ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಕ್ವಾರಿ ಪ್ರದೇಶಕ್ಕೆ ಭೇಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ
Last Updated 2 ಜನವರಿ 2021, 14:27 IST
ಅಕ್ಷರ ಗಾತ್ರ

ಮಂಡ್ಯ: ‘ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಹಲವು ದೂರು ಕೇಳಿ ಬಂದಿವೆ. ಯಾರೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಶನಿವಾರ ಹೇಳಿದರು.

ವಿವಿಧೆಡೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ನಂತರ ಕೆಆರ್‌ಎಸ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

‘ಕಾನೂನು ಬಾಹಿರವಾಗಿ ನಡೆಯುತ್ತಿರುವ ಗಣಿಚಟುವಟಿಕೆಯನ್ನು ತಡೆಯುವುದು ಮೊದಲ ಆದ್ಯತೆಯಾಗಿದೆ. ನಾನು ಗಣಿಗಾರಿಕೆ ಪ್ರದೇಶಗಳಿಗೆ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರು, ಹೋರಾಟಗಾರರು ಅಕ್ರಮ ಚಟುವಟಿಕೆಯ ಮಾಹಿತಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರು ಕೂಡ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಶೀಘ್ರ ಅಕ್ರಮ ಗಣಿಚಟುವಟಿಕೆಗೆ ಅಂತ್ಯ ಹಾಡಲಾಗುವುದು’ ಎಂದರು.

‘ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ, ಮುಂಡುಗದೊರೆ ಪ್ರದೇಶದ ಅರಣ್ಯ ಭಾಗದಲ್ಲಿ ಗಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಸಮಗ್ರವಾಗಿ ಸರ್ವೆ ಮಾಡಿ ವಿಭಾಗ ಮಾಡಲಾಗುವುದು. ಸದ್ಯ ಅರಣ್ಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ’ ಎಂದು ಹೇಳಿದರು.

ಡ್ರೋಣ್‌ ಸರ್ವೆಗೆ ಸೂಚನೆ: ‘ಬೇಬಿಬೆಟ್ಟ ಸೇರಿದಂತೆ ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಚಟುವಟಿಕೆ ಬಗ್ಗೆ ಡ್ರೋಣ್‌ ಕ್ಯಾಮೆರಾ ಮೂಲಕ ಸರ್ವೆ ನಡೆಸಿ ತಿಂಗಳಾಂತ್ಯಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕಲ್ಲು ಕ್ವಾರಿ ಮತ್ತು ಕ್ರಷರ್‌ ನಡೆಸುವವರ ಸಮಸಕ್ಷಮದಲ್ಲಿ ಸರ್ವೆ ಕಾರ್ಯ ನಡೆಯಲಿದೆ’ ಎಂದರು.

‘ಸರ್ಕಾರಕ್ಕೆ ರಾಯಧನ ಕಟ್ಟದೆ ಗಣಿ ಚಟುವಟಿಕೆ ನಡೆಸುತ್ತಿರುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗೌರವಧನ ಪಾವತಿ ಮಾಡದ ಕಲ್ಲು ಗಣಿ ಕಂಪನಿಗಳನ್ನು ಬಂದ್‌ ಮಾಡಿಸಲಾಗುವುದು’ ಎಂದು ಹೇಳಿದರು.

‘ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಅಪಾಯ ಇದೆಯೇ, ಇಲ್ಲವೇ ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುವುದು. ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ನಿಪುಣರ ತಂಡದಿಂದ ವರದಿ ಪಡೆದು, ಆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕ್ವಾರಿ ಪ್ರದೇಶಗಳ ಪರಿಶೀಲನೆ: ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಟಿ.ಎಂ.ಹೊಸೂರು, ಹಂಗರಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿ ಪ್ರದೇಶ ವೀಕ್ಷಣೆ ಮಾಡಿದರು. ನಂತರ ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿ ಚಟುವಟಿಕೆಯನ್ನು ವೀಕ್ಷಣೆ ಮಾಡಿ ‘ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿ ಚಟುವಟಿಕೆಯಿಂದ ಪ್ರಾಕೃತಿಕ ಸಂಪನ್ಮೂಲವನ್ನು ರಕ್ಷಣೆ ಮಾಡಲಾಗುವುದು’ ಎಂದರು.

ಗಣಿ ಚಟುವಟಿಕೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ಸ್ಥಳೀಯರು ಸಚಿವರಿಗೆ ದೂರು ಸಲ್ಲಿಸಿದರು. ಜನರ ಅಹವಾಲು ಸ್ವೀಕರಿಸಿದ ಸಚಿವರು, ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಜಲ್ಲಿ ಕ್ರಷರ್‌ ಸ್ಥಾಪನೆ, ಅರಣ್ಯ ನಾಶ, ಪರಿಸರ ನಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಜೊತೆಯಲ್ಲಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಅವರಿಗೆ ಸೂಚಿಸಿದರು. ‘ಅಕ್ರಮ ಚಟುವಟಿಕೆ ತಡೆಯದ ಅಧಿಕಾರಿಗಳ ವಿರುದ್ದ ನೇರವಾಗಿ ನನಗೆ ದೂರು ಕೊಡಿ’ ಎಂದು ಸಚಿವರು ಹೇಳಿದರು.

ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ವಿ.ರೂಪಾ ಮುಖಂಡರಾದ ಮೋಹನಕುಮಾರ್‌, ಪ್ರಿಯಾ ರಮೇಶ್‌ ಇತರರು ಇದ್ದರು.

ಅಧಿಕಾರಿಗಳ ವಿರುದ್ಧ ಸಚಿವರಿಗೆ ದೂರು
ಶ್ರೀರಂಗಪಟ್ಟಣ:
ತಾಲ್ಲೂಕಿನ ಹಂಗರಹಳ್ಳಿ, ಮುಂಡುಗದೊರೆ, ಕಾಳೇನಹಳ್ಳಿ, ಚನ್ನನಕೆರೆ ಇತರೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರನ್ನು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ 65ಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳು ನಡೆಯುತ್ತಿವೆ. ಈ ಪೈಕಿ 14 ಜಲ್ಲಿ ಕ್ರಷರ್‌ಗಳಿಗೆ ಮಾತ್ರ ಅನುಮತಿ ಪಡೆದಿವೆ. 35 ಮಂದಿ ಮಾತ್ರ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದಾರೆ. ಆದರೆ 250ಕ್ಕೂ ಹೆಚ್ಚು ಕಡೆ ಕಲ್ಲು ಕ್ವಾರಿಗಳು ನಡೆಯುತ್ತಿವೆ. ಕೆಲವೆಡೆ ಅರಣ್ಯ ಹಾಗೂ ಸರ್ಕಾರಿ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮ ಕುರಿತು 10ಕ್ಕೂ ಹೆಚ್ಚು ಬಾರಿ ದೂರು ನೀಡಿದ್ದೇವೆ. ಆದರೂ ಅರಣ್ಯ, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದ ದೂರಿದರು.

ಮಳವಳ್ಳಿಗೆ ಸಂಪರ್ಕ ಕಲ್ಪಿಸುವ ವಿಶ್ವೇಶ್ವರಯ್ಯ ಸಂಪರ್ಕ ನಾಲೆಗೆ 1200 ಮೀಟರ್‌ ಸುರಂಗ ಕೊರಯಲಾಗಿದೆ. ಈ ಸುರಂಗದ ಆಸುಪಾಸಿನಲ್ಲಿ ಕೂಡ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ ಉದ್ಯಮ ನಡೆಯುತ್ತಿದೆ. ಕಲ್ಲು ಗಣಿಗಾರಿಕೆ ನಡೆಸುವವರು ಬೃಹತ್‌ ಪ್ರಮಾಣದಲ್ಲಿ ಸ್ಫೋಟ ನಡೆಸುತ್ತಿದ್ದು, ಸುರಂಗಕ್ಕೆ ಅಪಾಯ ಎದುರಾಗಿದೆ ಎಂದರು.

ಕಲ್ಲು ಕ್ವಾರಿ ನಡೆಸುವವರು ಟಿ.ಎಂ. ಹೊಸೂರು ಸಮೀಪದ ಕಾಳೇನಹಳ್ಳಿ ಬಳಿ ಇರುವ ಜೋಡಿ ಕೆರೆಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಅರಣ್ಯದಲ್ಲಿ ಮರಗಳ ಹನನವಾಗುತ್ತಿದೆ. ವನ್ಯಜೀವಿಗಳ ಆವಾಸ ಸ್ಥಾನ ನಾಶವಾಗುತ್ತಿದೆ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಮುಖಂಡರಾದ ಡಿ.ಎಸ್‌. ಚಂದ್ರಶೇಖರ್‌, ನಾಗೇಂದ್ರಸ್ವಾಮಿ, ಗಂಜಾಂ ರವಿಚಂದ್ರ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT