ಹಲಗೂರು: ‘ಸಮೀಪದ ಕೃಷ್ಣೇಗೌಡನದೊಡ್ಡಿ ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಕಾಟಾಚಾರಕ್ಕೆ ನಡೆಯುತ್ತಿದೆ’ ಎಂದು ಆರೋಪಿಸಿದ ಸಾರ್ವಜನಿಕರು ಭಾನುವಾರ ಕೆರೆ ತಡದಲ್ಲಿ ಪ್ರತಿಭಟನೆ ನಡೆಸಿದರು.
ಕೃಷ್ಣೇಗೌಡನದೊಡ್ಡಿ ರೈತರು ಮತ್ತು ಸಾರ್ವಜನಿಕರು ಕೆರೆ ಹೂಳೆತ್ತುವ ಜಾಗಕ್ಕೆ ಬಂದು ಜೆಸಿಬಿ ಯಂತ್ರ, ಟಿಪ್ಪರ್ ಲಾರಿಗಳಿಂದ ಕೆಲಸ ಮಾಡದಂತೆ ತಡೆಯೊಡ್ಡಿದರು.
‘2022-23ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ₹ 28 ಲಕ್ಷ ವೆಚ್ಚದಲ್ಲಿ ಕೆರೆಯ ಹೂಳು ತೆಗೆಯಲಾಗಿತ್ತು. 2024-25 ನೇ ಸಾಲಿನಲ್ಲಿ ₹ 60 ಲಕ್ಷ ಅನುದಾನದ ಬಿಡುಗಡೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಕೆರೆ ಹೂಳು ತೆಗೆಯುವ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಳೆದ ಸಾಲಿನಲ್ಲಿ ಕೆಲಸ ಮಾಡಿದ್ದ ಜಾಗದಲ್ಲೇ ಈಗಲೂ ಗಿಡಗಂಟಿ ಕಿತ್ತು ಹಾಕಿದ್ದು, ಕಾಟಾಚಾರಕ್ಕೆ ಮಣ್ಣು ಅಗೆದು, ನಿರ್ದಿಷ್ಟಪಡಿಸಿದ ಕೆರೆಯ ಹೂಳು ತೆಗೆಯದೇ ಬಿಲ್ ಪಡೆಯಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
‘ಬೇಸಿಗೆ ಕಾಲದಲ್ಲಿ ಕೆರೆಯ ಹೂಳು ತೆಗೆಯುವ ಕಾರ್ಯ ಮುಗಿಸಿದ್ದರೆ, ಮಳೆಗಾಲದಲ್ಲಿ ಕೆರೆ ತುಂಬಿಸಬಹುದಿತ್ತು. ಆದರೆ ಮಳೆಗಾಲದಲ್ಲಿ ಹೂಳು ತೆಗೆಯುವ ಕಾಮಗಾರಿ ಆರಂಭಿಸಿದ್ದು, ಕೆರೆ ತುಂಬಿಸಲು ಸಾಧ್ಯವಿಲ್ಲದಂತಾಗಿದೆ. ಪರಿಣಾಮವಾಗಿ ರೈತರ ಕೊಳವೆ ಬಾವಿಗಳ ಅಂತರ್ಜಲ ಮತ್ತಷ್ಟು ಕೆಳಕ್ಕೆ ಕುಸಿಯಲಿದ್ದು, ಮುಂದಿನ ದಿನಗಳಲ್ಲಿ ರೈತರು ಸಂಕಷ್ಟ ಎದುರಿಸಬೇಕಿದೆ’ ಎಂದು ರೈತರು ನೋವು ತೋಡಿಕೊಂಡರು.
‘ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸ್ಥಳಕ್ಕೆ ಬಂದು ಕಾಮಗಾರಿ ಸ್ಥಳವನ್ನು ಪರಿಶೀಲನೆ ನಡೆಸಬೇಕು. ಕಂದಾಯ ಇಲಾಖೆ ಸರ್ವೆಯರ್ ಮೂಲಕ ಕೆರೆಯನ್ನು ಅಳತೆ ಮಾಡಿಸಿ, ಗಡಿ ಗುರುತಿಸಿ ಕೆರೆಯ ಒತ್ತುವರಿ ತೆರವುಗೊಳಿಸಬೇಕು. ಕೆರೆಯಲ್ಲಿ ಹೂಳು ತೆಗೆಯುವ ನಿಗದಿತ ಜಾಗವನ್ನು ಗುರುತಿಸಿ, ಆ ಭಾಗದಲ್ಲಿ ಕೆರೆ ಹೂಳು ತೆಗೆಯುವ ಕಾಮಗಾರಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕರಲಕಟ್ಟೆ ಸುರೇಶ್, ಗ್ರಾಮದ ಮುಖಂಡರಾದ ಪುಟ್ಟೇಗೌಡ, ಶಂಕರ್, ಶ್ರೀನಿವಾಸ್, ಮಧು, ಮಹೇಶ್, ಬಸವರಾಜು, ತಿಮ್ಮಪ್ಪ, ಮೋದಿ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.