ಸೋಮವಾರ, ಜನವರಿ 25, 2021
15 °C

ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಆಗ್ರಿಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕಾರ್ಮಿಕ, ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಮೂರು ಕೃಷಿ ಕಾನೂನುಗಳನ್ನು ವಾಪಸ್‌ ಪಡೆಯಬೇಕು, ವಿದ್ಯುತ್‌ ಮಸೂದೆ ಹಿಂಪಡೆಯಬೇಕು, ಎಲ್ಲಾ ರೀತಿಯ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು. ಆದಾಯ ತೆರಿಗೆ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ ₹7,500 ನಗದು ಹಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪೂರ್ವ ಸಿದ್ಧತೆಗಳಿಲ್ಲದೆ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಜನರ ಜೀವನದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಇಷ್ಟಲ್ಲದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಲಾಗಿದೆ. ಇದರಿಂದ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ, ಇಷ್ಟೆಲ್ಲಾ ಆದರೂ ಏನು ಆಗಲೇ ಇಲ್ಲ ಎಂಬಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ತಿಸುತ್ತಿರುವುದು ದುರಂತ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಯೊಬ್ಬರಿಗೂ 10 ಕೆ.ಜಿ ಆಹಾರ ಧಾನ್ಯ ಉಚಿತವಾಗಿ ನೀಡಬೇಕು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಾರ್ಷಿಕ 200 ದಿನಗಳಿಗೆ ನಿಗದಿಗೊಳಿಸಬೇಕು, ₹700 ವೇತನ ನೀಡಬೇಕು. ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು, ಹೊಸ ಪಿಂಚಣಿ ಯೋಜನೆ ರದ್ದುಪಡಿಸಬೇಕು, ಹಳೇ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಯೋಜನೆ ವಿಸ್ತರಿಸಬೇಕು, ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅನುಮತಿ ನೀಡುವ ಮೂಲಕ ಎಪಿಎಂಸಿ ವ್ಯವಸ್ಥೆಯನ್ನು ನಿರ್ನಾಮ ಮಾಡಲಾಗುತ್ತಿದೆ. ಅಲ್ಲದೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹಾಗೂ ಪಡಿತರ ವ್ಯವಸ್ಥೆಯನ್ನು ನಾಶಗೊಳಿಸಲಾಗುತ್ತಿದೆ. ದೇಶದ ಬಹುಸಂಖ್ಯೆಯ ಜನರಿಗೆ ಜೀವನನಾಧಾರವಾಗಿರುವ ವ್ಯವಸ್ಥೆಯನ್ನೇ ನಾಶಪಡಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ 2ನೇ ತಿಂಗಳಿಗೆ ಕಾಲಿಟ್ಟಿದೆ. ಇಷ್ಟಾದರೂ ಕಾಯ್ದೆಗಳನ್ನು ವಾಪಸ್‌ ಪಡೆಯದೆ ರೈತರೊಂದಿಗೆ ಮಾತುಕತೆ ನಡೆಸದೆ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷ ಎಸ್.ಬಿ.ರಾಮು, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಲಕ್ಷ್ಮಿ, ಶ್ರೀನಿವಾಸ್, ವೆಂಕಟಲಕ್ಷ್ಮಿ, ಮನು, ಭಾಗ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.