಶುರಾಮ್‌ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ’ ಎಂದರು.

ಘಟನೆಯಲ್ಲಿ ಪೂರ್ವ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಶರತ್‌ ಕುಮಾರ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಅನಿಲ್‌ ಕುಮಾರ್‌, ಕೃಷ್ಣಕುಮಾರ್‌ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಂಧಿತ ಆರೋಪಿಗಳು

ಜನರ ಮಾಹಿತಿಯೇ ಸಾಕ್ಷ್ಯ

‘ಆರೋಪಿಗಳ ಪತ್ತೆಗೆ ಸಾರ್ವಜನಿಕರು ನೀಡಿದ ಮಾಹಿತಿಯೇ ಪ್ರಮುಖ ಸಾಕ್ಷ್ಯವಾಗಿತ್ತು. ಘಟನೆ ನಡೆದ ಕ್ಷಣದಿಂದಲೂ ಜನರು ಪೊಲೀಸರನ್ನು ಭೇಟಿಯಾಗಿ, ಕರೆ ಮಾಡಿ ಮಾಹಿತಿ ನೀಡಿದ್ದರು. ಮಂಡ್ಯ ಜಿಲ್ಲೆಯ ಜನರ ಸಹಕಾರ ಸಂತಸ ತಂದಿದೆ. ಜನರು ಮತ್ತು ಪೊಲೀಸರು ಸಹಕಾರದಿಂದ ನಡೆದರೆ ಎಂತಹುದೇ ಪ್ರಕರಣವನ್ನು ಭೇದಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ’ ಎಂದು ವಿಪುಲ್‌ ಕುಮಾರ್‌ ಹೇಳಿದರು.

ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸರು
ಮೃತ ಅರ್ಚಕರಾದ ಪ್ರಕಾಶ್,‌ ಆನಂದ್‌, ಗಣೇಶ್‌

ಅರ್ಚರನ್ನು ಕೊಂದು ಹುಂಡಿ ಹಣ ದೋಚಿದ್ದರು

ಮಂಡ್ಯದಗುತ್ತಲು ಗ್ರಾಮದ ಅರಕೇಶ್ವರಸ್ವಾಮಿ ದೇವಾಲಯಕ್ಕೆ ಗುರುವಾರ (ಸೆ.11) ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿಗಳಲ್ಲಿದ್ದ ಹಣ ದೋಚಿದ್ದರು.ಗುತ್ತಲು ನಿವಾಸಿಗಳಾದ ಗಣೇಶ್‌ (45), ಪ್ರಕಾಶ್‌ (52), ಆನಂದ್‌ (38) ಹತ್ಯೆಯಾದವರು. ಶಿವಾರ್ಚಕ ಸಮುದಾಯಕ್ಕೆ ಸೇರಿದ್ದ ಕುಟುಂಬಗಳು ಸರದಿ ಆಧಾರದ ಮೇಲೆ ಅರಕೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದವು. ಈ ಅರ್ಚಕರು ದೇವರಿಗೆ ಪೂಜೆ ಸಲ್ಲಿಸುವ ಜೊತೆಗೆ ದೇವಾಲಯವನ್ನು ಕಾಯುವ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.

ಹಜಾರದಲ್ಲಿ ಮಲಗಿದ್ದ ಅರ್ಚಕರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆಯಲಾಗಿತ್ತು. ಮೂವರೂ ಅರ್ಚಕರ ಸ್ಥಳದಲ್ಲೇ ಮೃತಪಟ್ಟಿದ್ದರು. ಮೂರು ದೊಡ್ಡ ಹುಂಡಿಗಳನ್ನು ದೇವಾಲಯದ ಆವರಣದಲ್ಲೇ ಒಡೆದು,ಅದರಲ್ಲಿದ್ದ ನೋಟುಗಳನ್ನು ಮಾತ್ರ ಕಳ್ಳರು
ದೋಚಿದ್ದರು.ಶುಕ್ರವಾರ ಬೆಳಿಗ್ಗೆ ಪಾಳಿಯ ಅರ್ಚಕರು (ಸೆ.11) ಪೂಜೆಗೆ ತೆರಳಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿತ್ತು.

ಮುಜರಾಯಿ ಇಲಾಖೆಗೆ ಸೇರಿದ್ದ ಈ ದೇಗುಲದಲ್ಲಿಪ್ರತಿ ನಾಲ್ಕು ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿತ್ತು. ಕೋವಿಡ್‌–19 ಕಾರಣದಿಂದ ಕಳೆದ 10 ತಿಂಗಳಿಂದ ತೆರೆದಿರಲಿಲ್ಲ.

ದೇವಾಲಯದ ಆವರಣದಲ್ಲೇ ಹುಂಡಿ ಒಡೆದು ನೋಟುಗಳನ್ನು ದೋಚಿ, ಚಿಲ್ಲರೆ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿರುವುದು

ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇಗುಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

‘ದೇವಾಲಯದ ಅರ್ಚಕರ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹತ್ಯೆ ಮಾಡಿರುವ ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡಲೇ ಆರೋಪಿಗಳ ಪತ್ತೆಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದರು.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು.

ದೇವಾಲಯದ ಮುಂದೆ ಸೇರಿದ್ದ ಜನಸ್ತೋಮ

ಮಂಡ್ಯ ಜಿಲ್ಲೆಯ ದೇಗುಲಗಳಲ್ಲಿ ಸರಣಿ ಕಳ್ಳತನ

ಕಳೆದ ಒಂದು ತಿಂಗಳಿಂದೀಚೆಗೆ ಮಂಡ್ಯ ಜಿಲ್ಲೆಯ ವಿವಿಧೆಡೆ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನವಾಗಿದೆ. ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ, ಹೊಳಲು ತಾಂಡವೇಶ್ವರ ದೇವಾಲಯ ಹಾಗೂ ಮದ್ದೂರಿನ ದೇವಾಲಯವೊಂದರಲ್ಲಿ ಹುಂಡಿ ಕಳ್ಳತನವಾಗಿದೆ. ಈ ಕುರಿತು ಅರ್ಚಕರು, ದೇವಾಲಯ ಸಮಿತಿ ಸದಸ್ಯರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

‘ಸರಣಿ ಕಳ್ಳತನ ಪ್ರಕರಣಗಳ ಬಗ್ಗೆ ತಹಶೀಲ್ದಾರ್‌ ಗಮನಕ್ಕೆ ತರಲಾಗಿತ್ತು. ಆದರೆ ದೇವಾಲಯಗಳ ಭದ್ರತೆಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಮೂವರ ಪ್ರಾಣ ಉಳಿಯುತ್ತಿತ್ತು’ ಎಂದು ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಹೇಳಿದರು.

ಅರಕೇಶ್ವರ ದೇಗುಲ ಪರಿಸರದಲ್ಲಿ ಕಳ್ಳರ ಕೈಚಳಕ

ಮಂಡ್ಯ ನಗರದಿಂದ ಕೊಂಚ ದೂರದಲ್ಲಿ ಇರುವಅರಕೇಶ್ವರ ದೇವಾಲಯದಲ್ಲಿ ಸರ ಅಪಹರಣ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದವು. ಕಾರ್ತೀಕ ಮಾಸ, ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ವಿಶೇಷ ಪೂಜೆಗಳ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದರು. ಈ ಸಂದರ್ಭದಲ್ಲಿ ಕಳ್ಳರು ಕೈಚಳಕ ತೋರುತ್ತಿದ್ದರು. ಎರಡು ವರ್ಷಗಳ ಹಿಂದೆ ಗೌರಿ ಹಬ್ಬದ ದಿನ ನಾಲ್ವರು ಮಹಿಳೆಯರ ಸರ ಅಪಹರಣ ಪ್ರಕರಣಗಳು ವರದಿಯಾಗಿದ್ದವು.

ಸರ ಅಪಹರಣ ಪ್ರಕರಣಗಳ ನಂತರ ಮುಜರಾಯಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿರಲಿಲ್ಲ. ಸಿಸಿಟಿವಿ ಕ್ಯಾಮೆರಾ ಸರಿಯಾಗಿದ್ದರೆ ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT