ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಪೊಲೀಸರಿಂದ ರೌಡಿ ಶೀಟರ್ ಕಾಲಿಗೆ ಗುಂಡೇಟು: ಆರೋಪಿ ಬಂಧನ

Published : 11 ಆಗಸ್ಟ್ 2024, 5:51 IST
Last Updated : 11 ಆಗಸ್ಟ್ 2024, 5:51 IST
ಫಾಲೋ ಮಾಡಿ
Comments

ಹಲಗೂರು (ಮಂಡ್ಯ): ವಿವಿಧ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಬಾಳೆ ಹೊನ್ನಿಗ ಗ್ರಾಮದ ಮುತ್ತುರಾಜು ಅಲಿಯಾಸ್ ಡಕ್ಕ ಎಂಬಾತನ ಮೇಲೆ ಭಾನುವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಲಗೂರು, ಕಿರುಗಾವಲು, ಹಾರೋಹಳ್ಳಿ ಮತ್ತು ಮಂಡ್ಯ ಪೂರ್ವ ಠಾಣೆಗಳಲ್ಲಿರುವ ಹನ್ನೊಂದು ಕೊಲೆ ಪ್ರಕರಣಗಳು ಮತ್ತು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಹಲವು ದಿನಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ.

ಭಾನುವಾರ ಬೆಳಿಗ್ಗೆ ಆರೋಪಿ ಮುತ್ತುರಾಜ್ ಮಂಡ್ಯದಿಂದ ಮಳವಳ್ಳಿ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಚಿಕ್ಕಮುಲಗೂಡು ಮತ್ತು ಹನಿಯಂಬಾಡಿ ನಡು ಮಾರ್ಗದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಯನ್ನು ಅಡ್ಡಗಟ್ಟಿದ್ದಾರೆ.

ತಕ್ಷಣ ಚಾಲಾಕಿ ಬುದ್ಧಿ ತೋರಿದ ಆರೋಪಿ ಬೈಕ್ ಅನ್ನು ಮುಖ್ಯ ರಸ್ತೆಯಿಂದ ಜಮೀನುಗಳಿಗೆ ತೆರಳುವ ಕಚ್ಚಾ ರಸ್ತೆಗೆ ತಿರುಗಿಸಿದ್ದಾನೆ.

ಕಾನ್‌ಸ್ಟೆಬಲ್ ಮೇಲೆ ಹಲ್ಲೆ

ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಸುತ್ತುವರಿದಾಗ ಪೊಲೀಸ್ ಕಾನ್‌ಸ್ಟೆಬಲ್ ಸಿದ್ದರಾಜು ಅವರಿಗೆ ಮಾರಕಾಸ್ತ್ರಗಳಿಂದ ಇರಿಯಲು ಹೋದಾಗ ತಪ್ಪಿಸಿಕೊಂಡಿದ್ದು, ಬಲಗೈಗೆ ಗಾಯಗಳಾಗಿವೆ.

ಪರಿಸ್ಥಿತಿ ಅರಿತ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಪರಾರಿಯಾಗಲು ಯತ್ನಿಸಿದ ಆರೋಪಿ ಮುತ್ತುರಾಜ್ ಮೇಲೆ ಸಿಪಿಐ ಬಿ.ಎಸ್.ಶ್ರೀಧರ್ ಗುಂಡಿನ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರೋಪಿಯ ಬಲಗಾಲಿನ ಮಂಡಿಗೆ ಗುಂಡು ಒಳಹೊಕ್ಕಿದ್ದು, ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿದ್ದರಾಜು ಅವರ ಬಲಗೈಗೆ ಗಾಯಗಳಾಗಿದ್ದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ಪೇದೆ ಸಿದ್ದರಾಜು, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ (ಬಲ)

ಗಾಯಗೊಂಡ ಪೇದೆ ಸಿದ್ದರಾಜು, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ (ಬಲ)

ಪ್ರಕರಣದ ಹಿನ್ನಲೆ
ಹಲಗೂರು ಸಮೀಪದ ದೇವಿರಹಳ್ಳಿ ಗೇಟ್ ಬಳಿ ಇತ್ತೀಚೆಗೆ ಕಾಂತರಾಜು ಎಂಬಾತನ ಕೊಲೆ ನಡೆದಿತ್ತು. ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಮತ್ತುರಾಜು ಸೂಚನೆ ಮೇರೆಗೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಮುತ್ತುರಾಜ್ ಅಲಿಯಾಸ್ ಡಕ್ಕ ನ ಬಂಧನಕ್ಕೆ ತಂಡ ರಚಿಸಿ ಕಾರ್ಯಾಚರಣೆ ರೂಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT