ಶುಕ್ರವಾರ, ಅಕ್ಟೋಬರ್ 22, 2021
29 °C

ಮರ್ಯಾದೆಗೇಡು ಹತ್ಯೆ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರಾಜ್ಯದಲ್ಲಿ ನಡೆದಿರುವ ಹಲವು ಮರ್ಯಾದೆ ಗೇಡು ಹತ್ಯೆ ಪರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಉಗ್ರಪ್ಪ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿದನೆಂಬ ಕಾರಣಕ್ಕೆ ಕೆಲ ಸಂಘಟನೆಗಳ ಕಾರ್ಯಕರ್ತರು ಯುವತಿಯ ತಂದೆಯ ಜೊತೆ ಸೇರಿ ಆ ಯುವಕನ ಮರ್ಯಾದೆ ಗೇಡು ಹತ್ಯೆ ಮಾಡಿದ್ದಾರೆ. ಯಾದಗರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಪೆಟ್ರೋಲ್ ಸುರಿದು ಮಹಿಳೆಯ ಕೊಲೆ ಮಾಡಿದ ಘಟನೆ ನಡೆದಿದೆ. ಇಂತಹ ಘಟನೆ ನಡೆದಿದ್ದರೂ ಆರೋಪಿಗಳಿಗೆ ಸರಿಯಾಗಿ ಶಿಕ್ಷೆಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂವಿಧಾನ ಅಂತರ್‌ಧರ್ಮೀಯ, ಅಂತರ್ಜಾತಿ ವಿವಾಹಕ್ಕೆ ರಕ್ಷಣೆ ನೀಡುತ್ತದೆ. ಆದರೆ ಪೊಲೀಸ್ ವ್ಯವಸ್ಥೆ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅಂತರ್‌ ಧರ್ಮೀಯ ವಿವಾಹಗಳಿಗೆ ರಕ್ಷಣೆ ನಿಡಲು ಸಾಧ್ಯವಾಗುತ್ತಿಲ್ಲ. ಮರ್ಯಾದೆ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ನಿಷೇಧಿಸುವ ಕಾನೂನು ಜಾರಿಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ವಿಶೇಷ ವಿವಾಹ ಕಾಯಿದೆ ಬಲಪಡಿಸಬೇಕು. ಸಂವಿಧಾನ ಬದ್ದ ಆಯ್ಕೆ ಹಕ್ಕುಗಳ ಕುರಿತು ಪ್ರಚಾರ ನೀಡಬೇಕು. ಮಹಿಳೆಯರಿಗೆ ದಲಿತರಿಗೆ ಅಲ್ಪ ಸಂಖ್ಯಾತರಿಗೆ ಘನತೆ ಬದುಕನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಮೂರ್ತಿ ವರ್ಮಾ ಸಮಿತಿ, ಉಗ್ರಪ್ಪ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಬೇಕು. ಯಾದಗಿರಿ ಪ್ರಕರಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮವಹಿಸಬೇಕು. ಸಾಕ್ಷಿಗಳ ನಾಶವಾಗದಂತೆ ಕ್ರಮವಹಿಸಬೇಕು. ಸಂತ್ರಸ್ತೆಗೆ ಸಿಗಬೇಕಾದ ನೆರವು ಮತ್ತು ಪರಿಹಾರ ದೊರೆಯಬೇಕು. ಈ ಎರಡು ಘಟನೆಗಳ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ ಮಾತನಾಡಿ ‘ಯಾದಗರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿದ ಯುವಕರ ಗುಂಪು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ, ಇದನ್ನು ಪ್ರತಿಭಟಿಸಿದ ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಇದೇ ಜಿಲ್ಲೆಯ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಥಳಿಸಿದ ಘಟನೆಯು ಕೆಲವು ದಿನದ ಹಿಂದೆ ನಡೆದಿದೆ. ಇಂತಹ ಕೃತ್ಯಗಳಿಗೆ ಕೊನೆ ಯಾವಾಗ’ ಎಂದು ‌ಪ್ರಶ್ನಿಸಿದರು.

ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಸುನಿತಾ, ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಸುನೀತಾ, ಕಾರ್ಯದರ್ಶಿ ಸುಶೀಲಾ, ಖಜಾಂಚಿ ಮಂಜುಳಾ, ಜೈಶೀಲಾ, ಪ್ರೇಮ, ಲತಾ, ರಾಣಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.