ಶನಿವಾರ, ಸೆಪ್ಟೆಂಬರ್ 25, 2021
22 °C
ಕೆಆರ್‌ಎಸ್‌ ಹಿನ್ನೀರು, ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ತೆರಳಲು ಪ್ರವಾಸಿಗರ ಹರಸಾಹಸ

ಪಾಂಡವಪುರ: ಮಂಡಿಯುದ್ದ ಗುಂಡಿ, ಹೊಂಡಮಯ ರಸ್ತೆ

ಹಾರೋಹಳ್ಳಿ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಕೆಆರ್‌ಎಸ್‌ ಹಿನ್ನೀರು, ಇತಿಹಾಸ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹಾಳಾಗಿದೆ. ದೂಳಿನ ಮಜ್ಜನ, ಗುಂಡಿ ತಪ್ಪಿಸುವುದು, ಅಪಘಾತಗಳು ಸಾಮಾನ್ಯವಾಗಿದ್ದು, ಗುಂಡಿ ಬಿದ್ದಿರುವ ರಸ್ತೆಯಲ್ಲಿ ಬಿದ್ದು ಪ್ರಾಣ ಹಾನಿಯಾಗಿರುವ ಹಲವು ಉದಾಹರಣೆಗಳು
ಕಣ್ಣಮುಂದಿವೆ.

ಪಾಂಡವಪುರ–ಕೆಆರ್‌ಎಸ್‌ ಮುಖ್ಯ ರಸ್ತೆ, ಕೆಆರ್‌ಎಸ್ ಹಿನ್ನೀರಿನ ಹೊಸ ಕನ್ನಂಬಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಚಿಕ್ಕಬ್ಯಾಡರಹಳ್ಳಿ ಮತ್ತು ದೊಡ್ಡಬ್ಯಾಡರಹಳ್ಳಿ ರೈಲ್ವೆ ನಿಲ್ದಾಣದ ಸಮೀಪದವರೆಗೂ ಗುಂಡಿಗಳ ಕಾರುಬಾರು ಜೋರಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಹಳ್ಳಗಳಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ.

ಬಸ್ತಿಹಳ್ಳಿ ಗ್ರಾಮ, ಹೊಸಕನ್ನಂಬಾಡಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳದ್ದೇ ಕಾರುಬಾರು. ಎಚ್ಚರ ತಪ್ಪಿದರೆ ಚಿಕ್ಕ ಮಕ್ಕಳು, ದ್ವಿಚಕ್ರ ವಾಹನಗಳನ್ನು ಮುಳುಗಿಸಿ ಬಿಡುವ ರಸ್ತೆ ಅಪಾಯಕ್ಕೆ ಆಹ್ವಾನ ನೀಡುತ್ತವೆ. ಈ ರಸ್ತೆಯ ಮೂಲಕವೇ ಕೆಆರ್‌ಎಸ್‌ ಹಿನ್ನೀರಿನ ವೀಕ್ಷಣೆ ಹಾಗೂ ಹೊಸಕನ್ನಂಬಾಡಿಯ ಬಳಿಯ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಬರಬೇಕಿದ್ದು, ಸೂಕ್ತ ರಸ್ತೆ ಇಲ್ಲದಿರುವುದು ಪ್ರವಾಸಿಗರನ್ನು ಇನ್ನಿಲ್ಲದಂತೆ ಕಾಡಿದೆ. ವಾರಾಂತ್ಯದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತವೆ.

ಇಲ್ಲಿನ ರಸ್ತೆಯನ್ನು ಪುನರ್‌ ನಿರ್ಮಾಣ ಅಥವಾ ದುರಸ್ತಿ ಮಾಡದ ಕಾರಣ ರಸ್ತೆ ಬದಿಯಲ್ಲಿನ ಗ್ರಾಮಗಳ ಮನೆಗಳು ದೂಳಿನಿಂದ ತುಂಬಿಹೋಗುತ್ತವೆ.

‘ಈ ಹಾಳು ಬಿದ್ದ ರಸ್ತೆಯಿಂದ ಏಳುವ ದೂಳಿನಿಂದ ನಮ್ಮ ಮನೆಯಲ್ಲೆಲ್ಲ ಕಸ ತುಂಬಿದ್ದು, ವಾಸ ಮಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬಸ್ತಿಹಳ್ಳಿ ಮತ್ತು ಹೊಸಕನ್ನಂಬಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಪ್ರವಾಸಿಗರು, ಗ್ರಾಮಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

‘ಸಂತಸದಿಂದ ಕೆಆರ್‌ಎಸ್ ಹಿನ್ನೀರು ಪ್ರದೇಶ ನೋಡಲು ಬಂದೆವು. ಆದರೆ ಇಷ್ಟೊಂದು ಹಾಳಾಗಿ ಹೋಗಿರುವ ಈ ರಸ್ತೆ ಸಂಚಾರದಿಂದ ನಮಗೆ ತುಂಬ ಬೇಸರ ತರಿಸಿದೆ. ನಮ್ಮ ಸರ್ಕಾರಕ್ಕೆ ಕಣ್ಣಿಲ್ಲವೇ’ ಎಂದು ಪ್ರವಾಸಿಗರಾದ ನಾರಾಯಣಸ್ವಾಮಿ, ವರಲಕ್ಷ್ಮಿ, ಬಾಲರಾಜು, ಚಿಂತನ್‌, ಲೀಲಾವತಿ ಪ್ರಶ್ನಿಸಿದರು.

ಎಲೆಕೆರೆ–ಹ್ಯಾಂಡ್‌ಪೋಸ್ಟ್‌ನಿಂದ ಶ್ಯಾದನಹಳ್ಳಿ ಗೇಟ್‌, ಹರವು, ಅರಳಕುಪ್ಪೆ, ಸೀತಾಪುರ ಗೇಟ್‌, ಕಟ್ಟೇರಿ ಗ್ರಾಮ, ಕಟ್ಟೇರಿ ಹೊಸಬಡಾವಣೆಯ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ನೂರು ಬಾರಿ ಯೋಚಿಸುವಂತಾಗಿದೆ. ಬಹಳಷ್ಟು ಸವಾರರು ಬಿದ್ದು ಕಾಲು ಕೈ ಮುರಿದುಕೊಂಡಿದ್ದಾರೆ. ಅಲ್ಲದೆ, ಅಪಘಾತಗಳು ಸಂಭವಿಸಿ ಸಾವಿನ ಅಂಚಿಗೆ ತಲುಪಿರುವ ಉದಾರಣೆಗಳು ಸಾಕಷ್ಟಿವೆ. ಗುಂಡಿಬಿದ್ದು ದೂಳು ಏಳುವ ಈ ರಸ್ತೆಯಲ್ಲಿ ಸಂಚಾರ ಹರಸಾಹಸವೇ ಸರಿ.

ಎಲೆಕೆರೆ–ಹ್ಯಾಂಡ್‌ಪೋಸ್ಟ್‌ ನಡುವೆ ಇರುವ ವಿ.ಸಿ.ನಾಲೆಯ ಸೇತುವೆ ರಸ್ತೆಯಂತೂ ಹಳ್ಳಗಳಿಂದ ತುಂಬಿ ಹೋಗಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ನಾಲೆಗೆ ಬೀಳುವುದು ನಿಶ್ಚಿತ. ಹ್ಯಾಂಡ್‌ಪೋಸ್ಟ್‌ನಿಂದ ಹೊರಟು ಹರವು ಗ್ರಾಮ ಪ್ರವೇಶಿಸುತ್ತಿದ್ದಂತೆ ಮತ್ತಷ್ಟು ಹದಗೆಟ್ಟ ರಸ್ತೆ ಸ್ವಾಗತಿಸುತ್ತದೆ. ಹರವು ಗ್ರಾಮ ಬಿಟ್ಟು ಅರಳಕುಪ್ಪೆ ಗ್ರಾಮಕ್ಕೆ ಪ್ರವೇಶಿಸುವ ಮುನ್ನವೇ ಗುಂಡಿಬಿದ್ದು ಅಧ್ವಾನ ಎದ್ದಿರುವ ಈ ರಸ್ತೆಯಲ್ಲಿ ಸಂಚಾರ ತುಂಬಾ ಕಷ್ಟವಾಗಿದೆ.

ಅರಳಕುಪ್ಪೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಬಳಿಯ ಈ ರಸ್ತೆ ಸ್ಥಿತಿಯನ್ನಂತೂ ಹೇಳತೀರದು. ಈ ರಸ್ತೆಯ ಸ್ವಲ್ಪ ತಿರುವಿನಲ್ಲಿರುವ ಸಣ್ಣ ಪ್ರಮಾಣದ ಸೇತುವೆ ರಸ್ತೆ ಮತ್ತಷ್ಟು ಹದಗೆಟ್ಟು ವಾಹನ ಸವಾರಿ ದುಸ್ತರವಾಗಿದೆ. ಕಟ್ಟೇರಿ ಗ್ರಾಮದ ಮಧ್ಯದಲ್ಲಿರುವ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಬಿದ್ದಿದೆ. ಮುದುಕರು, ಮಕ್ಕಳು, ಬೈಕ್, ಸೈಕಲ್ ಸವಾರರು ಬಿದ್ದು ಬಿದ್ದು ಎದ್ದಿದ್ದಾರೆ. ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

2016ರಲ್ಲೇ ಮಂಜೂರಾತಿ: ಮಂಡ್ಯ–ಮೈಸೂರು ಮುಖ್ಯ ರಸ್ತೆಯ ತೂಬಿನಕೆರೆ ಸಮೀಪದಿಂದ ಪಾಂಡವಪುರದ ಮೂಲಕ (ಕೆಆರ್‌ಎಸ್‌ ಸಂಪರ್ಕ ರಸ್ತೆ) ತಾಲ್ಲೂಕಿನ ಗಡಿಭಾಗದಂಚಿನಲ್ಲಿರುವ ಹೊಸಸಾಯಪನಹಳ್ಳಿ ವರೆಗೂ ರಸ್ತೆ ಅಭಿವೃದ್ದಿಗೆ 2016ರಲ್ಲಿ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಕೆಲವೇ ಕೆಲವು ಆಯ್ದಭಾಗಗಳ ಅಲ್ಲಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಆದರೆ, ಈ ಮುಖ್ಯರಸ್ತೆಯ ಬಹುತೇಕ ಭಾಗಗಳು ಅಭಿವೃದ್ಧಿಯಾಗದೇ ಹಾಗೆ ಉಳಿದಿದೆ.

ಮಂಜೂರಾತಿ ಹಣ ವಾಪಸ್‌?
ದೊಡ್ಡಬ್ಯಾಡರಹಳ್ಳಿ, ಚಿಕ್ಕಬ್ಯಾಡರಹಳ್ಳಿಯಿಂದ ಹೊಸಸಾಯಪನಹಳ್ಳಿ ವರೆಗಿನ ರಸ್ತೆಯ ಆಯ್ದ ಭಾಗಗಳ ಅಭಿವೃದ್ಧಿಗಾಗಿ ಕೇಂದ್ರ ಪರಿಹಾರ ನಿಧಿಯಿಂದ ಸುಮಾರು ₹10 ಕೋಟಿ 2016–17ರ ಸಾಲಿನಲ್ಲಿ ಬಿಡುಗಡೆಯಾಗಿತ್ತು. ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲು ವಿಳಂಬ ಮಾಡಿದ್ದ ಕಾರಣ, ಈ ಮಂ‌ಜೂರಾತಿ ಹಣ ವಾಪಸ್‌ ಹೋಗಿದೆ ಎನ್ನಲಾಗಿದೆ.

ತೂಬಿನಕೆರೆಯಿಂದ ಹೊಸಸಾಯಪನಹಳ್ಳಿವರೆಗಿನ ಮುಖ್ಯ ರಸ್ತೆ ಅಭಿವೃದ್ಧಿಯನ್ನು ಪಿಡಬ್ಲ್ಯುಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿಯ ಗುತ್ತಿಗೆಯನ್ನು ಗುತ್ತಿಗೆದಾರರೊಬ್ಬರು ಪಡೆದಿದ್ದಾರೆ. ಆದರೆ, ಅವರು ಶೀಘ್ರ ಕಾಮಗಾರಿ ಆರಂಭಿಸಬೇಕಿದೆ.

ಕುಂಟುತ್ತಿರುವ ರಸ್ತೆ ಕಾಮಗಾರಿ!

ಪಾಂಡವಪುರ ಪಟ್ಟಣದಿಂದ–‌ಎಲೆಕೆರೆ ಹ್ಯಾಂಡ್‌ಪೋಸ್ಟ್‌ವರೆಗೆ (ಕೆಆರ್‌ಎಸ್‌ ರಸ್ತೆ) ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದೆ. ಕಳೆದ 2 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಈ ಕಾಮಗಾರಿ 6 ತಿಂಗಳ ಹಿಂದಷ್ಟೇ ಪ್ರಾರಂಭಗೊಂಡಿತ್ತು. ಆಮೆ ವೇಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸಂಚಾರ ಸಾಹಸದಿಂದ ಕೂಡಿದೆ.

ಮಣ್ಣಿನ ಲಾರಿಗಳಿಂದ ಮತ್ತಷ್ಟು ಸಮಸ್ಯೆ
ಮೈಸೂರು–ಬೆಂಗಳೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆ ಕಾಮಗಾರಿಗೆ ಅರಳಕುಪ್ಪೆ‌, ಕಟ್ಟೇರಿ, ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿ ಲಾರಿಗಳ ಮೂಲಕ ಮಣ್ಣನ್ನು ಸಾಗಿಸಲಾಗುತ್ತಿದೆ. ನಿತ್ಯ ಮಣ್ಣು ತುಂಬಿದ ಹತ್ತಾರು ಲಾರಿಗಳು ಇಲ್ಲಿ ಓಡಾಡುತ್ತಿವೆ.

ಈಗಾಗಲೇ ತೀರ ಹದಗೆಟ್ಟು ಹೋಗಿರುವ ಈ ರಸ್ತೆಗಳ ಮೇಲೆ ಮಣ್ಣು ತುಂಬಿದ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹದಗೆಟ್ಟು ಹೋಗುತ್ತಿವೆ. ಅಲ್ಲದೇ ರಸ್ತೆ ಬದಿಯ ಗ್ರಾಮಗಳ ಮನೆಗಳು ದೂಳುಮಯವಾಗುತ್ತಿವೆ. ಈಗ ಗ್ರಾಮಸ್ಥರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು