ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಕಚೇರಿಗೆ ಮುತ್ತಿಗೆ ಯತ್ನ: ಬಂಧನ

Last Updated 9 ಜುಲೈ 2019, 15:57 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಒಣಗುತ್ತಿರುವ ಸಾವಿರಾರು ಎಕರೆ ಕಬ್ಬು ಬೆಳೆಗೆ ನೀರು ಹರಿಸಬೇಕು. ಇಲ್ಲವೇ ಬೆಳೆ ನಷ್ಟ ಪರಿಹಾರ ನೀಡುವುದಾಗಿ ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ದೇಶದ ಜನರು ನೆಮ್ಮದಿಯಿಂದ ಜೀವನ ಮಾಡಲು ಮೂರು ಹೊತ್ತು ಊಟ ಅಗತ್ಯವಾಗಿದೆ. ನಮಗೆ ಊಟಕ್ಕೆ ಬೇಕಾದ ಆಹಾರ ಉತ್ಪಾದನೆ ಮಾಡುವ ರೈತ ಸಂಕಷ್ಟಕ್ಕೆ ಸಿಲುಕಿದಾಗ ರಕ್ಷಣೆ ಮಾಡದೆ ಸರ್ಕಾರಗಳು ಬೇಜವಾಬ್ದಾರಿ ತೋರಿಸುತ್ತಿವೆ. ಪ್ರಸ್ತುತ ಮುಂಗಾರು ವಿಫಲವಾಗಿದ್ದು, ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಮಾಡುವ ಉದ್ದೇಶದಿಂದ ನೀರು ಹರಿಸಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರ್ತವ್ಯ ವಿಮುಖವಾಗಿ ರಾಜಕೀಯ ಮೇಲಾಟ ಪ್ರದರ್ಶನದ ಮೂಲಕ ರೈತ ಮತ್ತು ಜನವಿರೋಧಿ ಆಡಳಿತ ನಡೆಸಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ತಾವು ಬೆಳೆದ ಬೆಳೆ ಸಂಪೂರ್ಣ ಒಣಗುತ್ತಿದ್ದು, ಕಣ್ಣಿನಿಂದ ನೋಡಲಾಗದೆ ನರಳುತ್ತಿದ್ದಾನೆ. ಆದರೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ನಮ್ಮದು ರೈಪರಪರ ಸರ್ಕಾರ ಎಂದು ಹೇಳಿಕೊಳ್ಳುವ ಮಂತ್ರಿಗಳು ಪ್ರಾಮಾಣಿಕವಾಗಿ ರೈತರ ನೆರವಿಗೆ ಧಾವಿಸುತ್ತಿಲ್ಲ. ಕೂಡಲೇ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ರೈತರ ಸಂಕಷ್ಟದ ಪರಿಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟು, ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಒಂದು ಎಕರೆ ಬೆಳೆ ನಾಶಕ್ಕೆ ₹ 50 ಸಾವಿರ ಬೆಳೆ ನಷ್ಟ ಪರಿಹಾರ ನೀಡುವುದಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತರು ಅರೆಬೆತ್ತಲೆಯಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮೆರವಣಿಗೆಯಲ್ಲಿ ತೆರಳಿದರು. ನಂತರ ರೈತರ ಸಂಕಷ್ಟ ಪರಿಹಾರ ಮಾಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮತ್ತು ಸಂಸದರ ಕಚೇರಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಮರಳಿಗ, ಉಪಾಧ್ಯಕ್ಷ ಬಂಡಿಹೊಳೆ ರಮೇಶ್, ಪ್ರಧಾನ ಕಾರ್ಯದರ್ಶಿ ಆಟೋ ಶಿವು, ಮುಖಂಡರಾದ ಬಿ.ಆನಂದ, ಮೇನಾಗ್ರ ಸೋಮಶೇಖರ್, ನಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT