ಶನಿವಾರ, ಏಪ್ರಿಲ್ 17, 2021
31 °C
ಮಂಗಳವಾರ ಸಂಜೆಯ ನಂತರ ಬಸ್‌ಗಳಿಲ್ಲದೆ ಪರದಾಡಿದ ಪ್ರಯಾಣಿಕರು

ಮಂಡ್ಯ: ಒಂದು ದಿನ ಮುನ್ನವೇ ತಟ್ಟಿದ ಮುಷ್ಕರ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7 ರಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ಬಿಸಿ ಮಂಗಳವಾರವೇ ಪ್ರಯಾಣಿಕರಿಗೆ ತಟ್ಟಿದ್ದು, ಮಧ್ಯಾಹ್ನದ ನಂತರ ಬಸ್‌ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಊರಿಗೆ ತೆರಳಲು
ಪರದಾಡಿದರು.

ಮಂಡ್ಯ ವಿಭಾಗದಲ್ಲಿ ಮಂಗಳವಾರ ಶೇ 60 ರಷ್ಟು ಬಸ್‌ಗಳು ಮಾತ್ರ ರಸ್ತೆಗಳಿದಿದ್ದು, ಮಧ್ಯಾಹ್ನದ ನಂತರದ ಎಬಿ ಮಾರ್ಗಗಳು, ಹಾಲ್ಟಿಂಗ್‌ ಬಸ್‌ಗಳು ಘಟಕಗಳಿಂದ ತೆರಳಲಿಲ್ಲ. ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾದರೆ ಬುಧವಾರವೂ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮುಷ್ಕರಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಕಾರಣಕ್ಕೆ
ಮಂಗಳವಾರವೇ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಿಬ್ಬಂದಿ ಮುಷ್ಕರ ಆರಂಭಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಿತ್ಯ 345 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ 262 ಬಸ್‌ಗಳಷ್ಟೇ ರಸ್ತೆಗಿಳಿದಿದ್ದು, ಎಲ್ಲಾ ಬಸ್‌ಗಳು ಮಂಗಳವಾರ ರಾತ್ರಿ ಘಟಕಗಳಿಗೆ ಹಿಂದಿರುಗಿದವು. ಸಂಜೆ ನಂತರ ಬಸ್‌ಗಳಿಲ್ಲದೆ ಪ್ರಯಾಣಿಕರು ಖಾಸಗಿ ಬಸ್‌, ಆಟೋಗಳನ್ನು ಹಿಡಿಯಬೇಕಾಯಿತು.

ಮಳವಳ್ಳಿಗೆ ಅರ್ಧ ಗಂಟೆಗೆ ಒಂದರಂತೆ ಬಸ್‌ಗಳು ಇದ್ದವು. ಆದರೆ ಸಂಜೆ 4.45ಕ್ಕೆ ಮಳವಳ್ಳಿಗೆ ಒಂದು ಬಸ್‌ ಹೋಯಿತು. ನಂತರ 6.15 ರವರೆಗೆ ಯಾವುದೇ ಬಸ್‌ಗಳಿಲ್ಲದೆ ಪರದಾಡಬೇಕಾಯಿತು ಎಂದು ಪ್ರಯಾಣಿಕರೊಬ್ಬರು
ದೂರಿದರು.

‘ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಿಬ್ಬಂದಿ ಜೊತೆಗೆ ನಿರಂತರವಾಗಿ ಮನವೊಲಿಕೆ ಮಾಡಲಾಗುತ್ತಿದೆ. ಎಷ್ಟು ಮಂದಿ ಸಿಬ್ಬಂದಿ ಹಾಜರಾಗುತ್ತಾರೋ ಅದರ ಮೇಲೆ ಸಂಚಾರ ನಿರ್ಧಾರವಾಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‌ಕುಮಾರ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.