ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

Published 21 ಮಾರ್ಚ್ 2024, 12:17 IST
Last Updated 21 ಮಾರ್ಚ್ 2024, 12:17 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ರೈತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು, ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಬವಣೆ ಶುರುವಾಗಿದೆ. ದೀರ್ಘ ಕಾಲೀನ ಬೆಳೆಗಳಾದ ಕಬ್ಬು, ತೆಂಗು, ಅಡಿಕೆ, ಬಾಳೆ ಇತರ ಬೆಳೆಗಳು ಒಣಗುತ್ತಿವೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 78 ಅಡಿ ನೀರಿನ ಸಂಗ್ರಹ ಇದ್ದಾಗಲೂ ನಾಲೆಗಳಿಗೆ ನೀರು ಹರಿಸಿರುವ ಉದಾಹರಣೆ ಇದೆ. ಸದ್ಯ 80 ಅಡಿಗೂ ಹೆಚ್ಚು ನೀರಿನ ಸಂಗ್ರಹ ಇದ್ದರೂ ನಾಲೆಗಳಿಗೆ ನೀರು ಹರಿಸದೆ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಕೆ.ಎಸ್‌. ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೆಆರ್‌ಎಸ್‌ ಜಲಾಶಯವನ್ನು ತಮಿಳುನಾಡಿಗೆ ನೀರು ಹರಿಸುವ ತೊಟ್ಟಿ ಮಾಡಿಕೊಂಡಿದೆ. ಬೆಂಗಳೂರು ನಗರಕ್ಕೆ ಪ್ರಾಧಿಕಾರ ಗೊತ್ತುಪಡಿಸಿರುವ ನೀರಿನ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚು ನೀರು ಕೊಡಲಾಗುತ್ತಿದೆ. ಆದರೆ ಮಂಡ್ಯ ಜಿಲ್ಲೆಯ ಜನರಿಗೆ ನೀರು ಇಲ್ಲದಿದ್ದರೂ ನೀರು ಕೊಡುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.

ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಮಾತನಾಡಿ, ಕೆಆರ್‌ಎಸ್‌ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸಹಸ್ರಾರು ಎಕರೆ ಪ್ರದೇಶದಲ್ಲಿರುವ ಬೆಳೆ ಒಣಗುತ್ತಿದೆ. ವಿಸಿ ನಾಲೆಯ ಆಧುನೀಕರಣದ ನೆಪದಲ್ಲಿ ನಾಲೆಗಳಿಗಳಿಗೆ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಾಮಗಾರಿ ನಿಲ್ಲಿಸಿ ವಿಸಿ ಸೇರಿದಂತೆ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹದೇವಪುರ ಕೃಷ್ಣ, ಖಜಾಂಚಿ ಪುಟ್ಟಮಾದು, ಕೆ.ಶೆಟ್ಟಹಳ್ಳಿ ಮಹಲಿಂಗು, ಬಲ್ಲೇನಹಳ್ಳಿ ಮಂಜುನಾಥ್‌, ಮೇಳಾಪುರ ಜಯರಾಮೇಗೌಡ, ದರಸಗುಪ್ಪೆ ಸುರೇಶ್‌, ಪುರುಷೋತ್ತಮ, ಮಹದೇವು, ಮಹೇಶ್‌, ಕೆಂಪೇಗೌಡ, ಶ್ರೀಧರ್‌, ರಾಮಕೃಷ್ಣ, ಶಂಕರ್‌, ಹೊಸೂರು ಶಿವರಾಜು, ಹನುಮಂತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT